ಬಿಸಿಲ ನಾಡು ಬಳ್ಳಾರಿಯಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಗುತ್ತಿಗೆದಾರನೊಬ್ಬ 234 ಮರಗಳನ್ನು ಕಡಿಯಲು ಮುಂದಾಗಿದ್ದಾನೆ. ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದರೂ ಮರಗಳ ಕಡಿದಿದ್ದು ತಡೆಯಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ರಸ್ತೆ ಅಗಲೀಕರಣಕ್ಕಾಗಿ ಮರಗಳ ಮಾರಣಹೋಮ
ಬಳ್ಳಾರಿ: ಬೇಸಿಗೆಯ ಬಿಸಿಲಿನ ದಾಹ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲ ನಾಡು ಬಳ್ಳಾರಿಯಲ್ಲಿ ಬಿರು ಬೇಸಿಗೆಯ ಬಿಸಿಲ ತಾಪದಿಂದ ಮನೆಯೊಳಗೂ ಕೂರಲಾರದಂತಹ ಸ್ಥಿತಿ ಇದೆ. ಹೀಗಿರುವಾಗ ರಸ್ತೆ ಅಗಲೀಕರಣದ ನೆಪದಲ್ಲಿ ರಸ್ತೆ ಬದಿ ಇದ್ದ 30ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ರಸ್ತೆ ಅಗಲೀಕರಣಕ್ಕೆ ಅಡ್ಡವಾಗಿದೆ ಎಂದು 234 ಮರಗಳನ್ನು ಗುತ್ತಿಗೆದಾರ ಕಡಿಯಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ರಸ್ತೆ ಬದಿ ಇದ್ದ ಈ ಸಾಲು ಮರಗಳನ್ನು ಕಡಿಯುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
30ಕ್ಕೂ ಹೆಚ್ಚು ಮರಗಳಿಗೆ ಕತ್ತರಿ
ಬಿಸಿಲ ದಾಹದಿಂದ ತತ್ತರಿಸಿರುವ ಗಣಿನಾಡು ಬಳ್ಳಾರಿಯಲ್ಲಿ ಮರಗಳನ್ನು ನಡಬೇಕು ಎಂದು ಜಾಗೃತಿ ಮೂಡಿಸಬೇಕಾದ ಸಮಯದಲ್ಲಿ ಮರಗಳನ್ನು ಕಡಿದು ಹಾಕಲಾಗುತ್ತಿದೆ.
ರಸ್ತೆ ಅಗಲೀಕರಣದ ನೆಪದಲ್ಲಿ ಗುತ್ತಿಗೆದಾರನೊಬ್ಬ ನೂರಾರು ಮರಗಳಿಗೆ ಕೊಡಲಿ ಪೆಟ್ಟು ಹಾಕಿದ್ದಾನೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಿಂದ ಕೊಳಗಲ್ ಗ್ರಾಮದ ರಸ್ತೆಯವರೆಗೆ ರಸ್ತೆ ಅಗಲೀಕರಣ ಮಾಡಲಾಗ್ತಿದೆ. ಇದಕ್ಕೆ ಅಡ್ಡವಾಗಿದೆ ಎಂದು 234 ಮರಗಳನ್ನು ಕಡಿಯಲು ಗುತ್ತಿಗೆದಾರ ಮುಂದಾಗಿದ್ದಾನೆ.
ಇದನ್ನೂ ಓದಿ: ಸ್ನೇಹಿತರ ಜೊತೆ ಪ್ರವಾಸ ಹೋಗಿ ಬರುವ ವೇಳೆ ಯುವಕ ರೈಲಿನಿಂದ ಬಿದ್ದು ಯುವಕ ನಿಗೂಢ ಸಾವು
ಅರಣ್ಯ ಇಲಾಖೆ ವಿರೋಧದ ನಡುವೆಯೂ ಮರಗಳಿಗೆ ಕತ್ತರಿ:
ಇದರ ಭಾಗವಾಗಿ ನಿನ್ನೆ ತಡರಾತ್ರಿ ನಾಲ್ಕಾರು ಮರಗಳನ್ನು ಕಡಿದಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಅಡ್ಡಿಪಡಿಸಿದಾಗ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮರಗಳ ಕಡಿಯುತ್ತಿರೋ ವಿಡಿಯೋ ಮಾಡಿದ ಹಿನ್ನೆಲೆ ಅರಣ್ಯ ಇಲಾಖೆಯ ಸಿಬ್ಬಂದಿಯ ಮೊಬೈಲ್ ಫೋನ್ ಒಡೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿ ಮರ ಕಡಿಯಲು ಮುಂದಾಗಿರೋದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಅರಣ್ಯ ಇಲಾಖೆ ಮರ ಕಡಿಯುವುದಕ್ಕೆ ಅನುಮತಿ ನಿರಾಕರಿಸಿದೆ. ಆದ್ರೂ ರಸ್ತೆ ಅಗಲೀಕರಣ ನೆಪದಲ್ಲಿ ಮರಗಳನ್ನು ಕಡಿಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗ್ತಿದೆ.
ಇದನ್ನೂ ಓದಿ: ಶಿವಮೊಗ್ಗ: ವೃದ್ಧೆಯ ಮನೆ ದರೋಡೆ, ಕೈ ಕಟ್ಟಿ ಬಾಯಿಗೆ ಬಟ್ಟೆ ತುರುಕಿ 18 ಲಕ್ಷದ ಚಿನ್ನಾಭರಣದೊಂದಿಗೆ ಪರಾರಿ


