ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಯೋಜನೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. ಬೆಂಗಳೂರು ವಿಮಾನ ನಿಲ್ದಾಣದೊಂದಿಗಿನ ಒಪ್ಪಂದದ ಪ್ರಕಾರ, 2033ರವರೆಗೆ 150 ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ ಎಂಬ ನಿಯಮವೇ ಮುಖ್ಯ ಕಾರಣವಾಗಿದೆ.
ಚೆನ್ನೈ: ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದ ತಮಿಳುನಾಡು ಸರ್ಕಾರದ ಆಸೆಗೆ ತಣ್ಣಿರೆರಚುವಂತೆ, ಅದನ್ನು ಕೇಂದ್ರ ಸರ್ಕಾರ ಉಡಾನ್ ಪಟ್ಟಿಯಿಂದ ಹೊರಗಿಟ್ಟಿದೆ. ಇದಕ್ಕೆ, ಬೆಂಗಳೂರು ವಿಮಾನ ನಿಲ್ದಾಣ (ಬಿಎಎಲ್) ಜೊತೆಗೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಕಾರಣವನ್ನು ನೀಡಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ನಿಯಮ ಕಾರಣ
ಹೊಸೂರು ಸಮೀಪದ ಶೂಲಗಿರಿಯಲ್ಲಿ 2,300 ಎಕರೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ತಮಿಳುನಾಡು ರಾಜ್ಯಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಕೇಂದ್ರದ ಪರವಾನಗಿ ಸಿಗುವುದು ಬಾಕಿಯಿದೆ. ಆದರೆ ಉಡಾನ್ ನಿಯಮದ ಪ್ರಕಾರ, ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ಒಳಗಿರುವ ಪ್ರದೇಶದಲ್ಲಿ ಇನ್ನೊಂದು ಏರ್‌ಪೋರ್ಟ್ ನಿರ್ಮಾಣ ಮಾಡುವಂತಿಲ್ಲ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊಸೂರು ಕೇವಲ 80 ಕಿ.ಮೀ. ದೂರವಿರುವ ಕಾರಣ, ಒಪ್ಪಂದದ ಪ್ರಕಾರ 2033ರ ವರೆಗೆ ಅಲ್ಲಿ ಏರ್‌ಪೋರ್ಟ್ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಉಡಾನ್ ಪಟ್ಟಿಯಲ್ಲಿ ಹೊಸೂರು ನಿಲ್ದಾಣ ಜಾಗ ಪಡೆದಿಲ್ಲ.
ಆದರೆ ಕ್ಯಾರೇ ಅನ್ನದ ತಮಿಳುನಾಡು!
ಆದರೆ ತಮಿಳುನಾಡಿನ ವೆಲ್ಲೂರು ಮತ್ತು ನೆಯ್ವೇಲಿಯಲ್ಲಿ ತಲೆಯೆತ್ತಲಿರುವ ವಿಮಾನ ನಿಲ್ದಾಣಗಳನ್ನು ಪರಿಗಣಿಸಲಾಗಿದೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ಉದ್ಯಮ ಚಟುವಟಿಕೆಗಳು, ಟ್ರಾಫಿಕ್‌ನಂತಹ ಕಾರಣಗಳನ್ನು ನೀಡಿ ತನ್ನ ಯೋಜನೆ ಕೈಬಿಡಲು ನಿರಾಕರಿಸಿದ್ದು, ಬಿಐಎಎಲ್ ಜತೆ ಮಾತುಕತೆಗೆ ಮುಂದಾಗಿದೆ. ತಮಿಳುನಾಡು ಹೊಸೂರು ಯೋಜನೆಗೆ ಉಡಾನ್ ನಿಧಿಯನ್ನು ಪಡೆಯುತ್ತಿಲ್ಲ ಎಂದು ಕೂಡ ಹೇಳಿದೆ. ತಮಿಳುನಾಡು ಖಾಸಗಿ ಹೂಡಿಕೆಯ ಮೂಲಕ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಂಡರೂ 2033ರ ವರೆಗೆ ಏರ್‌ಪೋರ್ಟ್ ಕಾರ್ಯಾಚರಣೆ ಸಾಧ್ಯವಾಗುವುದಿಲ್ಲ.
ಉಡಾನ್ ಯೋಜನೆಯ ಬಿಡ್‌ಗಳಿಂದ ಹೊರಗೆ
ಕೇಂದ್ರ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನಡುವಿನ 2004 ರ ಒಪ್ಪಂದದಲ್ಲಿನ ಷರತ್ತಿನಿಂದಾಗಿ ಹೊಸೂರಿನಲ್ಲಿ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಟ್ಟಲು ತಮಿಳುನಾಡು ಸರ್ಕಾರಕ್ಕೆ ಸಾಧ್ಯವಿಲ್ಲ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ (ಕೆಐಎ) 150 ಕಿ.ಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಮೇ 2033 ರವರೆಗೆ ತಡೆಹಿಡಿಯಬೇಕೆಂಬ ನಿಯಮವಿದೆ. ಅಥವಾ ಮೇಲ್ದರ್ಜೆಗೇರಿಸಿದ ವಿಮಾನ ನಿಲ್ದಾಣಗಳನ್ನು ಮೇ 2033 ರಲ್ಲಿ ಅದರ 25 ನೇ ವಾರ್ಷಿಕೋತ್ಸವದವರೆಗೆ ನಿಷೇಧಿಸುತ್ತದೆ. ತಮಿಳುನಾಡು ಭೂಸ್ವಾಧೀನ ಮತ್ತು ಸ್ಥಳ ಅನುಮತಿಗೆ ಮುಂದಾಗಿದ್ದಾಗ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಈ ನಿರ್ಬಂಧವನ್ನು ದೃಢಪಡಿಸಿದೆ. ಉಡಾನ್ ಯೋಜನೆಯ ಬಿಡ್‌ಗಳಿಂದ ಹೊರಗಿಟ್ಟಿದೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೂ 2033 ರ ಮೊದಲು ಕಾರ್ಯಾಚರಣೆ ನಡೆಸಲು ತಮಿಳುನಾಡು ಸರ್ಕಾರಕ್ಕೆ ಸಾಧ್ಯವಿಲ್ಲ.
BIAL ನಲ್ಲಿ ಷೇರುದಾರನಾಗಿರುವ ಕರ್ನಾಟಕ
ಕರ್ನಾಟಕವು ತನ್ನದೇ ಆದ ಎರಡನೇ ಬೆಂಗಳೂರು ವಿಮಾನ ನಿಲ್ದಾಣವನ್ನು ಸಹ ನಿರ್ಮಾಣ ಮಾಡುವತ್ತ ಗಮನ ಹರಿಸುತ್ತಿದೆ, ಇದು ಕೆಐಎ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯಲ್ಲಿರುವುದರಿಂದ ಕಡಿಮೆ ನಿಯಂತ್ರಕ ಅಡೆತಡೆಗಳನ್ನು ಎದುರಿಸುತ್ತಿದೆ. ಹೊರತು ಕೆಐಎ ಜೊತೆಗೆ ಸ್ಪರ್ಧಿಸುವ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಲ್ಲ. ಎರಡನೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಗುರುತಿಸಲಾಗಿದ್ದು ಈ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಕರ್ನಾಟಕ ಸರ್ಕಾರವು BIAL ನಲ್ಲಿ ಷೇರುದಾರರಾಗಿದ್ದು, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ 13% ಪಾಲನ್ನು ಹೊಂದಿದೆ. ಇತರ ಷೇರುದಾರರಲ್ಲಿ ಫೇರ್‌ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ (64%), ಸೀಮೆನ್ಸ್ ಪ್ರಾಜೆಕ್ಟ್ ವೆಂಚರ್ಸ್ (10%), ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (13%) ಸೇರಿವೆ. ಹೀಗಾಗಿ ಷೇರು ಪಾಲುದಾರನಾಗಿ ಕರ್ನಾಟಕವು BIAL ನ ನೀತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಕರ್ನಾಟಕದೊಳಗೆ ಎರಡನೇ ವಿಮಾನ ನಿಲ್ದಾಣಕ್ಕೆ ಅನುಮೋದನೆ ಸುಲಭವಾಗಲಿದೆ.


