ಬೆಂಗಳೂರು ಮೆಟ್ರೋದಲ್ಲಿ ಮಹಿಳೆಯರನ್ನು ಗುಪ್ತವಾಗಿ ಚಿತ್ರೀಕರಿಸಿ "metro_chicks" ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತಿತ್ತು. ಈ ಖಾತೆಯು ೫೦೦೦ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿತ್ತು. ಸಾರ್ವಜನಿಕರ ಆಕ್ರೋಶದ ನಂತರ, ಬನಶಂಕರಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. ಈಗ ವಿಡಿಯೋಗಳನ್ನು ಅಳಿಸಲಾಗಿದೆ.
ಬೆಂಗಳೂರು (ಮೇ 21): ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮಹಿಳೆಯರ ಗೌರವವನ್ನು ಹಣೆಯುವ ಘಟನೆ ಬೆಳಕಿಗೆ ಬಂದಿದೆ. ಕೆಲ ಕಿಡಿಗೇಡಿಗಳು ಮೆಟ್ರೋಯಾತ್ರಿಕ ಮಹಿಳೆಯರ ಗುಪ್ತವಾಗಿ ವಿಡಿಯೋ ಹಿಡಿದು, ಅದನ್ನು ಇನ್ಸ್ಟಾಗ್ರಾಮ್‌ನಲ್ಲಿ “ಮೆಟ್ರೋ ಚಿಕ್ಸ್ (metro_chicks)” ಎಂಬ ಹೆಸರಿನಲ್ಲಿ ಅಪ್ಲೋಡ್ ಮಾಡಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಈ ಅಕೌಂಟ್ ಏಪ್ರಿಲ್ 11ರಿಂದ ಸಕ್ರಿಯವಾಗಿದ್ದು, ಇದುವರೆಗೆ 10ಕ್ಕೂ ಹೆಚ್ಚು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಮಹಿಳೆಯರನ್ನು ಸನ್ನಿಹಿತವಾಗಿ, ಅವರ ಅನುಮತಿಯಿಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಈ ಅಕೌಂಟ್ ಈಗಾಗಲೇ 5,000ಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿದೆ. 'ಚಿಕ್ಸ್' ಎಂದರೆ ಸಾಮಾನ್ಯವಾಗಿ ಚಿಕ್ಕಮಕ್ಕಳ ಅಥವಾ ಯುವತಿಯರನ್ನು ಸೂಚಿಸುವ ಪದವಾಗಿದ್ದು, -ಮೆಟ್ರೋ ಚಿಕ್ಸ್' ಎಂಬ ಅಕೌಂಟ್ ಹೆಸರೇ ಈ ವಿಡಿಯೋಗಳ ಉದ್ದೇಶವನ್ನು ಬಹಿರಂಗಪಡಿಸುತ್ತಿದೆ.
ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಹಲವರು ವಿಡಿಯೋಗಳನ್ನು ರಿಪೋರ್ಟ್ ಮಾಡಿ ಡಿಲೀಟ್ ಮಾಡಲು ಮುಂದಾಗಿದ್ದಾರೆ. ಈ ಘಟನೆ ಕುರಿತು ಯಾವುದೇ ಅಧಿಕೃತ ದೂರು ದಾಖಲಾಗದಿದ್ದರೂ, ಬನಶಂಕರಿ ಪೊಲೀಸ್ ಠಾಣೆಯವರು 'ಸುಮೊಟೊ (ಸ್ವಯಂಪ್ರೇರಿತವಾಗಿ0 ಪ್ರಕರಣ ದಾಖಲಿಸಿದ್ದಾರೆ.
ಬನಶಂಕರಿ ಠಾಣೆಯಲ್ಲಿ ಐಟಿ ಆಕ್ಟ್ 2008ರ ಸೆಕ್ಷನ್ 67 ಹಾಗೂ ಭಾರತೀಯ ನ್ಯೂಸಿಯನ್ಸ್ ಸಂಹಿತೆ (BNS) ಸೆಕ್ಷನ್ 78(2) ಅಡಿಯಲ್ಲಿ ಪ್ರಕರಣ ದಾಖಲಿಸಿ, ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ಮಹಿಳಾ ಸುರಕ್ಷತೆ ಮತ್ತು ವೈಯಕ್ತಿಕತೆ ಕುರಿತು ಗಂಭೀರ ಚರ್ಚೆಗೆ ದಾರಿ ಹಾಕಿದ್ದು, ಸಾರ್ವಜನಿಕರು ಇಂತಹ ಅಕ್ರಮ ಅಕೌಂಟ್‌ಗಳನ್ನು ತಕ್ಷಣವೇ ಅಧಿಕಾರಿಗಳಿಗೆ ವರದಿ ಮಾಡುವಂತೆ ಮನವಿ ಮಾಡಲಾಗಿದೆ. ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಮೆಟ್ರೋ ಚಿಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದ್ದ ಎಲ್ಲ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ.
ಎಂತಹ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು?
ಮೆಟ್ರೋ ನಿಲ್ದಾಣದ ಆವರಣ, ಮೆಟ್ರೋ ರೈಲಿ ಒಳಗೆ ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ. ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರ, ಮೆಟ್ರೋ ನಿಲ್ದಾಣಗಳಲ್ಲಿ ಹೋಗುವ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಮಹಿಳೆಯರ ಮುಭಾಗ, ಮಹಿಳೆಯರ ದೇಹದ ಹಿಂಭಾಗ ಹಾಗೂ ಮಹಿಳೆಯರು ನಡೆದುಕೊಂಡು ಹೋಗುವಾಗ ಹಿಂದಿನಿಂದ ವಿಡಿಯೋಗಳನ್ನು ಚಿತ್ರೀಕರಣ ಮಾಡಿ ಶೇರ್ ಮಾಡಿಕೊಳ್ಳುತ್ತಿದ್ದರು. ಈವರೆಗೆ ಒಟ್ಟು 14 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರು. ಮಹಿಳೆಯರ ದೇಹದ ಭಾಗಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅವರ ಗೌರವಕ್ಕೆ ಧಕ್ಕೆ ತಂದು ಕಾನೂನು ನಿಯಮ ಉಲ್ಲಂಘನೆ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ:
ಇನ್ನು ಮಹಿಳೆಯರ ದೃಶ್ಯಗಳನ್ನು ಸರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಮುಖದ ಸಮೇಯ ಅಪ್ಲೋಡ್ ಮಾಡಿ, ಬೆಂಗಳೂರು ಬ್ಯೂಟಿಫುಲ್ ಹುಡುಗಿಯರು ಇಲ್ಲಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಯುವಕ-ಯುವತಿ ಒಟ್ಟಿಗೆ ನಿಂತುಕೊಂಡಿದ್ದರೆ, ಮಹಿಳೆಯರು ಒಟ್ಟಿಗೆ ಮಾತನಾಡುತ್ತಿದ್ದರೆ ಅವರ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದರು. ಒಟ್ಟಾರೆಯಾಗಿ ಬೆಂಗಳೂರು ಮಹಿಳೆಯರ ಸಾಮಾನ್ಯ ವಿಡಿಯೋಗಳನ್ನು ಅಶ್ಲೀಲವಾಗಿ ತೋರಿಸುವ ಕೃತ್ಯಗಳನ್ನು ಮಾಡುವುದಕ್ಕೆ ಮುಂದಾಗಿದ್ದರು. ಇಂತಹ ಕೃತ್ಯಗಳನ್ನು ಎಸಗಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಇನ್ನುಮುಂದೆ ಮಹಿಳೆಯರ ವಿಡಿಯೋ ಮಾಡುವುದಕ್ಕೆ ಎಲ್ಲ ಕಿಡಿಗೇಡಿಗಳಿಗೂ ಭಯ ಹುಟ್ಟಬೇಕು, ಹಾಗೆ ಆರೋಪಿಗಳಿಗೆ ಶಿಕ್ಷೆ ನೀಡಬೇಕು. ಆರೋಪಿಗೆ ಶಿಕ್ಷೆ ಆಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಿಡಿಗೇಡಿ ಯಾರೆಂದು ಜನರಿಗೆ ಗೊತ್ತಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.


