ಜೆನ್‌ ಝೀ ತಲೆಮಾರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರೂ, ತಮ್ಮ ವೈಯಕ್ತಿಕ ಜೀವನವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ. ಈ 'ಪೋಸ್ಟಿಂಗ್ ಜೀರೋ' ಟ್ರೆಂಡ್ ಮೂಲಕ ಅವರು ಕೃತಕ ಜಗತ್ತಿನಿಂದ ದೂರ ಸರಿದು, ಖಾಸಗಿತನ ಮತ್ತು ನೈಜ ಅನುಭವಗಳಿಗೆ ಹೆಚ್ಚು ಮೌಲ್ಯ ನೀಡುತ್ತಿದ್ದಾರೆ.

- ವೃಶ್ಚಿಕಾ

‘ನನ್ಹತ್ರ ಇನ್‌ಸ್ಟಾ ಅಕೌಂಟ್‌ ಇದೆ. ಎಫ್‌ಬಿಯಲ್ಲಿ ಇದೀನಿ. ಪಿಂಟರೆಸ್ಟ್‌ ಮತ್ತು ಸ್ನ್ಯಾಪ್‌ಚಾಟ್‌ನಲ್ಲೂ ಇದೀನಿ. ಆದರೆ ಯಾವುದರಲ್ಲೂ ಪೋಸ್ಟ್‌ ಮಾಡಲ್ಲ. ದಿನಕ್ಕೊಮ್ಮೆ ಅಲ್ಲಿಗೆಲ್ಲಾ ವಿಸಿಟ್‌ ಮಾಡ್ತೀನಿ. ಲೋಕದಲ್ಲಿ ಏನಾಗ್ತಾ ಇದೆ, ಎಲ್ಲರೂ ಏನ್ಮಾಡ್ತಾ ಇದಾರೆ ಅನ್ನೋದೆಲ್ಲಾ ಗೊತ್ತಾಗುತ್ತೆ. ನಾನು ಪೋಸ್ಟ್‌ ಮಾಡಿ ವರ್ಷವೇ ಆಯ್ತುʼ ಅಂತಾನೆ ವಿನೀತ್. ಅವನ ವಯಸ್ಸು ಹದಿನೆಂಟು. ಅಂದರೆ ಜೆನ್‌ ಝೀ ಹುಡುಗ.

ಹತ್ತು ವರ್ಷಗಳಿಂದೀಚೆಗೆ ಸೋಶಿಯಲ್‌ ಮೀಡಿಯಾದ ಪರ್ವಕಾಲ. ಎಲ್ಲರೂ ತಮ್ಮ ಮೊದಲ ವಿಮಾನ ಯಾನ, ಮೊದಲ ವಿದೇಶ ಪ್ರವಾಸ, ಮದುವೆ, ಮೊದಲ ಜಾಬ್‌, ಮಗುವಿನ ಜನನ, ಸಣ್ಣದೊಂದು ಯಶಸ್ಸು- ಹೀಗೆ ಎಲ್ಲವೂ ಲೋಕಕ್ಕೆ ಗೊತ್ತಾಗಲಿ ಎಂದು ಹಪಹಪಿಸಿದ ಜಮಾನ. ಬೆಳಗ್ಗೆ ಎದ್ದು ಹಲ್ಲುಜ್ಜುವಲ್ಲಿಂದ ರಾತ್ರಿ ಲೈಟಾರಿಸಿ ಮಲಗುವವರೆಗಿನ ಚಟುವಟಿಕೆಯೆಲ್ಲ ಖುಲ್ಲಂಖುಲ್ಲ. ಇನ್ನೊಬ್ಬರ ಬಗ್ಗೆ ನಮಗೆ ತಿಳಿಯದ ವಿಷಯವೇ ಇಲ್ಲ ಎಂದುಕೊಳ್ಳುತ್ತಿರುವ ಹೊತ್ತಿಗೇ, ಒಂದು ತಲೆಮಾರು ಸದ್ದಿಲ್ಲದೆ ಲೈಟಾರಿಸಿ ಕೂತುಬಿಟ್ಟಿದೆ. ಅವರ ಜೀವನದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಾಗ್ತಿಲ್ಲ. ಕಾರಣ ಅವರು ಯಾವುದನ್ನೂ ಸೋಶಿಯಲ್‌ ಮೀಡಿಯಾಗೆ ತುರುಕುತ್ತಿಲ್ಲ. ಜೀವನವನ್ನು ಅನುಭವಿಸುತ್ತಾರೆ, ಆದರೆ ಪೋಸ್ಟ್‌ ಮಾಡಲ್ಲ. ಅದು ಜೆನ್‌ ಝೀ. ಅದು ಪೋಸ್ಟಿಂಗ್‌ ಜೀರೋ.

ಯುವಕರ ಇನ್ನೊಂದು ತಾತ್ಕಾಲಿಕ ಟ್ರೆಂಡ್

ಪೋಸ್ಟಿಂಗ್‌ ಜೀರೋ ಅಂದ್ರೆ ಈ ತಲೆಮಾರು ಸೋಶಿಯಲ್ ಮೀಡಿಯಾ ಖಾತೆ ಡಿಲೀಟ್ ಮಾಡುವುದಿಲ್ಲ. ಇಂಟರ್ನೆಟ್‌ನಿಂದ ದೂರ ಸರಿಯುವುದಿಲ್ಲ. ಬದಲಾಗಿ, ಏನನ್ನೂ ಹಂಚಿಕೊಳ್ಳದಿರಲು ನಿರ್ಧರಿಸಿದೆ. ಈ ಜನರೇಶನ್‌ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳನ್ನು ಬಳಸುತ್ತಲೇ ಇರುತ್ತೆ. ಆದರೆ ತಮ್ಮ ಜೀವನದ ವಿಷಯ ಅಥವಾ ಫೋಟೋ ಪೋಸ್ಟ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದು ಇಂಟರ್‌ನೆಟ್ ಜಗತ್ತಿನಲ್ಲೇ ಬೆಳೆದ ಯುವಕರ ಇನ್ನೊಂದು ತಾತ್ಕಾಲಿಕ ಟ್ರೆಂಡ್ ಅಂತ ಕಾಣಬಹುದು. ಆದರೆ ಇತ್ತೀಚಿನ ಒಂದು ಅಧ್ಯಯನ ಹೇಳುವುದೇನೆಂದರೆ, 2022ರಿಂದ ಈಚೆಗೆ ಹೊಸಬರು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಸಮಯ ಸುಮಾರು 10% ಕಡಿಮೆಯಾಗಿದೆ.

ಹಾಗಾದರೆ ಯಾಕೆ ಈ ಆಯ್ಕೆ? 

ಸೋಶಿಯಲ್ ಮೀಡಿಯಾ ಈಗ ತುಂಬಾ ಜನಸಂದಣಿಯ ತಾಣ. ತುಂಬಾ ಅಲಂಕೃತ, ತೀರಾ ಕೃತಕ ತಾಣ. ಈ ಗದ್ದಲಕ್ಕೆ ಇನ್ನಷ್ಟು ಕೊಡುಗೆ ನೀಡಿರುವುದು ಎಐ ಕಂಟೆಂಟ್‌. ಯಾವುದೇ ವಿಡಿಯೋ, ರೀಲ್‌ ನೋಡಲಿ, ನೂರರಲ್ಲಿ ಎಂಬತ್ತು ಪಾಲು ಎಐ ಸೃಷ್ಟಿ. ಅದೂ ಕಳಪೆ. ಜೆನ್‌ ಝೀಗಿಂತ ಹಿಂದಿನ ತಲೆಮಾರು ಲೈಕು ಕಮೆಂಟ್‌ಗಳಿಗಾಗಿ, ಮಾನೆಟೈಸೇಷನ್‌ಗಾಗಿ ಸಿಕ್ಕಸಿಕ್ಕದ್ದನ್ನು ಅದರಲ್ಲಿ ತುಂಬಿದೆ. ಸಹಜವಾಗಿಯೇ ಜೆನ್‌ ಝೀಯದು ಇದಕ್ಕೆ ಬಂಡಾಯ. ಅದು ಹೆಚ್ಚು ಯೋಚಿಸಿ ನಡೆದುಕೊಳ್ಳುತ್ತಿದೆ ಮತ್ತು ಕಡಿಮೆ ಪೋಸ್ಟ್ ಮಾಡುತ್ತಿದೆ.

ಸೋಶಿಯಲ್‌ ಮೀಡಿಯಾ ಎಂಬುದು ಪರ್ಸನಲ್‌ ಬ್ರಾಂಡಿಂಗ್‌- ತನ್ನನ್ನು ಸಾಧ್ಯವಾದಷ್ಟು ಘನವಾಗಿ ತೋರಿಸಿಕೊಳ್ಳುವುದು. ಆದರೆ ಇದು ಕಷ್ಟದ ಕೆಲಸವೂ ಹೌದು, ಅನೇಕ ಬಾರಿ ಪ್ರತಿಫಲ ಇಲ್ಲದ್ದೂ ಕೂಡ. ಈ ತಲೆಮಾರಿನಲ್ಲಿ ಭಾವನಾತ್ಮಕ ತಿಳುವಳಿಕೆ ಹೆಚ್ಚಿದೆ. ಅವರು ಲೈಕ್ಸ್‌ ಮತ್ತು ಕಾಮೆಂಟ್‌ಗಿಂತ ವ್ಯಕ್ತಿ ಖಾಸಗಿತನಕ್ಕೆ, ಸ್ವಾತಂತ್ರ್ಯಕ್ಕೆ ಹೆಚ್ಚು ಮೌಲ್ಯ ಕೊಡುತ್ತಿದ್ದಾರೆ. ಅವರಿಗಿಂತ ಹಿರಿಯರು ಸೂರ್ಯಾಸ್ತದ ಫೋಟೋ ತೆಗೆದುಕೊಳ್ತಾ ಇದ್ರೆ, ಇವರು ಮೌನವಾಗಿ ಅದನ್ನು ನೋಡ್ತಾ ಅನುಭವಿಸ್ತಾ ಇರುವುದನ್ನು ನೀವು ಕಾಣಬಹುದು. ಇವರಿಗೆ ಬದುಕು ಇರೋದು ‘ನೋಡಿ’ ಅಂತ ಶೋ ಮಾಡೋದಿಕ್ಕಲ್ಲ. ಅನುಭವ, ತಿಳುವಳಿಕೆ, ರೋಮಾಂಚನಕ್ಕೆ. ಅದು ತುಂಬ ಖಾಸಗಿ.

ಎಲ್ಲೋ ಪೋಸ್ಟ್‌ ಮಾಡಲ್ಲ ಅಂತಾದ್ರೆ ಎಲ್ಲಿರ್ತಾರೆ ಇವರು? ಇವರು ಹೊಸ ರೀತಿಯ ಅನುಭವಗಳನ್ನು ಹುಡುಕುತ್ತಿದ್ದಾರೆ. ಬ್ಲಾಸಂ ಬುಕ್‌ ಶಾಪ್‌ನಲ್ಲಿ ಇಂಟರ್ನ್‌ಶಿಪ್‌ ಮಾಡ್ತಾರೆ. ಪಾಟರಿ ವರ್ಕ್‌ಶಾಪ್‌, ಪೇಂಟಿಂಗ್‌ ಕಾರ್ಯಕ್ರಮ, ಭಜನಾ ಕ್ಲಬ್‌, ಬೋರ್ಡ್ ಗೇಮ್ ಕೆಫೆ, ಉದ್ಯಾನವನಗಳು, ಗ್ರಂಥಾಲಯಗಳು… ಇಲ್ಲೆಲ್ಲ ಇವರು ಬ್ಯುಸಿಯಾಗಿರೋದನ್ನು ನೋಡಬಹುದು. ಯಾವುದೂ ‘ಕಂಟೆಂಟ್‌’ಗಾಗಿ ಅಲ್ಲ, ‘ಅನುಭವ’ಕ್ಕಾಗಿ.

ಹಾಗಂತ ಆನ್‌ಲೈನ್‌ನಲ್ಲಿಯೂ ಅವರು ಸಂಪೂರ್ಣವಾಗಿ ಕಾಣೆಯಾಗಿಲ್ಲ. ಸಾರ್ವಜನಿಕ ಪೋಸ್ಟ್‌ಗಳ ಬದಲು ಖಾಸಗಿ ಸಂದೇಶಗಳು, ಚಾಟ್‌ಗಳು, ಇವುಗಳ ಮೂಲಕ ಅವರು ಸಂಪರ್ಕದಲ್ಲಿದ್ದಾರೆ. ಆನ್‌ಲೈನ್‌ನಲ್ಲಿ ಕಡಿಮೆ ಇರುವುದರಿಂದ ಜೀವನ ನಿಸ್ಸಾರವಾಗುತ್ತದೆ ಎನ್ನುವುದು ತಪ್ಪು. ಕೇವಲ ಪ್ರದರ್ಶನ ಬೇಡ, ಗಾಢತೆ ಬೇಕು ಎಂಬುದಷ್ಟೇ ಅವರ ನಿಲುವು. ಇದು ನಾವು ನೀವು ಮಾತಾಡುವ ‘ಡಿಜಿಟಲ್‌ ಡಿಟಾಕ್ಸ್‌ʼ ಕೂಡ ಅಲ್ಲ. ಟಾಕ್ಸಿಕ್‌ ಲೆವೆಲ್ಲಿಗೇ ನಾವು ಹೋಗಲ್ಲ ಎಂಬುದು ಇವರ ಅಭಿಪ್ರಾಯ, ಇನ್ನು ಡಿಟಾಕ್ಸ್‌ ಮಾತೆಲ್ಲಿಯದು.

ಇಂದು 24/7 ಎಲ್ಲರೂ ಲಭ್ಯ. ಇಂಥ ಜಗತ್ತಿನಲ್ಲಿ ಹಾಗೆ ಸುಲಭವಾಗಿ ಸಿಗದವಳೇ ಹೆಚ್ಚು ಮೌಲ್ಯ ಹೊಂದಿದ್ದಾಳೆ ಎಂಬ ಭಾವನೆ ಬೆಳೆಯುತ್ತಿದೆ. ‘ನನ್ನ ಜೀವನವನ್ನು ಸಾಬೀತುಪಡಿಸಲು ನನಗೆ ಪೋಸ್ಟ್ ಮಾಡುವ ಅಗತ್ಯವಿಲ್ಲ’ ಎಂಬ ಸಂದೇಶವೇ ಈ ಹೊಸ ಟ್ರೆಂಡ್‌ನ ಹೃದಯ. ಹಿಂದೆಲ್ಲ ‘ನೋಡಿ, ನನ್ನ ಜೀವನ ಹೇಗಿದೆ’ ಎನ್ನುವುದೇ ಸಾಮಾಜಿಕ ಜಾಲತಾಣದ ಮೂಲ ಉದ್ದೇಶವಾಗಿದ್ದರೆ, ಈಗ ಅದು ‘ನನ್ನ ಜೀವನವನ್ನು ನಾನು ಬದುಕುತ್ತೇನೆ, ನಿಮಗೆ ಹೇಳಬೇಕಿಲ್ಲ’ ಎಂಬುದಾಗಿ ಬದಲಾಗಿದೆ.

ಸೋಶಿಯಲ್ ಮೀಡಿಯಾದ ಪೋಸ್ಟ್‌ಗಳು ಈಗ ಸಹಜವಾಗಿ, ನೈಸರ್ಗಿಕವಾಗಿಲ್ಲ ಅನ್ನಿಸೋಕೆ ಒಂದು ಕಾರಣ- ಈ ಪ್ಲಾಟ್‌ಫಾರ್ಮ್‌ಗಳು ಕ್ರಿಯೇಟರ್‌ಗಳ ಪೋಸ್ಟ್‌ಗಳನ್ನು ಹೆಚ್ಚು ಪ್ರೋತ್ಸಾಹಿಸುತ್ತಿವೆ. ಒಂದು ಮಾಹಿತಿಯ ಪ್ರಕಾರ ಜಗತ್ತಿನಲ್ಲಿ ಸುಮಾರು 500 ಕೋಟಿ ಸೋಶಿಯಲ್ ಮೀಡಿಯಾ ಬಳಕೆದಾರರಿದ್ದಾರೆ. 5 ಕೋಟಿ ಕ್ರಿಯೇಟರ್‌ಗಳು ಕಂಟೆಂಟ್ ಮಾಡುತ್ತಿದ್ದಾರೆ. ಈ ಪರಿಯಲ್ಲಿ ಕಂಟೆಂಟ್‌ ಸೃಷ್ಟಿಯಾದಾಗ, ಸಹಜತೆ, ಅಧಿಕೃತತೆ, ಸಹಜಸ್ಫೂರ್ತಿ ಕಾಣುವುದು ಕಷ್ಟ. ಎಲ್ಲರೂ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಲೇಖಕ ಕೊರಿ ಡಾಕ್ಟ್ರೋ (Cory Doctorow) ಇದಕ್ಕೆ ಹುಟ್ಟುಹಾಕಿದ ಹೊಸ ಪದ- ‘enshittificationʼ- ಅಂದರೆ ತ್ಯಾಜ್ಯಸೃಷ್ಟಿ. ಇದರ ಮೂಲಕವೇ ಆನ್‌ಲೈನ್‌ ವೇದಿಕೆಗಳು ನಿಧಾನವಾಗಿ ಕೆಡುತ್ತಿವೆ. ಹಿಂದೆ, ಡಿಜಿಟಲ್ ಯುಗ ಬರುತ್ತಿದೆ ಎಂಬ ಉತ್ಸಾಹ ಜನರಿಗೆ ತುಂಬಾ ಇತ್ತು. ಉತ್ತಮವಾದದ್ದೆಲ್ಲ ತಮಗೆ ಸಿಗಬಹುದು ಅಂದುಕೊಂಡಿದ್ದರು. ಆದರೆ ಈಗ ಏನಾಗುತ್ತಿದೆ ಎಂದರೆ, ಪ್ಲಾಟ್‌ಫಾರ್ಮ್‌ಗಳು ನೀವು ಫಾಲೋ ಮಾಡಿರುವ ಜನರ ಪೋಸ್ಟ್‌ಗಳನ್ನು ಕಡಿಮೆ ತೋರಿಸಿ, ಜಾಹೀರಾತು ಮತ್ತು ಬೂಸ್ಟ್‌ ಮಾಡಿದ ಕಂಟೆಂಟ್‌‌ಗಳನ್ನು ಹೆಚ್ಚು ತೋರಿಸುತ್ತಿವೆ. ಜೆನ್‌ ಝೀ ಪ್ರಕಾರ ಅವರ ಫೀಡ್‌ಗಳ ತುಂಬಾ ಕೃತಕ ಅಲಂಕೃತ ಜೀವನಗಳು, ಜಾಹೀರಾತು ಮತ್ತು ನಮಗೆ ಅಗತ್ಯವಿಲ್ಲದ ಜನರ ಪೋಸ್ಟ್‌ಗಳು ತುಂಬಿಕೊಂಡಿವೆ. ತಮಗೆ ಬೇಕಿರುವುದು ನಿಜಕ್ಕೂ ಇದಲ್ಲ ಇದಲ್ಲ ಎನಿಸುತ್ತಿದೆ.

‘ ನಾನು ಈಗ ಕಡಿಮೆ ಪೋಸ್ಟ್ ಮಾಡುತ್ತೇನೆ. ಮೊದಲು ಹೆಚ್ಚು ಶೇರ್‌ ಮಾಡುತ್ತಿದ್ದೆ. ಈಗ ನಿಜವಾಗಿಯೂ ಅರ್ಥಪೂರ್ಣವಾದದ್ದು ಇದ್ದರೆ ಮಾತ್ರ ಪೋಸ್ಟ್ ಮಾಡುತ್ತೇನೆ. ಫಲಿತಾಂಶ ನನ್ನ ಗಮನ, ಉತ್ಪಾದಕತೆ ಹೆಚ್ಚಾಯಿತು. ಆನ್‌ಲೈನ್‌ನಲ್ಲಿ ಮೌನವಾಗಿ ಇರುವುದು ಖಾಲಿತನ ಅನಿಸ್ತಿಲ್ಲ, ಸ್ಪಷ್ಟತೆ ಅನಿಸ್ತಿದೆ. ಎಲ್ಲ ಕಡೆಯೂ ಇದ್ದೇನೆ, ಆದರೆ ಎಲ್ಲೂ ಇಲ್ಲ’ ಎನ್ನುತ್ತಾಳೆ ಆಕಾಂಕ್ಷಾ ಎಂಬ ಹುಡುಗಿ

ಇಶಾನ್‌ ಎಂಬ ಹುಡುಗನ ಅಭಿಪ್ರಾಯ ಹೀಗಿದೆ; ‘ಮೊದಲು ಸೋಶಿಯಲ್ ಮೀಡಿಯಾ ನಮ್ಮ ಸ್ವಂತಿಕೆ ವ್ಯಕ್ತಪಡಿಸಲು ಮತ್ತು ಸ್ನೇಹಿತರ ಜೊತೆ ಶೇರ್‌ ಮಾಡಲು ಬಳಸಲಾಗುತ್ತಿತ್ತು. ಆದರೆ ಈಗ ಅದು ಎಲ್ಲರ ಜೊತೆ ಸ್ಪರ್ಧೆ ಮಾಡುವ ವೇದಿಕೆ ಆಗಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯೇಟಿವ್ ಮತ್ತು ಟ್ರೆಂಡಿ ಆಗಿ ಕಾಣಿಸಿಕೊಳ್ಳಬೇಕೆಂಬ ಒತ್ತಡ ತುಂಬಾ ಹೆಚ್ಚಾಗಿದೆ. ಆ ಒತ್ತಡ ಒಂದು ಮಟ್ಟವನ್ನು ಮೀರಿ ಹೋದಾಗ, ಫೇಕ್‌ ಬದುಕು ಪೋಸ್ಟ್ ಮಾಡುವುದಕ್ಕಿಂತ ಪೋಸ್ಟ್ ಮಾಡದೇ ಇರುವುದೇ ಉತ್ತಮʼ.

ಇಶಾನ್‌ನಂತೆ ಯೋಚಿಸಿದ ಅನೇಕ ಮಂದಿ ಇದ್ದಾರೆ. ಇಂಥವರು ಖಾಸಗಿ ಅಕೌಂಟ್ಸ್‌ ಬಳಸುತ್ತಿದ್ದಾರೆ. ಆಪ್ತ ಸ್ನೇಹಿತರ ಜೊತೆ ಮಾತ್ರ ಶೇರ್‌ ಮಾಡುತ್ತಿದ್ದಾರೆ. ಇದರಿಂದ ಅವರಿಗೊಂದು ನಿರಾಳತೆ ದಕ್ಕಿದೆ.

ಸೋಶಿಯಲ್‌ ಮೀಡಿಯಾದ ಹಿಂದಿನ ಜಮಾನ ನೆನಪಿಸಿಕೊಳ್ತಿದೀರಾ? ಹಾಗಲ್ಲ ಇದು. ಅದು ಏನೂ ಇಲ್ಲದ ಜಮಾನ. ಇದು ಎಲ್ಲ ಜಗಮಗ. ಇದ್ದೂ ಅದರಿಂದ ದೂರವಿರುವ ಸ್ಥಿತಪ್ರಜ್ಞ ಜಮಾನ. ನಮ್ಮ ಕಾಲದ ಹಲವು ಒತ್ತಡಗಳಿಗೆ ಇದರಲ್ಲಿ ಮದ್ದು ಇದ್ದಂತಿದೆ. ಈ ತಲೆಮಾರಿನಿಂದ ನಾವು ಕಲಿಯುವುದು ಇನ್ನೂ ಎಷ್ಟಿದೆಯೋ.