ಶಾಸಕ ಇಕ್ಬಾಲ್ ಹುಸೇನ್ ಅವರು ಮೇ 15 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ಇತರ ನಾಯಕರು ಅಲ್ಲಗಳೆದಿದ್ದು, ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ.
ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬ ದಿನವಾದ ಮೇ 15ರಂದು ಮುಖ್ಯಮಂತ್ರಿ ಆಗುವುದು ನಿಶ್ಚಿತ. ಇದೇ ನಾನು ಹೇಳುವ ಅಂತಿಮ ದಿನಾಂಕ ಎಂದು ರಾಮನಗರ ಕ್ಷೇತ್ರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಕೇತೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಕುರಿತು 2-3 ದಿನಾಂಕಗಳನ್ನು ಹೇಳಿದ್ದೆ. ಆದರೀಗ ಮೇ 15 ಅಂತಿಮ ದಿನಾಂಕ. ಈ ಅವಧಿಯಲ್ಲಿಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಅವರಿಗೆ ಅವಕಾಶ ಸಿಗಬೇಕು ಎಂಬುದು ಎಲ್ಲರ ಬಯಕೆಯಾಗಿದೆ ಎಂದರು. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯೇ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಸಿಗುತ್ತದೆ ಎಂಬ ವಿಶ್ವಾಸವಿದೆ. ಅವರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ ಎಂದು ಹೇಳಿದರು.
ದೆಹಲಿಯಲ್ಲಿ ಮತ್ತೆ ‘ಮಿನಿಸ್ಟರ್ ಲಾಬಿ’: ಶಾಸಕರು ದೌಡು
ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಸಂಪುಟ ಪುನಾರಚನೆ ಕುರಿತ ಚಟುವಟಿಕೆಗಳು ಬಿರುಸುಗೊಂಡಿದ್ದು, ಸಚಿವಾಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟು ಸಚಿವ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪ ಅವರು ಪಕ್ಷದ ರಾಜ್ಯ ಪ್ರಭಾರಿ ಸುರ್ಜೇವಾಲ ಅವರನ್ನು ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಅವರು ಮಲ್ಲಿಕಾರ್ಜುನ ಖರ್ಗೆಯವರನ್ನು ಮಂಗಳವಾರ ಭೇಟಿ ಮಾಡಿ, ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ, ಸಚಿವಾಕಾಂಕ್ಷಿಗಳಾದ ಬಸವರಾಜ ರಾಯರೆಡ್ಡಿ, ರಿಜ್ವಾನ್ ಹರ್ಷದ್, ಹಂಪನಗೌಡ ಬಾರ್ದಲಿ, ಸಲೀಂ ಅಹಮದ್ ಕೂಡ ಮಂಗಳವಾರ ದೆಹಲಿಗೆ ಆಗಮಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ವರಿಷ್ಠ ನಾಯಕರನ್ನು ಭೇಟಿ ಮಾಡಿ, ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿರುವೆ: ತಂಗಡಗಿ
ಕಾರಟಗಿ (ಕೊಪ್ಪಳ): ಜನರ ಆಶೀರ್ವಾದ, ಕನಕಾಚಲಪತಿ ಕೃಪೆಯಿಂದ ಸಚಿವ ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿ ಇರುತ್ತೇನೆ ಎಂಬ ಭರವಸೆ ನನಗಿದೆ ಎಂದು ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು. ಯರಡೋಣಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಸಂಪುಟ ಸರ್ಜರಿ ಬಳಿಕ ನಿಮ್ಮ ಸ್ಥಾನಮಾನದ ಕತೆ ಏನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ಸರ್ಜರಿ ಅವಶ್ಯಕತೆ ಇದೆ. ಏಳೆಂಟು ವರ್ಷಗಳಿಂದ ಶಾಸಕರಾಗಿ ಇರುವವರಿಗೆ ಸಚಿವರಾಗುವ ಆಸೆ ಇದ್ದೇ ಇದೆ. ಹೀಗಾಗಿ ಹೈಕಮಾಂಡ್ ಭೇಟಿಗೆ ಹೋಗುವುದು ಸಹಜ. ಜನರ ಆಶೀರ್ವಾದ, ಕನಕಾಚಲಪತಿಯ ಕೃಪೆಯಿಂದ ಮುಂದೆ ಸಹ ಸಚಿವ ಸ್ಥಾನದಲ್ಲಿ ಮುಂದುವರೆಯುತ್ತೇನೆ ಎಂದರು.
ನಾಯಕತ್ವ ಬದಲಾವಣೆಯು ಕೇವಲ ಮಾಧ್ಯಮಗಳ ಸೃಷ್ಟಿ: ಹಿಟ್ನಾಳ
ಕೊಪ್ಪಳ: ನಾಯಕತ್ವ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ನಾಯಕತ್ವ ಗಟ್ಟಿಯಾಗಿಯೇ ಇದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ನಾವೆಲ್ಲ ಸಿಎಂ ಸಿದ್ದರಾಮಯ್ಯ ಪರ ಇದ್ದೇವೆ. ಸಿಎಂ ಖುರ್ಚಿ ಖಾಲಿ ಇಲ್ಲವಾದ್ದರಿಂದ ಬೇರೆಯವರು ಸಿಎಂ ಆಗಬೇಕು ಎನ್ನುವ ಚರ್ಚೆ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಹಿಂದೆ ಎರಡೂವರೆ ವರ್ಷದ ನಂತರ ಸಂಪುಟ ಪುನಾರಚನೆ ಆಗಬೇಕು. ಇತರರಿಗೂ ಅವಕಾಶ ನೀಡಬೇಕು ಎನ್ನಲಾಗಿತ್ತು. ಆದರೆ ಈಗ ನಾವು ಕೇಳುತ್ತಿದ್ದೇವೆ. ಅದರಲ್ಲಿ ತಪ್ಪೇನೂ ಇಲ್ಲ. 3 ಬಾರಿ ಆಯ್ಕೆಯಾದವರು ಸೇರಿದಂತೆ ಹಿರಿಯರು ಹೈಕಮಾಂಡ್ ಭೇಟಿಯಾಗಿ ಬಂದಿದ್ದೇವೆ. ಅಗತ್ಯ ಬಿದ್ದರೆ ಮತ್ತೊಮ್ಮೆ ಹೋಗಿ ಮನವಿ ಮಾಡುತ್ತೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧ ಎಂದರು.
ಸಿಎಂ ಬದಲು ವರಿಷ್ಠರಿಗಷ್ಟೇ ಬಿಟ್ಟ ವಿಚಾರ: ಆಂಜನೇಯ
ಬೀರೂರು: ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಹೈಕಂಮಾಡ್‌ಗೆ ಬಿಟ್ಟದ್ದು. ಈಗಾಗಲೇ ಉತ್ತಮ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಹಾಗಾಗಿ ಮೇ 15ಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವವರು ಸ್ವಲ್ಪ ಯೋಚಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಶಾಸಕ ಇಕ್ಬಾಲ್ ಹುಸೇಸ್‌ಗೆ ಟಾಂಗ್ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯನ್ನು ಆಡಳಿತ ಪಕ್ಷದ ಶಾಸಕಾಂಗ ಪಕ್ಷ ಆಯ್ಕೆ ಮಾಡಲಿದೆ. ಅದರಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಯಾರೋ ಒಬ್ಬ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವುದೆಲ್ಲಾ ಸುಳ್ಳು. ಡೇಟ್ ನಿಗದಿ ಪಡಿಸುವ ಅಧಿಕಾರಿ ಇಲ್ಬಾಲ್ ಹುಸೇನ್‌ಗೆ ಇಲ್ಲ. ಇಂತಹ ತಾರೀಖಿಗೆ ಮಂತ್ರಿಮಂಡಲ ಆಗಬೇಕು. ಇಂತಹ ತಾರೀಖಿಗೆ ಬದಲಾವಣೆ ಆಗಬೇಕು ಅಂತ ಹೇಳುವುದು ಸರಿಯಲ್ಲ ಎಂದರು.

