ಕ್ರಾಂತಿಯೋಗಿ ಬಸವಣ್ಣ ಅವರು ಜಗತ್ತಿನ ಬೆಳಕು. ಧರ್ಮ, ಜಾತಿ ಮೀರಿ ಸಮಾಜಕ್ಕೆ ಸಂದೇಶ ಕೊಟ್ಟ ಮಹಾನ್ ಕಾಯಕಯೋಗಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.
ಮಂಡ್ಯ (ಮೇ.1) : ಕ್ರಾಂತಿಯೋಗಿ ಬಸವಣ್ಣ ಅವರು ಜಗತ್ತಿನ ಬೆಳಕು. ಧರ್ಮ, ಜಾತಿ ಮೀರಿ ಸಮಾಜಕ್ಕೆ ಸಂದೇಶ ಕೊಟ್ಟ ಮಹಾನ್ ಕಾಯಕಯೋಗಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದ ತಳಹದಿ ಮೇಲೆ ಭಾರತದ ಸಂಸತ್ತು ರಚನೆಗೊಂಡಿದೆ. ಜಾತಿ-ಧರ್ಮ ಬೇಧವಿಲ್ಲದೆ ಸಮಾಜದಲ್ಲಿ ಹಲವಾರು ಸುಧಾರಣೆ ತಂದರು. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ಕಲ್ಪಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು ಎಂದರು.
ನಮ್ಮ ಜೀವನ ಸುಂದರವಾಗಬೇಕಾದರೆ ಸನ್ಮಾರ್ಗದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಹಣ, ಅಧಿಕಾರ, ಸಂಪತ್ತು ಯಾವುದೂ ಶಾಶ್ವತವಲ್ಲ. ಸಾಧಕರ ಸಾಲಿನಲ್ಲಿ ನಿಲ್ಲುವ ಯೋಗ್ಯತೆ ಸಂಪಾದಿಸದಿದ್ದರೂ ಅವರ ಹಾದಿಯಲ್ಲಿ ಮುನ್ನಡೆದು ಉತ್ತಮ ಬದುಕನ್ನು ಕಂಡುಕೊಂಡಾಗ ಮಹಾ ಪುರುಷರ ಜಯಂತಿಗಳು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಬಸವಣ್ಣನವರ ಜೀವನ, ತತ್ವ, ಆದರ್ಶಗಳನ್ನು ನವ ಪೀಳಿಗೆಯವರಿಗೆ ಪರಿಚಯಿಸಬೇಕು. ಕಾಯಕದಲ್ಲಿ ಎಲ್ಲರನ್ನೂ ತೊಡಗಿಸಬೇಕು. ಸತ್ಯದ ಹಾದಿಯಲ್ಲಿ ಮುನ್ನಡೆಸುವುದರೊಂದಿಗೆ ಸಮಾಜದಲ್ಲಿ ಸುಧಾರಣೆ ತರುವುದಕ್ಕೆ ಎಲ್ಲರೂ ಶ್ರಮಿಸಬೇಕಿದೆ. ಹನ್ನೆರಡನೇ ಶತಮಾನದ ಬಸವಣ್ಣ ಇಪ್ಪತ್ತೊಂದನೇ ಶತಮಾನದ ಎಲ್ಲ ಜನರಿಗೂ ಆದರ್ಶವಾಗುವಂತೆ ಮಾಡಿದಾಗ ಮಾತ್ರ ಹೊಸದೊಂದು ಇತಿಹಾಸ ಸೃಷ್ಟಿಸಲು ಸಾಧ್ಯ. ಈಗಲೂ ಬಸವಣ್ಣ ಆದರ್ಶವಾಗದೆ ಜಾತಿ ಸಂಘರ್ಷಗಳಲ್ಲೇ ಮುಳುಗಿದರೆ ಜಯಂತಿ ಆಚರಣೆಗಳು ವ್ಯರ್ಥ ಎಂದರು.
ಇದನ್ನೂ ಓದಿ: ಯಾವ ಧರ್ಮವು ಕೆಡುಕನ್ನು ಬೋಧಿಸುವುದಿಲ್ಲ: ಶ್ರೀಜಗದ್ಗುರು ಬಸವಲಿಂಗ ಮಹಾಸ್ವಾಮಿ
ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಪ್ರತಿ ಜಾತಿಗೂ ಸಮಾನತೆ ತಂದುಕೊಟ್ಟವರು ಬಸವಣ್ಣ. ಎಲ್ಲರಿಗೂ ಸಮಾನವಾದ ಕಾನೂನನ್ನು ರೂಪಿಸಿದರು. ಕಾಯಕವನ್ನು ಮಾಡಿ ದಾಸೋಹ ಮಾಡಬೇಕು. ಕಾಯಕದ ಪರಿಕಲ್ಪನೆ ಹುಟ್ಟಿಹಾಕಿ ದಾಸೋಹಕ್ಕೆ ಹೊಸ ಅರ್ಥ ತಂದುಕೊಟ್ಟರು ಎಂದರು.
ಬಸವಣ್ಣನವರು ಪ್ರೀತಿ- ಗೌರವದಿಂದ ಬದುಕುವುದನ್ನು ಕಲಿಸಿದರು. ಪ್ರೀತಿ- ಗೌರವ ಇಲ್ಲದಿದ್ದವರು ಮನುಷ್ಯರೇ ಅಲ್ಲ. ಗಂಡು-ಹೆಣ್ಣು ತಾರತಮ್ಯವಿಲ್ಲದೆ ಬದುಕುವುದನ್ನು ಕಲಿಸಿದರು. ಸರ್ಕಾರಗಳಿಂದ ಇಂದಿಗೂ ಹೆಣ್ಣು-ಗಂಡಿನ ನಡುವೆ ಸಮಾನತೆ ತರಲಾಗಲಿಲ್ಲ. ಹನ್ನೆರಡನೇ ಶತಮಾನದಲ್ಲೇ ಅವರಿಗೆ ಸಮಾನತೆ ತಂದುಕೊಟ್ಟು ಕ್ರಾಂತಿ ಪುರುಷರೆನಿಸಿದರು ಎಂದರು.
ಇದನ್ನೂ ಓದಿ: ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಘಟನೆ; ಸಚಿವರಿಂದ ತನಿಖೆಗೆ ಆದೇಶ
ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್, ಅಪರ ಜಿಲ್ಲಾಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ, ವೀರಶೈವ ಲಿಂಗಾಯುತ ಸಮುದಾಯದ ಮುಖಂಡರಾದ ಎಂ.ಬಿ.ರಾಜಶೇಖರ್, ಆನಂದ, ಅಮ್ಜದ್ಪಾಷ, ಬೆಟ್ಟಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಇದ್ದರು.


