ಇಂದು ಬಸವ ಜಯಂತಿ. ನಾಡೆಲ್ಲ ಸಂಭ್ರಮದಿಂದ ಬಸವಣ್ಣನವರ ಜಯಂತಿ ಆಚರಣೆಯಲ್ಲಿದೆ. ಹಾಗೆ ನೋಡಿದರೆ ಆ ಮಹಾ ವಿಭೂತಿ ಪುರುಷನ ಸ್ಮರಣೆಗೆ ಇಂಥದೇ ದಿನವಾಗಬೇಕು ಎಂದೇನಿಲ್ಲ. ಯಾಕೆಂದರೆ ಬಸವಣ್ಣ ನಮ್ಮ ಮನದ ತೊಳಲಾಟಗಳಿಗೆ, ಮುಖ್ಯವಾಗಿ ಈ ಸಮಾಜದ ಅಸಮಾನತೆಯ, ಭೇದ ಭಾವಗಳ ರೋಗಕ್ಕೆ ಸಂಜೀವಿನಿ ಶಕ್ತಿಯ ಉಪಶಮನದ ರೂಪದಲ್ಲಿ ನಿತ್ಯವೂ ಒದಗಿ ಬರುವ ಆತ್ಮಸಖನಿದ್ದಂತೆ.
ಇಂದು ಬಸವ ಜಯಂತಿ. ನಾಡೆಲ್ಲ ಸಂಭ್ರಮದಿಂದ ಬಸವಣ್ಣನವರ ಜಯಂತಿ ಆಚರಣೆಯಲ್ಲಿದೆ. ಹಾಗೆ ನೋಡಿದರೆ ಆ ಮಹಾ ವಿಭೂತಿ ಪುರುಷನ ಸ್ಮರಣೆಗೆ ಇಂಥದೇ ದಿನವಾಗಬೇಕು ಎಂದೇನಿಲ್ಲ. ಯಾಕೆಂದರೆ ಬಸವಣ್ಣ ನಮ್ಮ ಮನದ ತೊಳಲಾಟಗಳಿಗೆ, ಮುಖ್ಯವಾಗಿ ಈ ಸಮಾಜದ ಅಸಮಾನತೆಯ, ಭೇದ ಭಾವಗಳ ರೋಗಕ್ಕೆ ಸಂಜೀವಿನಿ ಶಕ್ತಿಯ ಉಪಶಮನದ ರೂಪದಲ್ಲಿ ನಿತ್ಯವೂ ಒದಗಿ ಬರುವ ಆತ್ಮಸಖನಿದ್ದಂತೆ.
ಬಸವಣ್ಣನವರ ಜೀವನ, ಆದರ್ಶ, ಮಾನವೀಯ ಮೌಲ್ಯಗಳು, ನಿಜವಾದ ಧರ್ಮದ ಕುರಿತು ಅವರಿಗಿದ್ದ ಉಪಮಾತೀತ ವಾದ ಜ್ಞಾನ ಇವೆಲ್ಲವೂ ಇಂದಿಗೂ ಪ್ರಸ್ತುತ. ಇನ್ನೂ ಸಹಸ್ರ ವರ್ಷಗಳು ಗತಿಸಿದರೂ ಸಹ ಪ್ರಸ್ತುತವೇ. ಹಾಗಾಗಿ, ಜಯಂತಿಯೆಂಬ ಈ ನಿಮಿತ್ತವು ಒಂದು ಸಂಭ್ರಮಾಚರಣೆಗೆ ಕಾರಣವಾದರೆ, ಬಸವಣ್ಣನವರ ಚಿಂತನೆಗಳು ವಚನಗಳ ಮೂಲಕ ನಮಗೆಲ್ಲ ಪಥ ಪ್ರದರ್ಶಕವಾಗುವ ದಾರಿ ದೀಪಗಳಂತೆ.
ಇದನ್ನೂ ಓದಿ: ವಿಜಯಪುರದಲ್ಲಿ ಶೀಘ್ರವೇ ಸಚಿವ ಸಂಪುಟ ಸಭೆ: ಎಂ.ಬಿ. ಪಾಟೀಲ್
ಅದಕ್ಕೆ ಹೇಳಿದ್ದು, ಬಸವಣ್ಣ ಎಂದರೆ ನಿತ್ಯವೂ ಒದಗಿಬರುವ ಆತ್ಮಸಖ. ಇಂಥ ಬಸವಣ್ಣನವರನ್ನು ಕರ್ನಾಟಕ ಸರ್ಕಾರವು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದು ಅತ್ಯಂತ ಉಚಿತವಾದ ನಿರ್ಧಾರ. ಬಸವಣ್ಣನವರ ಅಧ್ಯಾತ್ಮ ಸಾಧನಾ ಜೀವನದ ಆರಂಭ ಹಾಗೂ ಅಂತ್ಯದ ಬಿಂದುಗಳೆರಡರ ಸಂಗಮವೂ ಆಗಿರುವ ಕೂಡಲಸಂಗಮದಲ್ಲಿ ಎರಡು ದಿನಗಳ ‘ಅನುಭವ ಮಂಟಪ ಬಸವಾದಿ ಶರಣರ ವೈಭವ-2025’ ಎಂಬ ಸಮಾರಂಭವನ್ನು ನಡೆಸುತ್ತಿರುವುದೂ ಸಹ ಅಭಿನಂದನಾರ್ಹ ಕೆಲಸ.
ಈ ಸುಸಂದರ್ಭದಲ್ಲಿ ಬಸವಣ್ಣನವರ ಐತಿಹಾಸಿಕತೆಯ ಕುರಿತು ಪ್ರಾಚೀನ ಶಾಸನಗಳ ಆಧಾರದಲ್ಲಿ ನಾವು ಕಂಡುಕೊಂಡಿರುವ ಸತ್ಯಗಳ ಒಂದು ಅವಲೋಕನ ಇಲ್ಲಿದೆ. ಒಂದು ಕಾಲದಲ್ಲಿ ಬಸವಣ್ಣನವರು ಕೇವಲ ಪುರಾಣ ಪುರುಷರು, ಅವರು ಐತಿಹಾಸಿಕ ವ್ಯಕ್ತಿಯಲ್ಲ ಎಂದು ಹೇಳಿ ವಾದಿಸಿದ್ದ ಕೆಲವು ಪಂಡಿತರಿದ್ದರು. ಆದರೆ, ತದನಂತರ ಸಂಶೋಧನೆಗೊಂಡ ಅನೇಕ ಶಾಸನಗಳು ಬಸವಣ್ಣನವರು ಒಬ್ಬ ಐತಿಹಾಸಿಕ ವ್ಯಕ್ತಿ, ಇತಿಹಾಸ ಪುರುಷರು ಎನ್ನುವುದನ್ನು ಯಾವ ಅನುಮಾನಗಳಿಗೂ ಎಡೆಯಿಲ್ಲದಂತೆ ಸಾಬೀತುಪಡಿಸಿವೆ.
ಕಣ್ಣಾನೂರು ಶಾಸನ:
ಬಸವಣ್ಣನವರ ಉಲ್ಲೇಖವಿರುವ ಸಂಶೋಧನೆಯಲ್ಲಿ ಲಭ್ಯವಾಗಿರುವ ಅತ್ಯಂತ ಪುರಾತನ ಶಾಸನ. ಹೊಯ್ಸಳ ಸೋಮೇಶ್ವರನ ಈ ಶಾಸನವು ಸಾಮಾನ್ಯ ಶಕವರ್ಷ 1271. ಈ ಶಾಸನದಲ್ಲಿ ಬಸವಣ್ಣನವರನ್ನು ‘ಕರಸ್ಥಲ ಬಸವಿದೇವ’ ಎಂದು ಉಲ್ಲೇಖಿಸಲಾಗಿದೆ. ಬಸವಣ್ಣನವರ ಒಂದು ವಚನದಲ್ಲಿ ‘ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ’ ಎಂದಿರುವುದೂ ಗಮನಾರ್ಹ.
ಹಿರಿಯೂರು ಶಾಸನ:
ಹೊಯ್ಸಳರ ಮೂರನೇ ನರಸಿಂಹನ ಆಳ್ವಿಕೆಯಲ್ಲಿನ ಈ ಶಾಸನದ ಕಾಲ ಸಾ.ಶ.1258-59. ಈ ಶಾಸನದ ಐದರಿಂದ ಏಳನೆಯ ಸಾಲುಗಳಲ್ಲಿ ‘ಸಿರಿಯಾಳ್ವಂ ಬಸವಯ್ಯನೊಳ್ಪೆಸೆವ…ಮಂ ಬಾಣನುಂ’ ಎಂದು ಉಲ್ಲೇಖಿಸಲಾಗಿದ್ದು ಬಸವಣ್ಣ ನವರನ್ನು ಭಕ್ತ ಸಿರಿಯಾಳ, ಬಾಣರಂಥ ಶಿವಶರಣರ ಜೊತೆ ಹೆಸರಿಸಲಾಗಿದೆ.
ಇದನ್ನೂ ಓದಿ: ಕೂಡಲ ಸಂಗಮದಲ್ಲಿ ಬಸವ ಜಯಂತಿ ವಿಶೇಷ ಆಚರಣೆಗೆ ನಿರ್ಧಾರ: ಕಾರ್ಯಕ್ರಮಕ್ಕೆ ಸಿಎಂ ಚಾಲನೆ!
ಅರ್ಜುನವಾಡ ಶಾಸನ:
ಸೇವುಣರ ರಾಜ ಕನ್ನರನ ಅವಧಿಯ ಈ ಶಾಸನದ ಕಾಲ ಸಾ.ಶ 1260. ಈ ಶಾಸನದಲ್ಲಿ ಉಲ್ಲೇಖಿಸಿರುವ ಈ ವಾಕ್ಯಗಳನ್ನು ಗಮನಿಸಿ:
‘ಮಂಗಳಕೀರ್ತಿ ಪುರಾತನ
ಜಂಗಮ ಲಿಂಗೈಕ ಭಕ್ತಿ ನಿರ್ಬ್ಬರ ಲೀಲಾ
ಸಂಗಂ ಸಂಗನಬಸವಂ
ಸಂಗತಿಯಂ ಮಾಳ್ಕೆ ಭಕ್ತಿಯೊಳು(ಳ) ಗನವರತಂ’
ಇಲ್ಲಿ ಬಸವಣ್ಣನವರನ್ನು ‘ಸಂಗನ ಬಸವ’ ಎಂದು ಕರೆಯಲಾಗಿದ್ದು ಬಸವಣ್ಣನವರು ಕೂಡಲಸಂಗಮನ ಅನವರತ ಭಕ್ತರಾಗಿ ತಮ್ಮ ವಚನಗಳಲ್ಲಿ ಅಂಕಿತವಾಗಿಸಿಕೊಂಡಿರುವುದು ಸ್ಮರಣಾರ್ಹ. ಮುಂದುವರಿದು ಈ ಶಾಸನವು ಬಸವಣ್ಣ ನವರನ್ನು ‘ಬಸವರಾಜ’ ಎಂದು ಕರೆದು ಅವರಿಗೊಬ್ಬ ‘ದೇವರಾಜ’ ಎಂಬ ಹೆಸರಿನ ಅಣ್ಣನೂ ಇದ್ದ ವಿಷಯವನ್ನು ಸಹ ಉಲ್ಲೇಖಿಸುತ್ತದೆ. ಈ ಶಾಸನದಿಂದ ನಮಗೆ ಬಸವಣ್ಣನವರು ತರ್ದವಾಡಿ (ಇಂದಿನ ಬಿಜಾಪುರ ಅಥವಾ ವಿಜಯಪುರ ಜಿಲ್ಲೆಯ ಪ್ರದೇಶ) ಯಲ್ಲಿನ ‘ಬಾಗವಾಡಿ’ (ಇಂದಿನ ಬಾಗೇವಾಡಿ ಅಥವಾ ಬಸವನ ಬಾಗೇವಾಡಿ) ಪಟ್ಟಣದ ‘ಪುರವರಾಧೀಶ್ವರ’ (ಊರ ರಾಜ) ಮಾದಿರಾಜರ ಎರಡನೆಯ ಮಗನಾಗಿದ್ದು ಬಸವಣ್ಣನವರ ‘ಅಗ್ರಜ’ ಎಂದರೆ ಅಣ್ಣನ ಹೆಸರು ದೇವರಾಜ ಎಂದು ಉಲ್ಲೇಖಿಸಿ ನಂತರ ದೇವರಾಜನ ವಂಶಾವಳಿಯನ್ನು ನೀಡುತ್ತದೆ.
ಬಸವಣ್ಣನವರ ತಾಯಿ ಮಾದಲಾಂಬಿಕೆಯವರ ಊರಾದ ಇಂಗುಳೇಶ್ವರವು ಬಾಗೇವಾಡಿಗೆ ಹತ್ತಿರದ ಊರು. ಇದಲ್ಲದೆ ಬಸವಣ್ಣನವರಿಗೆ ಅಕ್ಕನಾಗಮ್ಮ ಎಂಬ ಒಬ್ಬ ತಂಗಿಯೂ ಇದ್ದು ಅವರು ಬಹುಜನರು ತಿಳಿದಿರುವಂತೆ ಬಸವಣ್ಣನವರ ಅಕ್ಕ ಅಲ್ಲ ಆದರೆ ಅವರ ತಂಗಿ. ಯಾಕೆಂದರೆ ಅಕ್ಕನಾಗಮ್ಮನವರನ್ನು ಬಸವಣ್ಣನವರ ‘ಅನುಜೆ’ (ತಂಗಿ) ಎಂದೇ ಪೂರ್ವದ ಕೃತಿಗಳಲ್ಲಿ ದಾಖಲಿಸಿರುವುದರಿಂದ ಆಕೆ ಬಸವಣ್ಣನವರ ‘ಅಗ್ರಜೆ’ (ಅಕ್ಕ) ಅಲ್ಲ ಬದಲಿಗೆ ಅವರ ತಂಗಿ ಎಂದು ಗೊತ್ತಾ ಗುತ್ತದೆ.
ಚೌಡದಾನಪುರ ಶಾಸನ:
ಸೇವುಣರ ರಾಜ ಮಹಾದೇವನ ಈ ಶಾಸನದ ಕಾಲ ಸಾ.ಶ 1261. ಇಲ್ಲಿ ಬಸವಣ್ಣನವರನ್ನು ಸಂಗಮೇಶನ (ಶಿವ) ಮಗ ‘ಬಸವಯ್ಯ’ ಎಂದು ಉಲ್ಲೇಖಿಸಲಾಗಿದೆ.
ಮರಡಿಪುರ ಶಾಸನ:
ಸಾ.ಶ 1280 ರ ಈ ಶಾಸನದಲ್ಲಿ ಬಸವಣ್ಣನವರನ್ನು ‘ಸಂಗನ ಬಸವಯ್ಯ’ ಎಂದು ಕರೆಯಲಾಗಿದ್ದು ಇದರ ಜೊತೆಗೆ ಇತರ ಶಿವಶರಣರಾದ ಸಿರಿಯಾಳ, ದಾಸಿಮಯ್ಯ ಮುಂತಾದವರ ಉಲ್ಲೇಖವೂ ಇದೆ.
ಕಲ್ಲೇದೇವರಪುರ ಶಾಸನ:
ಸಾ.ಶ1280 ರ ಕಾಲದ ಈ ಶಾಸನವು ಸೇವುಣರ ರಾಜ ರಾಮಚಂದ್ರನ ಅವಧಿಯಲ್ಲಿ ಹಾಕಿಸಿದ್ದು. ಇಲ್ಲಿ ಬಸವಣ್ಣನವರನ್ನು ‘ಬಸವರಾಜ’ ಎಂದು ಕರೆಯಲಾಗಿದ್ದು ನಂಬಿಯಣ್ಣನೇ ಮೊದಲಾದ ಇತರ ಶಿವಶರಣರ ದಾಖಲೆಯೂ ಇದೆ.
ಸೊರಟೂರ ಶಾಸನ:
ಈ ಶಾಸನವು ಸಾ.ಶ ೧೩೫೬ ರ ಕಾಲಕ್ಕೆ ಸೇರಿದ್ದು ಇದರಲ್ಲಿ ಬಸವಣ್ಣನವರನ್ನು ‘ಬಸವೇಶ್ವರ’ ಎಂದು ಕರೆಯಲಾಗಿದೆ.
ಗುಡಿಹಾಳ-ಕುಂಟೋಜಿ ಶಾಸನ:
ಸುಮಾರು ೧೪ನೆಯ ಶತಮಾನಕ್ಕೆ ಸೇರಿದ ಈ ಶಾಸನದಲ್ಲಿ ಬಸವಣ್ಣನವರನ್ನು ‘ಸಂಗಮನಾಥ ಬಸವರಾಜದೇವ’ ಎಂದು ದಾಖಲಿಸಲಾಗಿದೆ.
ನಾಗಲೋಟಿ ಶಾಸನ:
ಹಂಪಿಯ ವಿಜಯನಗರ ಸಾಮ್ರಾಜ್ಯದ ಅಳಿಯ ರಾಮರಾಯನ ಆಳ್ವಿಕೆಯಲ್ಲಿ ಹಾಕಿಸಿದ ಈ ಶಾಸನದ ಕಾಲ ಸಾ.ಶ 1624. ಇದರಲ್ಲಿ ಬಸವಣ್ಣನವರನ್ನು ‘ಕಲ್ಯಾಣ ಬಸವೇಶ್ವರ’ ಎಂದು ಕರೆದಿದ್ದು ಇಲ್ಲಿ ಬರುವ ಕಲ್ಯಾಣದ ಉಲ್ಲೇಖ ನಿಸ್ಸಂಶಯವಾಗಿ ಇಂದಿನ ಬಸವಕಲ್ಯಾಣವೇ ಆಗಿದೆ.
ಜೋಡಿದಾಸೇನಹಳ್ಳಿ ಶಾಸನ:
ಸಾ.ಶ 1686ರ ಕಾಲದ ಈ ಶಾಸನದಲ್ಲಿ ಬಸವಣ್ಣನವರನ್ನು ‘ಸಂಗನ ಬಸವರಾಜೇಂದ್ರ’ ಎಂದು ಕರೆಯಲಾಗಿದೆ. ಕಾನಕಾನಹಳ್ಳಿ ಶಾಸನಗಳು:
ಸಾಮಾನ್ಯ ಶಕ 1700ರ ಕಾಲದ ಈ ತಾಮ್ರಪಟ ಶಾಸನಗಳಲ್ಲಿ ಬಸವಣ್ಣನವರನ್ನು ‘ಕಲ್ಯಾಣ ಪಟ್ಟಣದ ಬಸವೇಶ್ವರ ಸ್ವಾಮಿ’ ಮತ್ತು ‘ಕಲ್ಯಾಣದ ಬಸವಪ್ಪಾನವರು’ ಎಂದು ಉಲ್ಲೇಖಿಸಲಾಗಿದೆ. ಹೀಗೆ ಇಂಥ ಅನೇಕ ಶಾಸನಗಳು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಬಸವಣ್ಣನವರು ಒಬ್ಬ ಇತಿಹಾಸ ಪುರುಷರು ಎಂದು ಸಾಬೀತುಪಡಿಸುತ್ತವೆ. ಈ ಎಲ್ಲ ಶಾಸನಗಳನ್ನು ಕಾಲಾನುಕ್ರಮವಾಗಿ ಅಧ್ಯಯನ ಮಾಡುತ್ತ ಬಂದಾಗ ತಿಳಿಯುವುದೇನೆಂದರೆ ಬಸವಣ್ಣನವರು ಜನರ ದೃಷ್ಟಿಯಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಂದ ದೇವನ ಸ್ಥಾನಕ್ಕೇರಿದ ಸೋಜಿಗ. ಅದು ಒಂದರ್ಥದಲ್ಲಿ ಬಸವಣ್ಣನವರು ಜನ ಮಾನಸವನ್ನು ಪ್ರಭಾವಿಸಿದ ರೀತಿಯ ಮತ್ತು ಅವರು ಸರ್ವಸಮಾನತೆಯ ಸಮಾಜದ ನಿರ್ಮಾಣದ ರೂವಾರಿಯಾಗಿ ಅನುಭವ ಮಂಟಪವೆಂಬ ಮಂದಿರದಲ್ಲಿ ಸಾಧಿಸಿದ ಸಾಧನೆಗಳ ಭಾವುಕ ವಿಕಸನದಂತಿದೆ.ಅಂಥ ಐತಿಹಾಸಿಕ ಪುರುಷ, ‘ಯುಗದ ಉತ್ಸಾಹ’ ಎಂದು ಸ್ವಯಂ ಅಲ್ಲಮಪ್ರಭುಗಳಿಂದಲೆ ಬಣ್ಣಿತರಾಗಿದ್ದ ಬಸವಣ್ಣನವರ ಈ ಜಯಂತಿಯು ಮನುಷ್ಯ ಸಮಾನತೆಯ, ಸಚ್ಚಾರಿತ್ರ್ಯದ ಸಮಾಜದ ನಿರ್ಮಾಣದೆಡೆ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಗೊಳಿಸಲಿ.


