ಒಂದು ಸಂಜೆ ಹೊತ್ತು ಕಿರುತೆರೆಯಲ್ಲಿರುವವರೊಬ್ಬರು ಮಾತನಾಡುತ್ತಿದ್ದರು. ಚಿತ್ರರಂಗ, ಕನ್ನಡ ವೆಬ್‌ ಸೀರೀಸ್‌ಗಳ ಕುರಿತು ಮಾತುಕತೆ ಆಗುತ್ತಿತ್ತು. ಕನ್ನಡ ಚಿತ್ರರಂಗದ ಕುರಿತು ಥೋಥೋ ಛೇಛೇ ನಡೆಯುತ್ತಿತ್ತು.

- ಇಂಟ್ರೋವರ್ಟ್‌ ರಿಪೋರ್ಟರ್‌

‘ಕನ್ನಡದಲ್ಲಿ ರೈಟರ್ಸೇ ಇಲ್ಲ, ಮುಂಬೈನಲ್ಲಿ ಭಯಂಕರ ರೈಟರ್‌ಗಳಿದ್ದಾರೆ’.- ಒಂದು ಸಂಜೆ ಹೊತ್ತು ಕಿರುತೆರೆಯಲ್ಲಿರುವವರೊಬ್ಬರು ಮಾತನಾಡುತ್ತಿದ್ದರು. ಚಿತ್ರರಂಗ, ಕನ್ನಡ ವೆಬ್‌ ಸೀರೀಸ್‌ಗಳ ಕುರಿತು ಮಾತುಕತೆ ಆಗುತ್ತಿತ್ತು. ಕನ್ನಡ ಚಿತ್ರರಂಗದ ಕುರಿತು ಥೋಥೋ ಛೇಛೇ ನಡೆಯುತ್ತಿತ್ತು. ಮತ್ತದೇ ಗೋಳುಗಳಿಗೆ, ಅದದೇ ತುಕ್ಕು ಹಿಡಿದ ಲಾಂಗುಗಳಿಗೆ ನಾಲ್ಕು ಹನಿ ಕಣ್ಣೀರು ಹಾಕಲಾಯಿತು. ಕೊನೆಗೂ ಅವರಾಡಿದ ಒಂದು ಮಾತು ಕಾಡಲು ಶುರುವಾಯಿತು. ನಮ್ಮಲ್ಲಿ ಬರಹಗಾರರಿಲ್ಲವೇ?

ಕೆಲವು ತಿಂಗಳ ಹಿಂದಿನ ಘಟನೆ ನೆನಪಾಯಿತು. ಒಬ್ಬ ಬರಹಗಾರರನ್ನು ಒಬ್ಬ ನಿರ್ದೇಶಕರು ಸಂಪರ್ಕಿಸಿದರು. ಬರಹಗಾರರು ಹೋಗಿ ನಾಲ್ಕು ದಿನ ಚರ್ಚೆಯಲ್ಲಿ ಪಾಲ್ಗೊಂಡರು. ಬರಹಗಾರರು ನೇರವಾಗಿ, ದಿಟ್ಟವಾಗಿ ನಾಲ್ಕು ಉಲ್ಟಾ ಪ್ರಶ್ನೆಗಳನ್ನು ಎಸೆದರು. ಆ ಪ್ರಶ್ನೆಗಳು ಭಾರಿ ಆದುವು. ಮುಂದಿನ ಚರ್ಚೆಗೆ ಕರೆ ಬರಲಿಲ್ಲ. ಆ ಸಿನಿಮಾ ಬಿಡುಗಡೆ ಆದ ದಿನ ಬರಹಗಾರರು ಆ ನಾಲ್ಕು ಪ್ರಶ್ನೆಗಳನ್ನು ಕನಿಷ್ಠ ನಿರ್ಮಾಪಕರಾದರೂ ಕೇಳಿಸಿಕೊಳ್ಳಬೇಕಿತ್ತು ಎಂದು ನೊಂದುಕೊಂಡು ಹೋದರು. ಆ ನಿರ್ಮಾಪಕರು ಮತ್ತೆ ಸಿನಿಮಾ ಮಾಡುವ ಶಕ್ತಿಯನ್ನು ಉಳಿಸಿಕೊಂಡಿಲ್ಲ.

ಇದು ಪರಿಸ್ಥಿತಿ.

1. ದೇಶ ಕಂಡ ಶ್ರೇಷ್ಠ ನಿರ್ದೇಶಕ ಎಸ್‌.ಎಸ್‌. ರಾಜಮೌಳಿಯವರ ಸಿನಿಮಾಗಳ ಕತೆ ಬರೆಯುವುದು ಅವರ ತಂದೆ ವಿಜಯೇಂದ್ರ ಪ್ರಸಾದ್‌. ಅವರದೇ ಆದ ಒಂದು ಬರಹಗಾರರ ತಂಡ ಇಟ್ಟುಕೊಂಡಿದ್ದಾರೆ. ಅಲ್ಲಿ ದೃಶ್ಯಗಳನ್ನೆಲ್ಲಾ ನಿರೂಪಿಸಿದ ಬಳಿಕವೇ ಅವರು ಸಿನಿಮಾ ಮಾಡುವುದು.

2. ಪುಷ್ಪ ನಿರ್ದೇಶಕ ಸುಕುಮಾರ್‌ ಅವರ ಬರಹಗಾರರ ತಂಡದ ಹೆಸರೇ ಸುಕುಮಾರ್‌ ರೈಟಿಂಗ್ಸ್‌.

3. ಕ್ರಿಸ್ಟೋಫರ್‌ ನೋಲಾನ್‌ ತನ್ನ ಸಹೋದರ ಜೊನಾಥನ್ ನೋಲನ್‌ ಜೊತೆ ಸೇರಿ ಬರೆಯುತ್ತಾರೆ.

4. ಓಟಿಟಿಗಳ ಬಹುತೇಕ ಸೀರೀಸ್‌ಗಳು ರೈಟರ್ಸ್‌ ರೂಮ್‌ನಲ್ಲಿ ತಯಾರಾಗುತ್ತವೆ. ‘ಫ್ಯಾಮಿಲ್ ಮ್ಯಾನ್‌’ ಖ್ಯಾತಿಯ ರಾಜ್‌ ಮತ್ತು ಡಿಕೆಯ ರೈಟರ್‌ಗಳ ತಂಡವೇ ಇದೆ.

5. ಮಲಯಾಳಂ ಸಿನಿಮಾಗಳ ಕ್ರೆಡಿಟ್‌ ಲಿಸ್ಟ್‌ ನೋಡಿದರೆ ಅದರ ನಿರ್ದೇಶಕರೇ ಬೇರೆ, ಬರಹಗಾರರೇ ಬೇರೆ.

ಲೆಕ್ಕ ಹಾಕುತ್ತಾ ಹೋದರೆ ಇಂಥಾ ಸಾಕಷ್ಟು ಮಾಹಿತಿ ಸಿಗುತ್ತವೆ. ನಮ್ಮಲ್ಲೂ ನಾಲ್ಕೈದು ಜನ ಕೂತು ಚರ್ಚೆ ನಡೆಸುವ ಕ್ರಮ ಇಲ್ಲ ಅಂತಲ್ಲ. ಅವರಲ್ಲಿ ಎಷ್ಟು ಜನ ಬರಹಗಾರರಿದ್ದಾರೆ ಮತ್ತು ಅವರನ್ನು ಎಷ್ಟು ಪ್ರೊಫೆಷನಲ್‌ ಆಗಿ ದುಡಿಸಿಕೊಳ್ಳಲಾಗುತ್ತದೆ ಎಂದು ನೋಡಿದರೆ ಮತ್ತೆ ಥೋಥೋ ಛೇಛೇ ಅನ್ನಬೇಕಾಗುತ್ತದೆ. ಒಮ್ಮೆ ಯೋಚಿಸಿ ನೋಡಿ, ಕನ್ನಡದಲ್ಲಿ ಯಾವ ನಿರ್ದೇಶಕರು ರೈಟರ್ಸ್‌ ರೂಮ್‌ ಇಟ್ಟುಕೊಂಡಿದ್ದಾರೆ? ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ಮತ್ತಿತರರು ಎಷ್ಟು ರೈಟರ್‌ಗಳನ್ನು ವೃತ್ತಿಪರವಾಗಿ ನಡೆಸಿಕೊಂಡು ಬೆಳೆಸಿದ್ದಾರೆ?

ಉತ್ತರವಾಗಿ ಎರಡು ಹನಿ ಕಣ್ಣೀರು. ಸ್ಟಾರ್‌ಗಳು ತಮ್ಮದೇ ಆದ ಕತೆ ಹೆಣೆಯುತ್ತಾರೆ, ನಿರ್ದೇಶಕರು ತಾವು ಮಾಡಿದ್ದೇ ಕತೆ ಎಂದುಕೊಂಡಿರುತ್ತಾರೆ, ನಿರ್ಮಾಪಕರು ಸ್ಟಾರ್‌ಗಳೇ ಸರಿ- ನಿರ್ದೇಶಕರೇ ಸರಿ ಎಂಬ ಭಾವನೆಯಲ್ಲಿರುತ್ತಾರೆ. ಇಗೋ ಜಗತ್ತನ್ನೇ ಆಳುತ್ತದೆ. ಅದಕ್ಕೆ ಕನ್ನಡ ಮನರಂಜನಾ ಕ್ಷೇತ್ರಕ್ಕೆ ಬರಹಗಾರರ ಕೊರತೆ ಕಾಣುತ್ತಿದೆ.

ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನೋಡುವವರಿಗೆ ಉಳಿದ ಬರಹಗಳೆಲ್ಲಾ ಕುಬ್ಜವಾಗಿಯೇ ಕಾಣುತ್ತದೆ. ತಾನು ಮಾಡಿದ ನಿರ್ಧಾರದಿಂದ ಎರಡು ಗೆಲುವು ಸಿಕ್ಕರೆ ಆಗ ತಾನು ಹೇಳಿದ್ದೇ ಸತ್ಯವಾಗುತ್ತದೆ. ಅಲ್ಲಿಂದ ಆ ಸೀನು, ಇಲ್ಲಿಂದ ಈ ಕಾನ್ಸೆಪ್ಟು ಎತ್ತಿಕೊಳ್ರೋ, ನಮ್‌ ಸ್ಟೈಲಲ್ಲಿ ಬದಲಾವಣೆ ಮಾಡಿಕೊಳ್ರೋ ಅನ್ನುವುದೇ ಕತೆಯಾಗುತ್ತದೆ. ಸ್ವಂತಿಕೆಗೆ ಬೆಲೆ ಸಿಕ್ಕದಾಗ ಸೂಕ್ಷ್ಮ ಮನಸ್ಸಿನ ಬರಹಗಾರ ಒಂದು ಹೆಜ್ಜೆ ಹಿಂದೆ ಸರಿಯುತ್ತಾನೆ. ಮೀಡಿಯೋಕರ್‌ ಐಡಿಯಾಗಳು ಮಾತ್ರವೇ ಉಳಿಯುತ್ತವೆ. ಆ ಐಡಿಯಾಗಳಿವೆ ಜೀವವಿಲ್ಲ, ಶಾಶ್ವತ ಗುಣವಿಲ್ಲ ಎಂಬುದು ಅರ್ಥವಾದಾಗ ತಡವಾಗಿರುತ್ತದೆ.

‘ಕಾಂತಾರ’, ‘ಕೆಜಿಎಫ್’, ‘ಕಾಟೇರ’, ‘ಸು ಫ್ರಂ ಸೋ’ ಬರೆದವರೆಲ್ಲಾ ಕನ್ನಡದವರೇ ಅಲ್ಲವೇ. ನಮ್ಮವರೇ ಅಲ್ಲವೇ. ಚಿ. ಉದಯ್‌ಶಂಕರ್‌ ಅವರಿಗೆ ಅಣ್ಣಾವ್ರು ಕೊಡುತ್ತಿದ್ದ ಮರ್ಯಾದೆ ಇವತ್ತಿಗೂ ಚಿತ್ರಪ್ರೇಮಿಗಳಿಗೆ ಮರೆಯಲು ಸಾಧ್ಯವಾಗಿದೆಯೇ. ಸಾಧ್ಯವಾದರೆ ಬರಹಗಾರರನ್ನು ಬೆಳೆಸಿ. ವೃತ್ತಿಪರವಾಗಿ ನಡೆಸಿಕೊಳ್ಳಿ. ಪರಭಾಷೆಯ ರೈಟರ್‌ಗಳಿಗೆ ಏನೇನು ದುಡ್ಡು, ಸೌಲಭ್ಯ ಕೊಡುತ್ತೀರೋ ಅದನ್ನೆಲ್ಲಾ ಕೊಡಿ. ರೈಟರ್ಸ್‌ ರೂಮ್‌ ಕಟ್ಟಿಕೊಳ್ಳಿ. ಅವರನ್ನು ಘನತೆಯಿಂದ ನೋಡಿಕೊಳ್ಳಿ.

ಆಗ ಸಿನಿಮಾ ಘನತೆ, ವೆಬ್‌ ಸೀರೀಸ್‌ ಘನತೆ, ಚಿತ್ರರಂಗದ ಘನತೆ ಎಲ್ಲವೂ ಹೆಚ್ಚುತ್ತದೆ. ಇಷ್ಟೆಲ್ಲಾ ಮಾಡದೆ, ಕನ್ನಡದಲ್ಲಿ ಬರಹಗಾರರು ಇಲ್ಲ ಅಂತ ದಯವಿಟ್ಟು ಹೇಳಬೇಡಿ. ಸಿನಿಮಾಗಳು, ವೆಬ್‌ ಸೀರೀಸ್‌ಗಳು ಸೋಲುವುದನ್ನು ನೋಡುವುದಕ್ಕಿಂತ ಜಾಸ್ತಿ ನೋವಾಗುತ್ತದೆ.