ಬೆಂಗಳೂರಿನ ಬ್ಯಾಟರಾಯನಪುರದ ಅಪಾರ್ಟ್ಮೆಂಟ್‌ ಒಂದರಲ್ಲಿ, ಸಿವಿಲ್ ಡ್ರೆಸ್‌ನಲ್ಲಿದ್ದ ಇಬ್ಬರು ಪೊಲೀಸರು ಅಧ್ಯಕ್ಷ ಕೆ.ಸಿ.ರಾಜಪ್ಪ ಅವರ ಮೇಲೆ ದಬ್ಬಾಳಿಕೆ ನಡೆಸಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಪೂರ್ಣ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು(ಸೆ.18): ಅಪಾರ್ಟ್ಮೆಂಟ್ ನಿವಾಸಿಯ ಮೇಲೆ ಪೊಲೀಸರಿಬ್ಬರು ದಬ್ಬಾಳಿಕೆ ಮಾಡಿರುವ ಘಟನೆ ಬ್ಯಾಟರಾಯನ ಪುರದ ವಿ೨ ಸ್ನೇಹ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ ಅಧ್ಯಕ್ಷ ಕೆ.ಸಿ.ರಾಜಪ್ಪ ಎಂಬುವರ ಮೇಲೆ ಹಲ್ಲೆ ಯತ್ನ ನಡೆಸಿದ್ದಾರೆ.

ಗಿರಿನಗರ ಪೊಲೀಸರೆಂದು ಕೆಸಿ ರಾಜಪ್ಪ ಮೇಲೆ ಹಲ್ಲೆ:

ಅಪರಿಚಿತ ಇಬ್ಬರು ವ್ಯಕ್ತಿಗಳು ಸಿವಿಲ್ ಡ್ರೆಸ್ ನಲ್ಲಿ ಬಂದು ಸಿಸಿಟಿವಿ ಪರೀಶಿಲನೆ ಮಾಡುತ್ತಿರುತ್ತಾರೆ. ಅಪಾರ್ಟ್ಮೆಂಟ್ ಅಧ್ಯಕ್ಷ ಕೆ.ಸಿ ರಾಜಪ್ಪ ಹೋಗಿ ಸಿವಿಲ್ ಡ್ರೆಸ್ ನಲ್ಲಿದ್ದ ಕಾರಣ ಇಬ್ಬರಿಗೆ ವಿಚಾರಿಸಿದ್ದಾರೆ. ಗಿರಿನಗರ ಪೊಲೀಸರೆಂದು ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಪ್ರತಿಯಾಗಿ ಅಪಾರ್ಟ್ಮೆಂಟ್ ನಿವಾಸಿ ರಾಜಪ್ಪ ಮಾತನಾಡಿದಾಗ ಹೆಚ್ಚಿಗೆ ಮಾತನಾಡಿದ್ರೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಕೇಸ್ ದಾಖಲು ಮಾಡಿ ಅರೆಸ್ಟ್ ಮಾಡಿಕೊಂಡು ಹೋಗೊದಾಗಿ ಬೆದರಿಸಿದ್ದಾರೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಪೊಲೀಸರಿಬ್ಬರು ಅಪಾರ್ಟ್ಮೆಂಟ್ ನಿವಾಸಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಸಿಸಿಟಿವಿಯಲ್ಲಿ ದಾಖಲಾಯ್ತು ಹಲ್ಲೆ ದೃಶ್ಯ:

ಪೇದೆಗಳಿಬ್ಬರು ಹಲ್ಲೆಗೆ ಯತ್ನಿಸಿರುವ ದೃಶ್ಯ ಅಪಾರ್ಟ್ಮೆಂಟ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಗೆ ಬಂದು ಗಲಾಟೆ ಮಾಡಿದ್ದ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ ಗಳ ವಿರುದ್ಧ ದೂರು ಕೊಡಲು ಅಪಾರ್ಟ್ಮೆಂಟ್ ನಿವಾಸಿಗಳು ಮುಂದಾಗಿದ್ದಾರೆ. ಅಪಾರ್ಟ್ಮೆಂಟ್ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರಣ ಇಬ್ಬರು ಪೊಲೀಸರ ಮೇಲೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಮುಂದಾಗಿದ್ದಾರೆ.