ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ತೆರೆಯಲು ಅನುಮತಿ ನೀಡಲಾಗಿದ್ದು, ಇದು ಟೆಂಡರ್ ಪ್ರಕ್ರಿಯೆ ಮೂಲಕ ನಡೆದಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಂದಿನಿ ಮಳಿಗೆಗಳಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಜನರು ಅಮುಲ್ ಮಳಿಗೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜೂ. 18): ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಎಲ್ಲಾ ಪ್ರಕ್ರಿಯೆ ಗ್ಲೋಬಲ್ ಟೆಂಡರ್ ಮೂಲಕ ನಡೆದಿರುವುದು, ಯಾವುದೇ ಹಸ್ತಕ್ಷೇಪವಿಲ್ಲದೇ ನ್ಯಾಯಬದ್ಧವಾಗಿ ನಡೆದ ಕಾರ್ಯ. ಅಮುಲ್ ಮಳಿಗೆ ಸ್ಥಾಪನೆ ತಡೆಯಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಬಿಎಂಆರ್‌ಸಿಎಲ್ (BMRCL) ಗ್ಲೋಬಲ್ ಟೆಂಡರ್ ಪ್ರಕಟಿಸಿತ್ತು. ಈ ಟೆಂಡರ್ ಪ್ರಕ್ರಿಯೆಯ ಅನ್ವಯ, ಬೆಂಗಳೂರು ನಗರದ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಇದು ಯಾವುದೇ ಹಸ್ತಕ್ಷೇಪ ಇಲ್ಲದ ಸ್ಪರ್ಧಾತ್ಮಕ ಪ್ರಕ್ರಿಯೆ ಆಗಿತ್ತು. ಅದರಲ್ಲಿ ಅಮುಲ್ ಸಂಸ್ಥೆ ಟೆಂಡರ್ ಮೂಲಕ ಬಂದಿರುವ ಕಾರಣದಿಂದ ಈಗ ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ'

ಕೆಎಂಎಫ್‌ಗೆ 8 ನಂದಿನಿ ಮಳಿಗೆ ತೆರೆಯಲು ಅವಕಾಶ:

ಇದೇ ವೇಳೆ ಡಿಸಿಎಂ ಡಿಕೆಶಿ, ರಾಜ್ಯದ ಹೆಮ್ಮೆ ನಂದಿನಿ (ಕರ್ನಾಟಕ ಹಾಲು ಒಕ್ಕೂಟ-ಕೆಎಂಎಫ್) ಮಾರುಕಟ್ಟೆ ವ್ಯಾಪ್ತಿಯೂ ಬೆಳೆಯಬೇಕೆಂಬ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದಾಗಿ ಹೇಳಿದರು. 'ಕೆಎಂಎಫ್‌ಗೂ ಸೂಚನೆ ನೀಡಿದ್ದೇವೆ. ಎಂಟು ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳು ಕೂಡಾ ಸ್ಥಾಪನೆಯಾಗಲಿವೆ. ಸರ್ಕಾರದ ಉದ್ದೇಶ ಯಾವ ಬ್ರ್ಯಾಂಡ್ ಅನ್ನು ಬೆಳೆಸುವುದು ಅಲ್ಲ, ಸಾರ್ವಜನಿಕರ ಸೇವೆಗೆ ಉತ್ತಮ ಆಯ್ಕೆ ನೀಡುವುದು' ಎಂದು ಡಿಕೆ ಶಿವಕುಮಾರ್ ಹೇಳಿದರು.

ಸಿಟಿ ರವಿ ಪ್ರತಿಕ್ರಿಯೆ: ನಂದಿನಿಗೆ ಸಮಾನ ಅವಕಾಶ ನೀಡಬೇಕು

ಇದೇ ವಿಚಾರವಾಗಿ ಮಾಜಿ ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡುತ್ತಾ, 'ನಂದಿನಿಗೆ ಮಳಿಗೆ ತೆರೆಯಲು ಸ್ಪರ್ಧೆಯ ಅವಕಾಶವೇ ಇಲ್ಲದಿದ್ದರೆ ಅದು ತಪ್ಪು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ಅಮೂಲ್ ಗೆ ಅವಕಾಶ ಸಿಕ್ಕಿರಬಹುದು. ಇಲ್ಲಿ ರಾಜಕೀಯದಿಂದ ದೂರವಿರುವ ಆರೋಗ್ಯಕರ ಸ್ಪರ್ಧೆ ಇರಬೇಕು. ನಮ್ಮ ನಂದಿನಿ ಕೂಡಾ ಉತ್ತರ ಪ್ರದೇಶ, ದೆಹಲಿಯಂತಹ ರಾಜ್ಯಗಳಲ್ಲಿ ಮಳಿಗೆ ತೆರೆಯುತ್ತಿದೆ. ನಂದಿನಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಮಳಿಗೆ ತೆರೆಯುವ ಸಾಮರ್ಥ್ಯ ಬರಲಿ. ಸರ್ಕಾರ ಕನಿಷ್ಟ 10 ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿಗೆ ಮಳಿಗೆ ಮೀಸಲು ಇರಿಸಲಿ. ರೈತರ ಬ್ರ್ಯಾಂಡ್‌ಗಳು ಸ್ಪರ್ಧೆ ಮಾಡಲಿ. ಅದು ದೆಶದ ಪ್ರಗತಿಯ ಮಾರ್ಗವಾಗುತ್ತದೆ' ಎಂದು ಹೇಳಿದರು.

ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆ ಆರಂಭಿಸಲು ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. 'We want Nandini booth not amul...' ಎಂದು ಟ್ಯಾಗ್‌ಲೈನ್ ಸೃಷ್ಟಿಸಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಜೊತೆಗೆ, ಸಿಎಂ ಸಿದ್ದರಾಮಯ್ಯ ಅವರ ಕನ್ನಡ ಪ್ರೀತಿ ಎಲ್ಲಿ ಹೋಯ್ತು.? ಸೇವ್ ನಂದಿನಿ (Save Nandini) ಅಭಿಯಾನ ಇದೆನಾ.? I ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಹೋರಾಟ ಮಾಡಿದ ಕಾಂಗ್ರೆಸ್ ಈಗ ಸುಮ್ಮನಿರೋದು ಯಾಕೆ.? ನಮ್ಮದೇ ಕೆಎಂಎಫ್ ನಂದಿನಿ ಇರುವಾಗ ಅಮುಲ್‌ಗೆ ಯಾಕೆ ಅವಕಾಶ ಯಾಕೆ.? ಎಂದು ಸರ್ಕಾರದ ವಿರುದ್ಧ ಆಕ್ರೋಶಭರಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಬೆಂಗಳೂರಿನ ಯಾವ 10 ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಬರಲಿದೆ?

ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಲಿ. ಜೊತೆಗೆ BMRCL ಒಪ್ಪಂದದ ಮೂಲಕ ಬೆಂಗಳೂರಿನ ಪ್ರಮುಖ 10 ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಟ್ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ.ವಿಶ್ವೇಶ್ವರಯ್ಯ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು, ಜಯನಗರ ಹಾಗೂ ನಿಲ್ದಾಣದಲ್ಲಿ ಅಮುಲ್ ಮಳಿಗೆಗಳು ತೆಲೆಯೆತ್ತಲಿವೆ.