ಗ್ರಾಪಂ ಅಧ್ಯಕ್ಷರೊಬ್ಬರಿಗೆ ಸ್ಪರ್ಧಿಗಳಿಗೆ ನೀಡುವ ಪ್ರಮಾಣಪತ್ರಕ್ಕೆ ಸಹಿ ಮಾಡುವಂತೆ ಸಂಘಟಕರು ಕೋರಿ, ತಮ್ಮ ಬಳಿ ಇದ್ದ ನೀಲಿ ಇಂಕಿನ ಪೆನ್ ನೀಡಿದರು. ಆದರೆ ಅದನ್ನು ಪಡೆಯಲು ನಿರಾಕರಿಸಿದ ಗ್ರಾಪಂ ಅಧ್ಯಕ್ಷರು ತಮ್ಮ ಜೇಬಿನಲ್ಲಿದ್ದ ಹಸಿರು ಇಂಕಿನ ಪೆನ್ ತೆಗೆದು ಸಹಿ ಮಾಡಿದರು
ಕಾರ್ಯಕ್ರಮವೊಂದಕ್ಕೆ ಆಹ್ವಾನಿತರಾಗಿದ್ದ ಗ್ರಾಪಂ ಅಧ್ಯಕ್ಷರೊಬ್ಬರಿಗೆ ಸ್ಪರ್ಧಿಗಳಿಗೆ ನೀಡುವ ಪ್ರಮಾಣಪತ್ರಕ್ಕೆ ಸಹಿ ಮಾಡುವಂತೆ ಸಂಘಟಕರು ಕೋರಿ, ತಮ್ಮ ಬಳಿ ಇದ್ದ ನೀಲಿ ಇಂಕಿನ ಪೆನ್ ನೀಡಿದರು. ಆದರೆ ಅದನ್ನು ಪಡೆಯಲು ನಿರಾಕರಿಸಿದ ಗ್ರಾಪಂ ಅಧ್ಯಕ್ಷರು ತಮ್ಮ ಜೇಬಿನಲ್ಲಿದ್ದ ಹಸಿರು ಇಂಕಿನ ಪೆನ್ ತೆಗೆದು ಸಹಿ ಮಾಡಿದರು. ಸಹಿ ಮಾಡುವ ಭರದಲ್ಲಿ ಪ್ರಮಾಣಪತ್ರದಲ್ಲಿ ತಮ್ಮ ಹೆಸರಿರುವ ಕಡೆ ಸಹಿ ಮಾಡುವ ಬದಲು ಬೇರೊಬ್ಬರ ಹೆಸರಿರುವ ಕಡೆ ಹಾಕಿದರು.
ವಂಡರ್ ಡೈರಿ -1
ಸಾಮಾನ್ಯವಾಗಿ ಪತ್ರಾಂಕಿತ ಅಧಿಕಾರಿಗಳು (ಗೆಜೆಟೆಡ್ ಆಫೀಸರ್ಸ್) ಹಾಗೂ ಅದಕ್ಕಿಂತ ಮೇಲ್ಪಟ್ಟವರು ಸಹಿ ಮಾಡಲು ಹಸಿರು ಇಂಕಿನ ಪೆನ್ ಬಳಸುತ್ತಾರೆ. ಎಷ್ಟೋ ವೇಳೆ ಮುಖ್ಯಮಂತ್ರಿಗಳಿಗೆ ಶಾಸಕರು, ಸಾರ್ವಜನಿಕರು ಪತ್ರ ನೀಡಿದಾಗ ಹಸಿರು ಇಂಕಿನ ಪೆನ್‌ಗೆ ಕಾಯುವುದಿಲ್ಲ. ಸಿಕ್ಕ ಪೆನ್‌ನಲ್ಲಿ ‘ಮಿನಿಟ್’ (ಶಿಫಾರಸು, ಟಿಪ್ಪಣಿ) ಬರೆಯುತ್ತಾರೆ. ಆದರೆ ಈಗ ಗ್ರಾಪಂ ಅಧ್ಯಕ್ಷರು ಕೂಡ ಸಹಿ ಮಾಡಲು ಹಸಿರು ಇಂಕಿನ ಪೆನ್ ಅಥವಾ ರಿಫಿಲ್ ಬಳಸುತ್ತಾರೆ ಎಂಬುದು ಇತ್ತೀಚೆಗಷ್ಟೆ ಗೊತ್ತಾಯಿತು. ಏಕೆಂದರೆ ಗ್ರಾಪಂನಲ್ಲಿ ಎಲ್ಲದಕ್ಕೂ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಸಹಿ ಕಡ್ಡಾಯ. ಪಿಡಿಒ ಹಸಿರು ಪೆನ್‌ನಲ್ಲಿ ಸಹಿ ಮಾಡಿದ ಮೇಲೆ ಅಧ್ಯಕ್ಷರೂ ನೀಲಿ ಪೆನ್‌ನಲ್ಲಿ ಸಹಿ ಹಾಕುವುದುಂಟೆ?!
ಕಾರ್ಯಕ್ರಮವೊಂದಕ್ಕೆ ಆಹ್ವಾನಿತರಾಗಿದ್ದ ಗ್ರಾಪಂ ಅಧ್ಯಕ್ಷರೊಬ್ಬರಿಗೆ ಸ್ಪರ್ಧಿಗಳಿಗೆ ನೀಡುವ ಪ್ರಮಾಣಪತ್ರಕ್ಕೆ ಸಹಿ ಮಾಡುವಂತೆ ಸಂಘಟಕರು ಕೋರಿ, ತಮ್ಮ ಬಳಿ ಇದ್ದ ನೀಲಿ ಇಂಕಿನ ಪೆನ್ ನೀಡಿದರು. ಆದರೆ ಅದನ್ನು ಪಡೆಯಲು ನಿರಾಕರಿಸಿದ ಗ್ರಾಪಂ ಅಧ್ಯಕ್ಷರು ತಮ್ಮ ಜೇಬಿನಲ್ಲಿದ್ದ ಹಸಿರು ಇಂಕಿನ ಪೆನ್ ತೆಗೆದು ಸಹಿ ಮಾಡಿದರು. ಸಹಿ ಮಾಡುವ ಭರದಲ್ಲಿ ಪ್ರಮಾಣಪತ್ರದಲ್ಲಿ ತಮ್ಮ ಹೆಸರಿರುವ ಕಡೆ ಸಹಿ ಮಾಡುವ ಬದಲು ಬೇರೊಬ್ಬರ ಹೆಸರಿರುವ ಕಡೆ ಹಾಕಿದರು. ಓದಲು ಬರಬೇಕು ಅಂತೇನೂ ಇಲ್ಲ, ಸಹಿ ಮಾಡಲು ಬಂದರೆ ಸಾಕಲ್ಲವೇ?
ಸಿಎಂ ಸಿದ್ದರಾಮಯ್ಯ ಲೀಡಿಂಗ್ ಕ್ವಶ್ಚನ್ ಪಾಠ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಾಗೆ. ಯಾರೇ ತಪ್ಪು ಮಾಡಿದರೂ ಅದು ತಮ್ಮ ಗಮನಕ್ಕೆ ಬಂದ ಕೂಡಲೇ ಅದನ್ನು ತಿದ್ದಲು ಮುಂದಾಗುತ್ತಾರೆ. ಇಲ್ಲದಿದ್ದರೆ ಆ ವಿಚಾರದ ಬಗ್ಗೆ ಪಾಠವನ್ನೇ ಮಾಡುತ್ತಾರೆ. ಈ ಹಿಂದೆ ಸದನದಲ್ಲಿಯೇ ಶಾಸಕರಿಗೆ ವ್ಯಾಕರಣ ಪಾಠ ಮಾಡಿದ್ದರು, ಕಾರ್ಯಕ್ರಮಗಳ ವೇದಿಕೆಯಲ್ಲಿ ಸಚಿವರಿಗೆ ಸೇವೆಯ ಬೋಧನೆಯನ್ನೂ ನೀಡಿದ್ದರು.
ಇತ್ತೀಚಿನ ಸರದಿ- ಪತ್ರಕರ್ತರದ್ದು
ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉಪಾಹಾರ ಸೇವಿಸುವ ಸುದ್ದಿ ಎಲ್ಲ ಮಾಧ್ಯಮಗಳಲ್ಲೂ ಜೋರಾಗಿ ಪ್ರಚಾರವಾಗಿತ್ತು. ಮೊದಲಿಗೆ ಸಿಎಂ ಮನೆಗೆ ಡಿಸಿಎಂ ಹೋಗಿ ಉಪಾಹಾರ ಮಾಡಿದ್ದರೆ. ನಂತರ ಡಿಸಿಎಂ ಮನೆಗೆ ಸಿಎಂ ಹೋಗಿ ಭರ್ಜರಿ ನಾಟಿಕೋಳಿ ಸವಿದು ಬಂದಿದ್ದರು.
ಈ ಬಗ್ಗೆ ಮಾಧ್ಯಮದವರು ಹಿರಿಯ ಸಚಿವರಾದ ಡಾ। ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಪರಮೇಶ್ವರ್, ನಮ್ಮನ್ನು ಕರೆಯದೇ ಅವರಿಬ್ಬರೇ ಬ್ರೇಕ್‌ಫಾಸ್ಟ್ ಮಾಡುತ್ತಿದ್ದಾರೆ. ನಾನೇ ಅವರಿಬ್ಬರನ್ನು ಬ್ರೇಕ್‌ಫಾಸ್ಟ್‌ಗೆ ನಮ್ಮ ಮನೆಗೆ ಕರೆಯುತ್ತೇನೆ ಎಂದು ನಗುತ್ತಲೇ ಪ್ರತಿಕ್ರಿಯಿಸಿದ್ದರು.
ಇದಾದ ನಂತರ ಬೇರೆ ಸಂದರ್ಭದಲ್ಲಿ ಎದುರಾದ ಸಿಎಂ ಬಳಿ ಮಾಧ್ಯಮದವರು ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದರು.
ಪ್ರತಿಯಾಗಿ ಸಿದ್ದರಾಮಯ್ಯ, ‘ನೀವು ಪ್ರಶ್ನೆ ಕೇಳಿದ್ದೀರಾ ಅದಕ್ಕೆ ಅವರು ಹಾಗೆ ಹೇಳಿದ್ದಾರೆ. ನಿಮ್ಮ ಪ್ರಶ್ನೆಗಳೆಲ್ಲ ನನಗೆ ಗೊತ್ತಾಗಿದೆ. ನೀವು ಏನೇನು ಲೀಡಿಂಗ್ ಕ್ವಶ್ಚನ್ ಕೇಳ್ತೀರಾ? ಎಂಬುದು ತಿಳಿದಿದೆ’ ಎಂದು ಹೇಳಿದರು. ನಂತರ ಒಂದು ಕ್ಷಣ ಸುಮ್ಮನಾಗಿ ಪತ್ರಕರ್ತರ ಕಡೆ ತಿರುಗಿದ ಸಿಎಂ, ‘ಲೀಡಿಂಗ್ ಕ್ವಶ್ಚನ್ ಏನೆಂಬುದು ಗೊತ್ತಾ ನಿಮ್ಗೆ. ನೀವು ಅದರ ಬಗ್ಗೆ ತಿಳ್ಕೊಂಡಿದ್ದೀರಾ..? ಅದು ನನಗೆ ಗೊತ್ತು. ನೀವು ಹೀಗೆ ಕೇಳುವ ಪ್ರಶ್ನೆಗಳೇ ಲೀಡಿಂಗ್ ಕ್ವಶ್ಚನ್ಸ್, ಗೊತ್ತಾಯ್ತ’ ಎಂದು ನಕ್ಕು ಹೊರಟು ಹೋದರು.
ಹೋಮ್ ಮಿನಿಸ್ಟ್ರುಗೆ ಬಡ್ತಿ ಸಿಗುತ್ತಾ!
ನಮ್ಮ ಸನ್ಮಾನ್ಯ ಗೃಹ ಸಚಿವ ಡಾ। ಜಿ.ಇ.ಪರಮೇಶ್ವರ್ ಅವರಿಗೆ ಬಡ್ತಿ ಸಿಗಲಿದೆಯಾ?
ಇಂತಹದೊಂದು ಡೌಟು ಬರುವಂತಹ ಸಂಗತಿ ನಡೆಯಿತು. ಆಗಿದ್ದೇನೆಂದರೆ ಗೃಹ ಸಚಿವರಾಗಿ ಎರಡೂವರೆ ವರ್ಷಗಳ ಅವಧಿ ಸಾಧನೆ ಬಗ್ಗೆ ಹೇಳಿಕೊಳ್ಳಲು ಸುದ್ದಿಗೋಷ್ಠಿ ಜತೆ ಔತಣಕೂಟವನ್ನೂ ಅವರು ಆಯೋಜಿಸಿದ್ದರು. ಇಂತಹದೊಂದು ಪ್ರೆಸ್‌ಮೀಟ್ ಅವರ ಅವಧಿಯಲ್ಲಿ ಇದೇ ಮೊದಲು.
ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಮೊದಲ ಬಾರಿಗೆ ಗೃಹ ಸಚಿವರೊಬ್ಬರು ತಮ್ಮ ಸಾಧನೆ ಹೇಳಲು ನಡೆಸಿದ ಪ್ರೆಸ್‌ಮೀಟ್ ಸಹ ಇದು ಆಗಿತ್ತು. ಡಿಜಿ-ಐಜಿಪಿ ಸಲೀಂ ಅವರ ಆದಿಯಾಗಿ ಎಲ್ಲ ಹಿರಿಯ ಎಡಿಜಿಪಿ ಅಧಿಕಾರಿಗಳನ್ನು ಅಜುಬಾಜು ಕೂರಿಸಿಕೊಂಡು ಸಚಿವರು ಆ ಪ್ರೆಸ್‌ಮೀಟ್ ನಡೆಸಿದ್ದು ಹಲವು ಗಾಸಿಪ್‌ಗೆ ರೆಕ್ಕಪುಕ್ಕ ಹುಟ್ಟಿಸಿತ್ತು.
ಸುದೀರ್ಘ ಎರಡು ಗಂಟೆಗಳು ಪ್ರಗತಿ ಪಕ್ಷಿ ನೋಟ ಬೀರಿದ ಪರಮೇಶ್ವರ್ ಅವರು, ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗಳ ಬಾಣಗಳನ್ನು ಸಮಚಿತ್ತರಾಗಿ ಪುಡಿಗಟ್ಟಿದರು. ಪ್ರೆಸ್‌ಮೀಟ್‌ಗೆ ಮಂಗಳ ಹಾಡುವ ಹೊತ್ತಿಗೆ ಪತ್ರಕರ್ತರು ಕೇಳಿಯೇ ಬಿಟ್ಟರು.
‘ಏನ್ಸಾರ್... ಇದು ನಿಮ್ಮದು ಕೊನೇ ಪ್ರೆಸ್‌ಮೀಟಾ’ ಅಂತ. ಆಗ ‘ಯಾಕ್ರೀ ನಿಮಗೆ ಡೌಟ್. ನಾನು ಇದ್ದೇ ಇರುತ್ತೇನೆ’ ಎಂದು ನಗುತ್ತಲೇ ಸಚಿವರು ಉತ್ತರಿಸಿದ್ದರು.
ಅಲ್ಲ ನಿಮ್ಮ ಪಕ್ಷದಲ್ಲಿ ರಾತ್ರಿ ಬೆಳಗ್ಗೆ ಏನೇನೋ ನಡೆಯುತ್ತಿದೆಯಲ್ಲ. ನೀವು ನೋಡಿದ್ರೆ ಮೊದಲ ಬಾರಿ ಇಲಾಖೆ ಪ್ರೋಗ್ರೆಸ್ ರಿಪೋರ್ಟ್ ಕೊಡಲು ಪ್ರೆಸ್‌ಮೀಟ್ ಬೇರೆ ನಡೆಸಿದ್ದೀರಿ. ಏನಾದ್ರು ಲಕ್ಕು ಖುಲಾಯಿಸಬಹುದೇ ಅಂತ ಮತ್ತೊಂದು ಪ್ರಶ್ನೆ ಎಸೆದರು ಪತ್ರಕರ್ತರು.
ಆಗ ‘ಇಲ್ಲಿ ನೋ ಪಾಲಿಟಿಕ್ಸ್...’ ಎನ್ನುತ್ತ ಪ್ರೆಸ್‌ಮಿಟ್‌ಗೆ ಸಚಿವರು ಶುಭಂ ಹೇಳಿದ್ರು. ಔತಣಕೂಟದಲ್ಲಿ ಪತ್ರಕರ್ತರ ಬಳಿಗೆ ಬಂದು ಊಟ ಚೆನ್ನಾಗಿದೆಯೇ ಎಂದೆಲ್ಲ ಪರಮೇಶ್ವರ್ ಉಪಚರಿಸಿದರು. ಈ ಪರಿ ಉಪಾಚಾರ ಕಂಡಾಗ ಇಂಥ ಡೌಟು ಬಂದರೆ ತಪ್ಪಿಲ್ಲ ಬಿಡಿ!
ತಮ್ಮ ವಿರುದ್ಧ ಪ್ರತಿಭಟನೆಯಲ್ಲಿ ತಾವೇ ಭಾಗಿ!
ತಮ್ಮ ವಿರುದ್ಧದ ಪ್ರತಿಭಟನೆಯಲ್ಲಿ ತಾವೇ ಪಾಲ್ಗೊಂಡರೆ ಹೇಗಿರುತ್ತೆ..!
ಇಂಥ ಅಪರೂಪದ ಪ್ರಸಂಗ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಎದುರಿಗೆ ಇತ್ತೀಚೆಗೆ ಸಾಕ್ಷಿಯಾಯಿತು.
ಆಗಿದ್ದೇನಪಾ ಅಂದ್ರೆ ಹುಡಾ ತನ್ನ ಎಲ್‌ಪಿಎ (ಲೋಕಲ್ ಪ್ಲ್ಯಾನಿಂಗ್ ಏರಿಯಾ-ಸ್ಥಳೀಯ ಯೋಜನಾ ಪ್ರದೇಶ) ವಿಸ್ತರಿಸಿಕೊಂಡು ಹೊಸದಾಗಿ 46 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡಿತ್ತು. ಇದಕ್ಕೆ ಸರ್ಕಾರದಿಂದಲೂ ಅನುಮೋದನೆ ದೊರೆತಿದೆ. 46 ಹಳ್ಳಿಗಳ ಪೈಕಿ ಕೆಲ ಗ್ರಾಮಗಳ ರೈತರು, ನಿವಾಸಿಗಳು ಇದರ ವಿರುದ್ಧ ಹುಡಾ ಎದುರಿಗೆ ಪ್ರತಿಭಟನೆ ನಡೆಸಲು ಯೋಚಿಸಿದರು. ಜತೆಗೆ ಒನ್ ಫೈನ್ ಡೇ ಪ್ರತಿಭಟನೆಯನ್ನೂ ಹಮ್ಮಿಕೊಂಡು ಹುಡಾ ಕಚೇರಿ ಎದುರಿಗೆ ಬಂದು ಧರಣಿ ನಡೆಸಲು ಶುರು ಮಾಡಿದರು.
ಮೊದಲಿಗೆ ಹುಡಾ ಅಧ್ಯಕ್ಷರು, ಆಯುಕ್ತರ ವಿರುದ್ಧ ಘೋಷಣೆ ಕೂಗಿದ್ದು ಆಯಿತು. ಬಳಿಕ ಭಜನೆ ಮಾಡುತ್ತಾ ಧರಣಿ ಮುಂದುವರಿಸಿದರು. ರೈತರು ಪ್ರತಿಭಟನೆ ನಡೆಸಲು ಬಂದ ಸುದ್ದಿ ತಿಳಿದು ಕಚೇರಿಯಿಂದ ಕೆಳಕ್ಕಿಳಿದು ಬಂದ ಹುಡಾ ಅಧ್ಯಕ್ಷ ಶಾಕೀರ್ ಸನದಿ ಸೀದಾ ಅವರ ಬಳಿಯೇ ಬಂದು ರೈತರ ಬಳಿಯಿದ್ದ ತಾಳವೊಂದನ್ನು ಪಡೆದು ರೈತರೊಂದಿಗೆ ಭಜನೆ ಶುರು ಮಾಡಿದರು.
ಇದನ್ನು ನೋಡುತ್ತಿದ್ದಂತೆ ರೈತರು ಕಕ್ಕಾಬಿಕ್ಕಿ. ಇವರ ವಿರುದ್ಧವೇ ಭಜನೆ ಮೂಲಕ ಧರಣಿ ನಡೆಸುತ್ತಿದ್ದೇವೆ. ಇದೀಗ ಇವರೇ ನಮ್ಮೊಂದಿಗೆ ಪಾಲ್ಗೊಂಡಿದ್ದಾರಲ್ಲ! ಈಗೇನು ಮಾಡೋದು ಎಂದು ಯೋಚಿಸಿ ಭಜನೆ ಅಲ್ಲಿಗೆ ಸ್ಟಾಪ್ ಮಾಡಲೆತ್ನಿಸಿದರು. ಆದರೆ ಹುಡಾ ಅಧ್ಯಕ್ಷ ಮಾತ್ರ ಭಜನೆ ಮುಂದುವರಿಸಿ ಎಂದು ಕೈ ಸನ್ನೆ ಮಾಡಿದರು. ರೈತರು ಮತ್ತೆ ಭಜನೆ ಮುಂದುವರಿಸಿದರೆ, ಅವರೊಂದಿಗೆ ಶಾಕೀರ್ ಕೂಡ ತಾಳ ಹಾಕಿದರು. ಕೊನೆಗೆ ಪ್ರತಿಭಟಿಸಲು ಬಂದಿದ್ದ ರೈತರಿಗೆಲ್ಲ ಚಹಾ, ಬಿಸ್ಕಟ್ ನೀಡಿ ಸಮಾಧಾನ ಪಡಿಸಿ, ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡಿರುವುದರಿಂದ ನಿಮಗೇನು ಸಮಸ್ಯೆ ಇಲ್ಲ. ಟ್ಯಾಕ್ಸೂ ಹೆಚ್ಚಾಗಂಗಿಲ್ಲ. ಆತಂಕ ಪಡಬೇಡಿ ಎಂದು ತಿಳಿಸಿ ಮನವಿ ಪಡೆದು ಕಳುಹಿಸಿದರು.
ಹುಡಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲು ಬಂದಿದ್ದ ರೈತರು, ನಗು ನಗುತ್ತಾ ‘ಆತು ಬಿಡ್ರಿ...ನಮಗೇನು ತೊಂದ್ರಿ ಆಗಂಗಿಲ್ಲ’ ಎಂದೆನುತ್ತ ನಗುತ್ತಲೇ ಅಲ್ಲಿಂದ ತೆರಳಿದರು.
---
ಅಂಶಿ ಪ್ರಸನ್ನಕುಮಾರ್
ಗಿರೀಶ್ ಗರಗ
ಗಿರೀಶ್ ಮಾದೇನಹಳ್ಳಿ
ಶಿವಾನಂದ ಗೊಂಬಿ, ಹುಬ್ಬಳ್ಳಿ


