ಅಭಿವೃದ್ಧಿ ಹಾಗೂ ಅನುದಾನ ತಾರತಮ್ಯ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುವಾಗ ಪ್ರತಿಪಕ್ಷಗಳ ಶಾಸಕರು, ಆಡಳಿತ ಪಕ್ಷದ ಶಾಸಕರಿಗೆ ನೀಡಿರುವಂತೆ ತಮಗೂ ಅನುದಾನ ನೀಡುವಂತೆ ಮನವಿ ಮಾಡಿದರು.

ವಿಧಾನಸಭೆ (ಆ.23): ಆಡಳಿತ ಪಕ್ಷದ ಶಾಸಕರಿಗೆ ನೀಡಿರುವಂತೆ ಪ್ರತಿಪಕ್ಷದ ಶಾಸಕರಿಗೂ ಅನುದಾನ ನೀಡುವಂತೆ ಸದನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದರಿಂದ, ‘ಶೀಘ್ರವೇ ಪ್ರತಿಪಕ್ಷಗಳ ಶಾಸಕರ ಸಭೆ ಕರೆದು ಕ್ರಿಯಾಯೋಜನೆ ಪಡೆದು ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಭಿವೃದ್ಧಿ ಹಾಗೂ ಅನುದಾನ ತಾರತಮ್ಯ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುವಾಗ ಪ್ರತಿಪಕ್ಷಗಳ ಶಾಸಕರು, ಆಡಳಿತ ಪಕ್ಷದ ಶಾಸಕರಿಗೆ ನೀಡಿರುವಂತೆ ತಮಗೂ ಅನುದಾನ ನೀಡುವಂತೆ ಮನವಿ ಮಾಡಿದರು.

ಪ್ರತಿಪಕ್ಷ ನಾಯಕ ಆರ್, ಅಶೋಕ್‌ ಮಾತನಾಡಿ, ‘ನನ್ನ ಕ್ಷೇತ್ರಕ್ಕೆ ಈವರೆಗೆ ಕೇವಲ 20 ಕೋಟಿ ರು. ಅನುದಾನ ನೀಡಲಾಗಿದೆ. ಹೃದಯ ವೈಶಾಲ್ಯತೆ ತೋರಿ. ದಯವಿಟ್ಟು ಪ್ರತಿಪಕ್ಷಗಳ ಸದಸ್ಯರಿಗೂ ಆಡಳಿತ ಪಕ್ಷದ ಸದಸ್ಯರಿಗೆ ನೀಡಿರುವಷ್ಟೇ ಅನುದಾನ ಘೋಷಣೆ ಮಾಡಿ’ ಎಂದು ಮನವಿ ಮಾಡಿದರು. ಈ ವೇಳೆ ಸಿದ್ದರಾಮಯ್ಯ, ಮೂಲಸೌಕರ್ಯ ಅಭಿವೃದ್ಧಿಗಾಗಿ ₹8,000 ಕೋಟಿ ವಿಶೇಷ ಅನುದಾನ ಇಟ್ಟುಕೊಂಡಿದ್ದೇನೆ. ಎಲ್ಲರಿಗೂ ನೀಡುತ್ತೇನೆ ಎಷ್ಟು ನೀಡುತ್ತೇನೆ ಎಂಬುದನ್ನು ಹೇಳಲಾಗಲ್ಲ. ನೀವು ಆಡಳಿತ ಪಕ್ಷದಲ್ಲಿದ್ದಾಗ ಸಮಾನವಾಗಿ ನೀಡಿದ್ರಾ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಪಕ್ಷದ ಸುರೇಶ್‌ಬಾಬು ಅವರು ಕನಿಷ್ಠ ₹40 ಕೋಟಿ ಆದರೂ ನೀಡಿ ಎಂದು ಮನವಿ ಮಾಡಿದರು. ಬಿಜೆಪಿಯ ಸುರೇಶ್ ಗೌಡ ಮಾತನಾಡಿ, ಹಿಂದಿನ ಅವಧಿಯಲ್ಲಿ ನಮ್ಮವರು ತಪ್ಪು ಮಾಡಿರಬಹುದು. ನೀವು ಆ ತಪ್ಪು ಮಾಡಬೇಡಿ ದೊಡ್ಡ ಮನಸ್ಸು ಮಾಡಿಕೊಂಡು ಅನುದಾನ ನೀಡಿ ಎಂದರು.

ಸದನದ ಬಾವಿಗಿಳಿದು ಒತ್ತಾಯ: ಮುಖ್ಯಮಂತ್ರಿಗಳ ಉತ್ತರ ಮುಗಿದರೂ ಎಷ್ಟು ಅನುದಾನ ನೀಡುತ್ತೇನೆ ಎಂಬುದನ್ನು ತಿಳಿಸದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಅನುದಾನಕ್ಕೆ ಒತ್ತಾಯ ಮಾಡಿದರು. ಆರ್.ಅಶೋಕ್, ಮುಖ್ಯಮಂತ್ರಿಗಳು ಅನುದಾನ ಘೋಷಣೆ ಮಾಡುತ್ತಾರೆ. ನಾವೆಲ್ಲರೂ ಚಪ್ಪಾಳೆ ತಟ್ಟಿ, ಟೇಬಲ್ ಗುದ್ದಿ ಅಭಿನಂದಿಸೋಣ ಎಂದು ಬಂದೆವು. ಆದರೆ ಎಷ್ಟು ಕೊಡುತ್ತಾರೆ ಎಂಬುದನ್ನೇ ಪ್ರಶ್ನಾರ್ಥಕ ಚಿಹ್ನೆ ಮಾಡಿದ್ದಾರೆ. ಸದನದಲ್ಲೇ ಅನುದಾನ ಎಷ್ಟು ಎಂಬುದನ್ನು ಘೋಷಣೆ ಮಾಡಬೇಕು ಎಂದು ಸದಸ್ಯರನ್ನು ಸದನದ ಬಾವಿಯತ್ತ ಕಳುಹಿಸಿದರು.

ಈ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್‌, ಅನುದಾನ ಕೊಡುತ್ತೇನೆ ಎಂದು ಹೇಳಿದ್ದಾರೆ. ನೀವು ಈ ರೀತಿ ಮಾಡಿದರೆ ಸಿಗುವ ಅನುದಾನವೂ ಸಿಗುವುದಿಲ್ಲ ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ಅವರು, ಕೇಳಿದಷ್ಟು ಕೊಡಲು ಆಗದಿದ್ದರೂ ಎಲ್ಲ ಶಾಸಕರ ಸಭೆ ಕರೆದು ಕಾಫಿ ಕೊಟ್ಟು, ಅವರಿಂದ ಕ್ರಿಯಾಯೋಜನೆ ಪಡೆದು ಹಣ ಬಿಡುಗಡೆ ಮಾಡುತ್ತೇನೆ ಎಂದರು. ಆಗ ಅಶೋಕ್‌ ಅವರು, ‘ಹೇಳಿದ್ದಾರೆ ಬನ್ನಿ ಬನ್ನಿ. ಆಯ್ತು ಆಯ್ತು ಬನ್ನಿ’ ಎಂದು ಸದಸ್ಯರನ್ನು ವಾಪಸ್‌ ಕರೆಸಿಕೊಂಡರು.