ಕನ್ನಡಿಗ ಆಯುಶ್‌ ಶೆಟ್ಟಿ ಯುಎಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಕೆನಡಾದ ಬ್ರಿಯಾನ್‌ ಯಾಂಗ್‌ ವಿರುದ್ಧ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ ಆಯುಷ್ ಗೆ ಇದು ಚೊಚ್ಚಲ ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಕಿರೀಟ.

ಲೋವಾ(ಅಮೆರಿಕ): ಭಾರತದ ಯುವ ಶಟ್ಲರ್‌, ಕನ್ನಡಿಗ ಆಯುಶ್‌ ಶೆಟ್ಟಿ ಚೊಚ್ಚಲ ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರು ಯುಎಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

2023ರ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ 20 ವರ್ಷದ ಆಯುಶ್‌ ಸೋಮವಾರ ನಡೆದ ಫೈನಲ್‌ನಲ್ಲಿ ಕೆನಡಾದ 3ನೇ ಶ್ರೇಯಾಂಕಿತ ಬ್ರಿಯಾನ್‌ ಯಾಂಗ್‌ ವಿರುದ್ಧ 21-18, 21-13 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಟೂರ್ನಿಯುದ್ದಕ್ಕೂ ವಿಶ್ವದ ಬಲಿಷ್ಠ ಆಟಗಾರರನ್ನು ಸೋಲಿಸಿದ್ದ ಆಯುಶ್‌, ಫೈನಲ್‌ನಲ್ಲಿ 47 ನಿಮಿಷಗಳಲ್ಲೇ ಪಂದ್ಯ ಗೆದ್ದರು. ಇದು ಯಾಂಗ್‌ ವಿರುದ್ಧ ಆಯುಶ್‌ಗೆ 3ನೇ ಗೆಲುವು. ಈ ವರ್ಷ ಮಲೇಷ್ಯಾ ಹಾಗೂ ತೈಪೆ ಓಪನ್‌ನಲ್ಲೂ ಜಯಗಳಿಸಿದ್ದರು.

Scroll to load tweet…

ಮಂಗಳೂರಿನ ಕಾರ್ಕಳದವರಾದ ಆಯುಶ್‌ 2023ರಲ್ಲಿ ಒಡಿಶಾ ಮಾಸ್ಟರ್ಸ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು. ಅಲ್ಲದೆ, ಬಹರೈನ್‌ ಇಂಟರ್‌ನ್ಯಾಷನಲ್‌ ಹಾಗೂ 2024ರ ಡಚ್‌ ಓಪನ್‌ನಲ್ಲೂ 2ನೇ ಸ್ಥಾನಿಯಾಗಿದ್ದರು.

ತಾನ್ವಿಗೆ ತಪ್ಪಿದ ಕಿರೀಟ:

ಮಹಿಳಾ ಸಿಂಗಲ್ಸ್‌ನಲ್ಲಿ 16 ವರ್ಷದ ತಾನ್ವಿ ಶರ್ಮಾ ರನ್ನರ್-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಚೊಚ್ಚಲ ವಿಶ್ವ ಟೂರ್‌ ಫೈನಲ್‌ ಆಡಿದ ತಾನ್ವಿ, ಅಮೆರಿಕದ ಬೀವೆನ್‌ ಝಾಂಗ್‌ ವಿರುದ್ಧ 11-21, 21-16, 10-21ರಲ್ಲಿ ಪರಾಭವಗೊಂಡರು. ಕಳೆದ ವರ್ಷ ಒಡಿಶಾ ಮಾಸ್ಟರ್ಸ್‌ನಲ್ಲೂ ತಾನ್ವಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

₹15.4 ಲಕ್ಷ: ಪುರುಷರ ಸಿಂಗಲ್ಸ್ ವಿಜೇತ ಆಯುಶ್‌ ₹15.44 ಲಕ್ಷ ನಗದು ಬಹುಮಾನ ಪಡೆದರು.

₹7.8 ಲಕ್ಷ: ಮಹಿಳಾ ಸಿಂಗಲ್ಸ್ ರನ್ನರ್‌ಅಪ್‌ ತಾನ್ವಿಗೆ ₹7.8 ಲಕ್ಷ ನಗದು ಬಹುಮಾನ ಲಭಿಸಿತು.

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ: ಸಬಲೆಂಕಾ ಶುಭಾರಂಭ

ಲಂಡನ್: ಚೊಚ್ಚಲ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಗೆಲ್ಲುವ ಗುರಿಯೊಂದಿಗೆ ಈ ಬಾರಿ ಟೂರ್ನಿಗೆ ಕಾಲಿಟ್ಟಿರುವ ವಿಶ್ವ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಭರ್ಜರಿ ಶುಭಾರಂಭ ಮಾಡಿದ್ದಾರೆ.

2 ಬಾರಿ ಆಸ್ಟ್ರೇಲಿಯನ್ ಓಪನ್‌, 1 ಬಾರಿ ಯುಎಸ್‌ ಓಪನ್‌ ಗೆದ್ದಿರುವ ಬೆಲಾರಸ್‌ನ ಸಬಲೆಂಕಾ ಸೋಮವಾರ ನಡೆದ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಕೆನಡಾದ ಕಾರ್ಸನ್‌ ಬ್ರಾನ್ಸ್‌ಟಿನ್‌ ವಿರುದ್ಧ 6-1, 7-5 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಉಕ್ರೇನ್‌ನ 14ನೇ ಶ್ರೇಯಾಂಕಿತ ಸ್ವಿಟೋಲಿನಾ ಕೂಡಾ 2ನೇ ಸುತ್ತಿಗೇರಿದರು. ಆದರೆ 20ನೇ ಶ್ರೇಯಾಂಕಿತ ಓಸ್ಟಾಪೆಂಕೊ ಸೋತು ಹೊರಬಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ಯುಎಸ್‌ ಓಪನ್‌ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌, 8ನೇ ಶ್ರೇಯಾಂಕಿತ ಹೋಲ್ಗರ್ ರ್‍ಯುನ್‌ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು.

ಸಿಂಗಲ್ಸ್‌ನಲ್ಲಿ ಭಾರತೀಯ ಆಟಗಾರರಿಲ್ಲ: ನಾಲ್ವರು ಪುರುಷ ಡಬಲ್ಸ್‌ನಲ್ಲಿ ಸ್ಪರ್ಧೆ

ಈ ಬಾರಿ ವಿಂಬಲ್ಡನ್‌ ಟೆನಿಸ್‌ನ ಪುರುಷ, ಮಹಿಳಾ ಸಿಂಗಲ್ಸ್‌ನಲ್ಲಿ ಯಾವುದೇ ಭಾರತೀಯರು ಇಲ್ಲ. ಆದರೆ ಪುರುಷರ ಡಬಲ್ಸ್‌ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಸೇರಿ ನಾಲ್ವರು ಆಡಲಿದ್ದಾರೆ. ಬೋಪಣ್ಣ ಬೆಲ್ಜಿಯಂನ ಸ್ಯಾಂಡರ್‌ ಗಿಲ್‌ ಜೊತೆಗೂಡಿ ಕಣಕ್ಕಿಳಿಯಲಿದ್ದು, ಯೂಕಿ ಭಾಂಭ್ರಿ ಅಮೆರಿಕದ ರಾಬರ್ಟ್‌ ಗ್ಯಾಲೊವೇ ಜೊತೆಗೂಡಿ ಸ್ಪರ್ಧಿಸಲಿದ್ದಾರೆ. ರಿಥ್ವಿಕ್‌ ಬೊಲ್ಲಿಪಲ್ಲಿ ರೊಮಾನಿಯಾದ ನಿಕೋಲಸ್‌ ಬ್ಯಾರಿಯೆಂಟೋಸ್‌ ಜೊತೆಗೆ ಹಾಗೂ ಶ್ರೀರಾಮ್‌ ಬಾಲಾಜಿ ಅವರು ಮೆಕ್ಸಿಕೋದ ರೆಯೆಸ್‌ ವೆರೆಲಾ ಜೊತೆಗೂಡಿ ಆಡಲಿದ್ದಾರೆ.