ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರಿಗೆ ೫೦ ಸಾವಿರದಿಂದ ೫ ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಕಂಠೀರವ ಕ್ರೀಡಾಂಗಣದ ಬಳಿ ರಾಜಕಾಲುವೆ ನಿರ್ವಹಣೆ ಕಾಮಗಾರಿಯಲ್ಲಿ ಲೋಪವೆಸಗಿದ ಗುತ್ತಿಗೆದಾರರಿಗೆ ೫೦ ಸಾವಿರ ರೂ. ದಂಡ ವಿಧಿಸಲಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ವಿಳಂಬ ಮಾಡಿದ ಇಬ್ಬರು ಗುತ್ತಿಗೆದಾರರಿಗೆ ತಲಾ ೫ ಲಕ್ಷ ರೂ. ದಂಡ ವಿಧಿಸಲಾಗಿದೆ. ಆದರೆ, ಬಿಬಿಎಂಪಿಯಿಂದ ಬಾಕಿ ಪಾವತಿ ವಿಳಂಬವಾದರೆ ಏನು ಕ್ರಮ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಬೆಂಗಳೂರು (ಮೇ 03): ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ವಿರುದ್ಧ ಸರ್ಕಾರ ಸಮರವನ್ನು ಸಾರಿದ್ದು, ಅವರನ್ನು ಹಣಿಯಲು ಮುಂದಾಗಿದೆ. ಅದರ ಒಂದು ಭಾಗವಾಗಿಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಿಯಾಗಿ ಕಾಮಗಾರಿಗಳನ್ನು ಮಾಡದ, ಕಾಮಗಾರಿಗಳನ್ನು ನಿರ್ವಹಣೆ ಮಾಡದ ಗುತ್ತಿಗೆದಾರರಿಗೆ ದುಬಾರಿ ದಂಡವನ್ನು ವಿಧಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಮಾಡಿದ ಗುತ್ತಿಗೆದಾರರಿಗೆ 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಆದರೆ, ಸರ್ಕಾರ ಹಾಗೂ ಬಿಬಿಎಂಪಿಯಿಂದ ಕಾಮಗಾರಿ ಮಾಡಿದ ಬಾಕಿ ಹಣವನ್ನು ಸರಿಯಾದ ಸಮಯಕ್ಕೆ ನೀಡದಿರುವುದಕ್ಕೆ ಏನು ಕ್ರಮವಿಲ್ಲವೇ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ಇನ್ನು ಕೆಲವು ಗುತ್ತಿಗೆದಾರರು ಕಾಮಗಾರಿ ಮಾಡಿದ ಹಣವನ್ನು ದಂಡದಲ್ಲಿಯೇ ವಜಾ ಮಾಡಿಕೊಳ್ಳುವುದಕ್ಕೆ ಬಿಬಿಎಂಪಿ ಕುತಂತ್ರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋರಮಂಗಲ ಕಣಿವೆ ವಿಭಾಗದ ಕಂಠೀರವ ಸ್ಟೇಡಿಯಂ ಹತ್ತಿರ ರಾಜಕಾಲುವೆಯ ವಾರ್ಷಿಕ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವ ಗುತ್ತಿಗೆದಾರರಾದ ವಿ.ವಾಸು ರವರಿಗೆ 50,000 ರೂ. ದಂಡ ವಿಧಿಸಲಾಗಿದೆ. ಕಾರ್ಯಪಾಲಕ ಅಭಿಯಂತರರು, ಬೃಹತ್ ನೀರುಗಾಲುವೆ-ಕೋರಮಂಗಲ ಕಣಿವೆ ವಿಭಾಗ ರವರ ಅಡಿಯಲ್ಲಿ ಗುತ್ತಿಗೆದಾರರಾದ ಶ್ರೀ ವಿ.ವಾಸು ಎಂಬುವವರು ಕಂಠೀರವ ಸ್ಟೇಡಿಯಂ ಹತ್ತಿರ ರಾಜಕಾಲುವೆಯ ವಾರ್ಷಿಕ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ. ಮುಂದುವರಿದು, ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವ ಹಿನ್ನಲೆಯಲ್ಲಿ ಗುತ್ತಿಗೆ ಕರಾರಿನಂತೆ ಪರಿಶೋಧ 41(1) ಮತ್ತು 41(2) ರಂತೆ ಮೊದಲ ಕಂತಾಗಿ ರೂ.50,000 ಗಳ ದಂಡವನ್ನು ವಿಧಿಸಲಾಗಿರುತ್ತದೆ.
ವೈಟ್ ಟಾಪಿಂಗ್ ಕಾಮಗಾರಿಯನ್ನು ಪ್ರಾರಂಭಿಸದ 2 ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಕ್ಷಿಣ ಹಾಗೂ ಪಶ್ವಿಮ ವಲಯ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಪ್ರಾರಂಭಿಸದೇ ಇರುವ 2 ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ. ದಕ್ಷಿಣ ವಲಯ ವ್ಯಾಪ್ತಿಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ವೆಸ್ಟ್ ಆಫ್ ಕಾರ್ಡ್ ರಸ್ತೆ ಹಾಗೂ ಹೊಸಕೆರೆಹಳ್ಳಿ ಮುಖ್ಯ ರಸ್ತೆಯಲ್ಲಿ M/s. JMC Constructions ಎಂಬ ಸಂಸ್ಥೆಯು ವೈಟ್ ಟಾಪಿಂಗ್ ಕಾಮಗಾರಿಯನ್ನು ಪ್ರಾರಂಭಿಸದೇ ಇರುವುದರಿಂದ ಮತ್ತು ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವ ಹಿನ್ನಲೆಯಲ್ಲಿ ಗುತ್ತಿಗೆ ಕರಾರಿನಂತೆ ಪರಿಶೋಧ 41(1) ಮತ್ತು 41(2) ರಂತೆ ಮೊದಲ ಕಂತಾಗಿ ರೂ.5.00 ಲಕ್ಷಗಳ ದಂಡವನ್ನು ವಿಧಿಸಲಾಗಿರುತ್ತದೆ.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ M/s Ocean Constructions ಎಂಬ ಸಂಸ್ಥೆಯು ವೈಯಾಲಿ ಕಾವಲ್ ರಸ್ತೆಯಲ್ಲಿ ನಿಧಾನಗತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ನಿರ್ವಹಿಸುತ್ತಿರುವುದರಿಂದ ಮತ್ತು ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವ ಹಿನ್ನಲೆಯಲ್ಲಿ ಗುತ್ತಿಗೆ ಕರಾರಿನಂತೆ ಪರಿಶ್ಚಿಧ 41(1) ಮತ್ತು 41(2) ರಂತೆ ಮೊದಲ ಕಂತಾಗಿ ರೂ.5.00 ಲಕ್ಷಗಳ ದಂಡವನ್ನು ವಿಧಿಸಲಾಗಿರುತ್ತದೆ.
ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಕಾಮಗಾರಿ ನಡೆಸದವರಿಗೆ ದಂಡ ವಿಧಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎಸ್ ಪ್ರಹ್ಲಾದ್ ರವರಿಗೆ ಆದೇಶ ನೀಡಿರುತ್ತಾರೆ. ಅದರಂತೆ, ಇಂದು ದಕ್ಷಿಣ ಹಾಗೂ ಪಶ್ವಿಮ ವಲಯ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಾರಂಭಿಸದವರಿಗೆ ಮತ್ತು ನಿಧಾನಗತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ. ಇದೇ ರೀತಿ ಬೇರೆ ವಲಯಗಳಲ್ಲಿಯೂ ಸರಿಯಾಗಿ ಕಾರ್ಯನಿರ್ವಹಿಸದ ಗುತ್ತಿಗೆದಾರರಿಗೂ ದಂಡ ವಿಧಿಸಲಾಗುವುದು.


