Abbigere viral video incident: ಬೆಂಗಳೂರಿನ ಅಬ್ಬಿಗೆರೆಯಲ್ಲಿ ಮಾಜಿ ಸೈನಿಕರೊಬ್ಬರ ಪತ್ನಿ, ಮುಸ್ಲಿಂ ಯುವಕನಿಗೆ 'ಟೆರರಿಸ್ಟ್' ಎಂದು ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ದಂಪತಿಯ ಮನೆಗೆ ಬಂದು ವಾಗ್ವಾದ ನಡೆಸಿದ್ದು, ಕೊನೆಗೆ ದಂಪತಿ ಕ್ಷಮೆಯಾಚಿಸಿದ ನಂತರ ವಿವಾದ ಅಂತ್ಯಗೊಂಡಿದೆ.

ಬೆಂಗಳೂರು (ಏ.23) ಮಾಜಿ ಸೈನಿಕ ಹಾಗೂ ಅವರ ಪತ್ನಿ, ಮುಸ್ಲಿಂ ಯುವಕನೊಬ್ಬನಿಗೆ, ನೀನು ಮುಸ್ಲಿಂ, ನೀನು ಪಾಕಿಸ್ತಾನ್‌, ನೀನು ಟೆರರಿಸ್ಟ್ ಎಂದು ಹೇಳಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಕೆಲ ಮುಸ್ಲಿಂ ಯುವಕರು ದಂಪತಿ ಮನೆ ಮುಂದೆ ಬಂದು ವಾಗ್ವಾದ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಘಟನೆಯು ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ನಡೆದಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂ ಯುವಕ ಮತ್ತು ದಂಪತಿ ಅಬ್ಬಿಗೆರೆಯ ಅಪಾರ್ಟ್‌ವೊಂದರ ಅಕ್ಕ ಪಕ್ಕದ ನಿವಾಸಿಗಳಾಗಿದ್ದಾರೆ. ಈ ಮಧ್ಯೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಗಲಾಟೆಯಾಗಿದ್ದು, ಈ ವೇಳೆ ಮಾಜಿ ಸೈನಿಕನ ಪತ್ನಿ ಪಕ್ಕದ ಮನೆಯ ಮುಸ್ಲಿಂ ನಿವಾಸಿಯಾದ ಯುವಕನಿಗೆ ನೀನು ಮುಸ್ಲಿಂ, ನೀನು ಪಾಕಿಸ್ತಾನ್‌, ನೀನು ಟೆರರಿಸ್ಟ್ ಎಂದು ಕರೆದಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವಕ ತನ್ನ ಸಮುದಾಯದ ಕೆಲ ಯುವಕರೊಂದಿಗೆ ಆಗಮಿಸಿ ದಂಪತಿ ಜತೆ ವಾಗ್ವಾದ ನಡೆಸಿದ್ದಾರೆ. ಬಳಿಕ ದಂಪತಿ ಕ್ಷಮೆ ಕೋರಿದ ನಂತರ ಯುವಕರು ಸ್ಥಳದಿಂದ ತೆರಳಿದ್ದಾರೆ.