Bengaluru Power Cut Today ಬೆಂಗಳೂರಿನಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ, ಇಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು (ಫೆ.14): ರಾಜಧಾನಿಯ ಹಲವು ಭಾಗಗಳಲ್ಲಿ ಇಂದು ಬೆಸ್ಕಾಂ (BESCOM) ಮತ್ತು ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆ ನಗರದ ಪ್ರಮುಖ ಬಡಾವಣೆಗಳಲ್ಲಿ ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವ್ಯತ್ಯಯ
ಜಾಲಹಳ್ಳಿ ವಿಭಾಗದ 66/11 ಕೆವಿಎ ಗೋಕುಲ ಉಪಕೇಂದ್ರ, 66/11 ಕೆ.ವಿ ಅಮರಜ್ಯೋತಿ ಸ್ಟೇಷನ್ ಹಾಗೂ 66/11 ಕೆ.ವಿ ಎನ್.ಜಿ.ಇ.ಎಫ್ (NGEF) ಸ್ಟೇಷನ್‌ಗಳ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತಾಂತ್ರಿಕ ಸುಧಾರಣೆ ಮತ್ತು ತುರ್ತು ಕಾಮಗಾರಿ ನಡೆಯಲಿದೆ. ಮಳೆಗಾಲಕ್ಕೂ ಮುನ್ನ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹಾಗೂ ವಿದ್ಯುತ್ ಲೈನ್‌ಗಳ ದುರಸ್ತಿಗಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಯಾವ್ಯಾವ ಏರಿಯಾಗಳಲ್ಲಿ ಕರೆಂಟ್ ಇರೋಲ್ಲ?
ವಿದ್ಯುತ್ ವ್ಯತ್ಯಯದಿಂದಾಗಿ ಗೋಕುಲ MUSS, ಡಿ.ಬಿ ಸಂದ್ರಾ 4ನೇ ಬ್ಲಾಕ್, ಜೆ.ಬಿ.ಕಾವಲ್ ಅರಣ್ಯ, ಗಂಗಮ್ಮ ವೃತ್ತ, ಡಿ.ಬಿ.ಸಂದ್ರ 2ನೇ ಬ್ಲಾಕ್, ಕಮ್ಮಗೊಂಡನಹಳ್ಳಿ, ಬಿಇಎಲ್ ಕಾಲೋನಿಗಳು, ಬಾಹುಬಲಿ ನಗರ, ರಾಮಚಂದ್ರಾಪುರ ಹಾಗೂ ಜಾಲಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಅಲ್ಲದೆ, ಶಾರದಾಂಬನಗರ, ಮುತ್ಯಾಲನಗರ ಮತ್ತು ಚಾಮುಂಡೇಶ್ವರಿ ಲೇಔಟ್ ನಿವಾಸಿಗಳಿಗೂ ಇದರ ಬಿಸಿ ತಟ್ಟಲಿದೆ.
ದೊಮ್ಮಲೂರು ಮತ್ತು ಇಂದಿರಾನಗರದಲ್ಲೂ ಪವರ್ ಕಟ್
ಅಮರಜ್ಯೋತಿ ಮತ್ತು ಎನ್.ಜಿ.ಇ.ಎಫ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ದೊಮ್ಮಲೂರು 2ನೇ ಹಂತ, ಹೆಚ್ಎಎಲ್ 2ನೇ ಹಂತ, ಇಎಸ್ಐ ಆಸ್ಪತ್ರೆ ರಸ್ತೆ, 100 ಫೀಟ್ ರಸ್ತೆ, ಸಾಲರ್ಪುರಿಯಾ ಟೆಕ್ ಪಾರ್ಕ್, ಡೈಮಂಡ್ ಡಿಸ್ಟ್ರಿಕ್ಟ್, ಜೋಗುಪಾಳ್ಯ ಹಾಗೂ ಹಲಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ. ಇಂದಿರಾನಗರ 1ನೇ ಹಂತ, ಕ್ಯಾಂಬ್ರಿಜ್ ರಸ್ತೆ ಮತ್ತು ಅಜಂತಾ ಟ್ರಿನಿಟಿ ಸರ್ಕಲ್ ಭಾಗದ ಗ್ರಾಹಕರು ಸಂಜೆವರೆಗೆ ವಿದ್ಯುತ್ ಇಲ್ಲದೆ ಪರದಾಡುವಂತಾಗಬಹುದು.
ಉಪನಗರಗಳಿಗೂ ತಟ್ಟಿದ ಬಿಸಿ
ನಗರದ ಹೊರವಲಯದ ಪ್ರಮುಖ ಭಾಗಗಳಾದ ಬೆನ್ನಿಗನಹಳ್ಳಿ, ಕೆ.ಜಿ. ಪುರ (ಎ ಮತ್ತು ಬಿ ನಾರಾಯಣಪುರ), ಕಗ್ಗದಾಸಪುರ, ಕಸ್ತೂರಿನಗರ, ಭುವನೇಶ್ವರಿ ನಗರ, ನಾಗವಾರಪಾಳ್ಯ ಮತ್ತು ಸಿ.ವಿ. ರಾಮನ್ ನಗರದ ಸುತ್ತಮುತ್ತಲಿನ ಬಡಾವಣೆಗಳಲ್ಲೂ ಇಂದು ಪೂರ್ಣ ಪ್ರಮಾಣದ ವಿದ್ಯುತ್ ವ್ಯತ್ಯಯವಿರಲಿದೆ. ಸಾರ್ವಜನಿಕರು ಈ ಅವಧಿಯಲ್ಲಿ ಬೆಸ್ಕಾಂನೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.



