ತಮಗೂ ಮುಖ್ಯಮಂತ್ರಿಯಾಗುವ ಆಸೆ ಇದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದೇ ವೇಳೆ, ವಿಪಕ್ಷ ಬಿಜೆಪಿ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು (ಡಿ.6): ‘ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ಸಮಯ, ಸಂದರ್ಭ ಎಲ್ಲವನ್ನೂ ನಿರ್ಧಾರ ಮಾಡುತ್ತೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ‘ನೀವು ಕೂಡ ಸಿಎಂ ರೇಸ್ ನಲ್ಲಿ ಇದ್ದೀರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ಯಾಕೆ ಎಳೆದು ತರ್ತಾ ಇದ್ದೀರಾ? ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋ಼ಡೋಣ’ ಎಂದರು.

ಸಿಎಂ, ಡಿಸಿಎಂ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: 

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಂ, ಡಿಸಿಎಂ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಆಸೆ ಇರುತ್ತೆ. ಹಾಗೆಯೇ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ಯಾರು ಸಿಎಂ ಆಗಬೇಕು ಅಂತ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಟೀಕಾಪ್ರಹಾರ:

ಇದೇ ವೇಳೆ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಸಚಿವರು, ವಿಪಕ್ಷವಾಗಿ ಬಿಜೆಪಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಕೇವಲ ಭಾಷಣ ಬಿಗಿಯುವುದರಲ್ಲಿ ವಿಜಯೇಂದ್ರ, ಅಶೋಕ್, ಪ್ರಹ್ಲಾದ್ ಜೋಶಿ ಬ್ಯುಸಿ ಆಗಿದ್ದಾರೆ. ರೈತರ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸುತ್ತಿಲ್ಲ. ಕೇಂದ್ರದಲ್ಲಿ ಸಂಸದರು ರಾಜ್ಯದ ಪರ ಧ್ವನಿ ಎತ್ತುತ್ತಿಲ್ಲ. ಇವರಿಗೇನು ಜವಾಬ್ದಾರಿ ಇಲ್ವಾ? ಎಂದು ಅವರು ವಾಗ್ದಾಳಿ ನಡೆಸಿದರು.

ಈ ಹಿಂದೆ ಬಿಜೆಪಿ ಇದ್ದಾಗ ಜಗದೀಶ್ ಶೆಟ್ಟರ್, ಸದಾನಂದ ಗೌಡ ಎಲ್ಲರೂ ಸಿಎಂ ಆದರು. ಆದರೆ, ಅವರ ರೀತಿ ಕಿತ್ತಾಟ, ಗೊಂದಲ ನಮ್ಮಲ್ಲಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.