ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಜೋಡಿಯೊಂದು ಸ್ಮಶಾನದಲ್ಲಿ ವಿವಾಹವಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಿತ್ರ ಮದುವೆಯು ಧಾರ್ಮಿಕ ನಂಬಿಕೆಗಳಿಗೆ ಮಾಡಿದ ಅವಮಾನ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಡಳಿತವು ತನಿಖೆಗೆ ಆದೇಶಿಸಿದೆ.
ಮದುವೆ ಆಗುವ ಇಂದಿನ ಪೀಳಿಗೆಯವರು ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವವರು ಇದ್ದಾರೆ. ಎಲ್ಲರ ಮದುವೆಗಿಂತಲೂ ತಮ್ಮದು ಸ್ಪೆಷಲ್ ಆಗಬೇಕು ಎಂದು ಬಯಸುವವರು ಹಲವರು ಇದ್ದರೆ, ತಮ್ಮ ಮದುವೆ ಸಿಕ್ಕಾಪಟ್ಟೆ ವೈರಲ್ ಆಗಬೇಕು ಎಂದು ಹುಚ್ಚುತನಕ್ಕೆ ಕೈಹಾಕುವವರೂ ಕಮ್ಮಿಯೇನಿಲ್ಲ. ಅಂಥದ್ದೇ ಒಂದು ಮದುವೆ ಇದೀಗ ಜೋಡಿ ಅಂದುಕೊಂಡಂತೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅದಕ್ಕೆ ಕಾರಣ, ಈ ಜೋಡಿ ಸ್ಮಶಾನದಲ್ಲಿ ಮದುವೆಯಾಗಿದೆ! ಹುಟ್ಟಿದ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸೇರಬೇಕಾಗಿರುವುದು ಸ್ಮಶಾನಕ್ಕೇ ಎನ್ನುವುದು ನಿಜವಾದರೂ, ಮದುವೆಯನ್ನು ಬಹುಶಃ ಇಲ್ಲಿ ಮಾಡಿಕೊಂಡದ್ದು ಯಾರೂ ಇಲ್ಲವೇನೋ. ಆಕಾಶದಲ್ಲಿ, ನೀರಿನಲ್ಲಿ... ಹೀಗೆ ಎಲ್ಲೆಲ್ಲೋ ಮದುವೆಯಾಗಿ ಸುದ್ದಿಯಾದವರು ಇದ್ದಾರೆ. ಆದರೆ ಈ ಜೋಡಿ ಸ್ಮಶಾನದಲ್ಲಿ ಮದುವೆಯಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಎಲ್ಲಿಯ ಘಟನೆ
ಅಂದಹಾಗೆ, ಇದು ನಡೆದಿರುವುದು ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗಾಜಿಯಾಬಾದ್ನ ಜೋಡಿ ಹೀಗೊಂದು ವಿವಾದ ಸೃಷ್ಟಿಸಿದೆ. ಸ್ಮಶಾನ ಸ್ಥಳವನ್ನು ವಿವಾಹ ಸ್ಥಳವನ್ನಾಗಿ ಪರಿವರ್ತಿಸಲಾಗಿದ್ದು, ಅಲ್ಲಿ ವಧು-ವರರು ಹೂಮಾಲೆ ವಿನಿಮಯ ಸೇರಿದಂತೆ ಎಲ್ಲಾ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿಕೊಂಡಿದ್ದಾರೆ. ಇಡೀ ಕಾರ್ಯಕ್ರಮದ ವೀಡಿಯೊ ಜಾಲತಾಣದಲ್ಲಿ ವೈರಲ್ ಆದ ತಕ್ಷಣ, ಜನರು ಆಘಾತಕ್ಕೊಳಗಾದರು ಮತ್ತು ಆಕ್ರೋಶಗೊಂಡರು. ಮಾರ್ಚುಲಾ ಪ್ರದೇಶದ ರಾಮಗಂಗಾ ಮತ್ತು ಬದನ್‌ಗಢ ನದಿಗಳ ಸಂಗಮದಲ್ಲಿ ಈ ಘಟನೆ ನಡೆದಿದೆ. ಈ ಸೂಕ್ಷ್ಮ ಸ್ಥಳದಲ್ಲಿ ವಿವಾಹ ಸಮಾರಂಭವನ್ನು ನಡೆಸಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೀವ್ರ ಟೀಕೆ
ಇದು ಧಾರ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳಿಗೆ ಮಾಡಿದ ಅವಮಾನ ಎಂದು ಕರೆಯಲಾಗುತ್ತಿದೆ. ಈ ವಿಶಿಷ್ಟ ಘಟನೆಯು ಅಂತರ್ಜಾಲದಲ್ಲಿ ಬಿಸಿ ಬಿಸಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಇದನ್ನು "ವಿಭಿನ್ನ ಮತ್ತು ಸೃಜನಶೀಲ" ಎಂದು ಕರೆಯುತ್ತಿದ್ದರೂ, ಹೆಚ್ಚಿನ ಸಂಖ್ಯೆಯ ಜನರು ಇದನ್ನು ಸಾಮಾಜಿಕ ಮತ್ತು ಧಾರ್ಮಿಕ ರೂಢಿಗಳ ಉಲ್ಲಂಘನೆ ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ಪ್ರತಿಭಟನೆಗಳೂ ತೀವ್ರಗೊಂಡಿವೆ. ಅಂತ್ಯಕ್ರಿಯೆಯ ಸ್ಥಳದಲ್ಲಿ ಅಂತಹ ಆಚರಣೆಯನ್ನು ನಡೆಸುವುದು ಧಾರ್ಮಿಕ ನಂಬಿಕೆಗಳನ್ನು ಉಲ್ಲಂಘಿಸುತ್ತದೆ ಮತ್ತು ಸ್ವೀಕಾರಾರ್ಹವಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಆಡಳಿತದಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಆರಂಭಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ್ಯ ಎಂದು ತಹಶೀಲ್ದಾರ್ ಅಬಿದ್ ಅಲಿ ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಅನುಮತಿಯಿಲ್ಲದೆ ಅಂತ್ಯಕ್ರಿಯೆಯ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವುದು ನಿಯಮಗಳ ಉಲ್ಲಂಘನೆಯಾಗಿದೆ. ಸಂಬಂಧಿತ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದು ಮತ್ತು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ತನಿಖೆಗೆ ಆದೇಶ
ಮದುವೆಯ ಉಸ್ತುವಾರಿ ವಹಿಸಿಕೊಂಡಿರುವವರು, ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂಚಿತವಾಗಿ ನೀಡಲಾಗಿತ್ತು, ಆದರೆ ಅವರೇ ಸ್ಥಳವನ್ನು ಆಯ್ಕೆ ಮಾಡಿಕೊಂಡರು ಎಂದು ರೆಸಾರ್ಟ್ ವ್ಯವಸ್ಥಾಪಕ ರಾಕೇಶ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಈ ಇಡೀ ಘಟನೆಯು ಉತ್ತರಾಖಂಡದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿವಾಹ ತಾಣದ ಪ್ರವೃತ್ತಿಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಅಲ್ಲಿ ನೈಸರ್ಗಿಕ ಮತ್ತು ವಿಶಿಷ್ಟ ಸ್ಥಳಗಳ ಬಯಕೆ ಈಗ ವಿವಾದವನ್ನು ಹುಟ್ಟುಹಾಕುತ್ತಿದೆ.


