ಬೆಂಗಳೂರನ್ನು ಬೆಚ್ಚಿಬೀಳಿಸಿದ ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್‌ನನ್ನು ಬಂಧಿಸಲಾಗಿದೆ. CMS ಕಂಪನಿಯ ಮಾಜಿ ಉದ್ಯೋಗಿ ಜೊತೆ ಸೇರಿ, ದರೋಡೆಗೆ ಸ್ಕೆಚ್ ಹಾಕಿ, ಆರೋಪಿಗಳಿಗೆ ತರಬೇತಿ ನೀಡಿರುವುದು ತನಿಖೆಯಿಂದ ಬಯಲಾಗಿದೆ.

ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿರುವ ದರೋಡೆ ಪ್ರಕರಣದ ಒದೊಂದೇ ವಿಚಾರಗಳು ಹೊರಬರುತ್ತಿದೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ “ಮಾಸ್ಟರ್‌ಮೈಂಡ್” ಎಂದೇ ಗುರುತಿಸಲ್ಪಟ್ಟಿರುವ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್‌ರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಅಣ್ಣಪ್ಪ ನಾಯಕ್‌ರನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ಬಳಿಕ ಸಿದ್ದಾಪುರ ಪೊಲೀಸ್ ಠಾಣೆ ಬಂಧನವನ್ನು ದಾಖಲಿಸಿದೆ.

ದರೋಡೆಯಲ್ಲಿ ಕಾನ್ಸ್‌ಟೇಬಲ್ ಪಾತ್ರ ಸಾಬೀತು

ಈ ಹಿಂದೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಅಣ್ಣಪ್ಪ ನಾಯಕ್ ನೇರವಾಗಿ ಭಾಗಿಯಾಗಿದ್ದ ಮಾಹಿತಿ ಹೊರಬಿದ್ದಿದೆ. ದರೋಡೆಯಲ್ಲಿ ಗೋವಿಂದಪುರ ಠಾಣೆಗೆ ಸೇರಿದ್ದ ಮತ್ತೊಬ್ಬ ಕಾನ್ಸ್‌ಟೇಬಲ್ ಭಾಗಿಯಾಗಿದ್ದ ವಿಚಾರ ತನಿಖೆಯಿಂದ ದೃಢಪಟ್ಟಿದೆ. ದರೋಡೆ ಕೃತ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ಮತ್ತು ಪ್ಲಾನ್ ಆರೋಪಿಗಳಿಗೆ ನೀಡಿದ್ದ ಅಂಶ ಕೂಡಾ ಈಗ ತನಿಖೆಯಲ್ಲಿ ಬಹಿರಂಗವಾಗಿದೆ.

ಅಣ್ಣಪ್ಪ ನಾಯಕ್ ಯೋಜನೆಯ ಮಾಸ್ಟರ್‌ಮೈಂಡ್ ಆಗಿದ್ದು, ಆರೋಪಿಗಳಿಗೆ ಸ್ಕೆಚ್ ರೆಡಿ ಮಾಡುವುದು, ಎಲ್ಲಿ ಮತ್ತು ಯಾವ ಸಮಯದಲ್ಲಿ ದರೋಡೆ ನಡೆಸಬೇಕು. ಸಿಸಿಟಿವಿ ಕ್ಯಾಮೆರಾ ಇಲ್ಲದ ಸ್ಥಳಗಳನ್ನು ಗುರುತಿಸುವಿಕೆ. ದರೋಡೆ ನಂತರ ಪೊಲೀಸರಿಂದ ಹೇಗೆ ಪಾರಾಗಬೇಕು ಎಂಬ ತಂತ್ರಗಳನ್ನು ಕೂಡ ಅಣ್ಣಪ್ಪ ನೀಡಿದ್ದಾನೆ. ತನಿಖೆ ವೇಳೆ ಆರೋಪಿಗಳಿಗೆ ತರಬೇತಿ ನೀಡಿರುವುದೂ ಸ್ಪಷ್ಟವಾಗಿದೆ. ಸಂಪೂರ್ಣ ದರೋಡೆ ಪ್ಲಾನ್ ಅಣ್ಣಪ್ಪ ನಾಯಕ್ ನೇತೃತ್ವದಲ್ಲಿ ನಡೆದಿರುವುದು ಬಹಿರಂಗವಾಗಿದೆ.

CMS ಮಾಜಿ ಸಿಬ್ಬಂದಿಯ ಜೊತೆಗೂಡಿ ರಾಬರಿ ಪ್ಲಾನ್

ಈ ರಾಬರಿಯಲ್ಲಿ CMS ಕಂಪನಿ ಮಾಜಿ ಉದ್ಯೋಗಿ ಝೇವಿಯರ್ ಪ್ರಮುಖ ಪಾತ್ರ ವಹಿಸಿದ್ದಾನೆ. ಒಬ್ಬರೊಬ್ಬರು ಸ್ನೇಹಿತರಾಗಿದ್ದ ಇವರಿಬ್ಬರು ಒಂದು ವರ್ಷದಿಂದ ಪ್ಲಾನ್‌ಗಾಗಿ ಸಭೆ ನಡೆಸುತ್ತಿದ್ದರೆಂಬ ಮಾಹಿತಿ ಹೊರಬಂದಿದೆ. ಝೇವಿಯರ್ CMS ನಲ್ಲಿ ಕೆಲಸ ಮಾಡಿರುವ ಕಾರಣ ಹಣ ವಾಹನಗಳ ಬಗ್ಗೆ, ಹಣ ರವಾನೆ ವಿಧಾನ, ರೂಟ್‌ಮ್ಯಾಪ್ ಮತ್ತು ಸುರಕ್ಷತಾ ವ್ಯವಸ್ಥೆಗಳು ವಿವರವಾಗಿ ತಿಳಿದಿದ್ದಾನೆ. ಅಪರಾಧ ಯೋಜನೆಗೆ ಈ ಮಾಹಿತಿಯೇ ಮುಖ್ಯ ಆಧಾರವಾಗಿದೆ.

ಪ್ಲಾನ್ ಹೀಗಿತ್ತು

  • CMS ಹಣ ರವಾನೆಯ ಬಗ್ಗೆ ಸಂಪೂರ್ಣ ಮಾಹಿತಿ – ಝೇವಿಯರ್
  • ದರೋಡೆ ನಂತರ ಪಾರಾಗುವ ಪ್ಲಾನ್ – ಅಣ್ಣಪ್ಪ
  • ಬಾಣಸವಾಡಿಯ ಹುಡುಗರನ್ನು ಬಳಸಿ ಕೃತ್ಯ ನಿರ್ವಹಣೆ
  • ಇಬ್ಬರೂ ಅಡಗಿಕೊಂಡೇ ಹುಡುಗರ ಮೂಲಕ ದರೋಡೆ ಎಕ್ಸಿಕ್ಯೂಟ್
  • ಸದ್ಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟವೂ ನಡೆಯುತ್ತಿದೆ.

ಅಣ್ಣಪ್ಪನ ಕ್ರಿಮಿನಲ್ ಹಿನ್ನೆಲೆ

ಮುಂಬರುವ ತನಿಖೆಯಿಂದ ಅಣ್ಣಪ್ಪ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂಬುದು ಬೆಳಕಿಗೆ ಬಂದಿದೆ. ಅವನ ವಿರುದ್ಧದ ಇರುವ ಹಿಂದಿನ ಆರೋಪಗಳು, ಕುಂಬಳಗೋಡು ಠಾಣೆ ವ್ಯಾಪ್ತಿಯಲ್ಲಿ ಸಣ್ಣದಾಗಿ ರಾಬರಿ ಕೃತ್ಯ ಮತ್ತು ಜೈಲು ಶಿಕ್ಷೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಪ್ರಕರಣ. ಎಂಜಿ ರೋಡ್ ಬಳಿ ಕ್ರಿಕೆಟ್ ಬುಕ್ಕಿಗಳಿಗೆ ಬೆದರಿಕೆ. ಜೈಲಿನಲ್ಲಿ ಪರಿಚಯವಾದ ಹುಡುಗರನ್ನು ಬಳಸಿಕೊಂಡು ಅನೇಕ ಕೃತ್ಯಗಳು, ದೊಡ್ಡ ದರೋಡೆ ಮಾಡಿ ಜೀವನದಲ್ಲಿ “ಸೆಟಲ್” ಆಗಬೇಕು ಎಂಬ ಉದ್ದೇಶದಿಂದಲೇ ಈ ಯೋಜನೆಯನ್ನು ರೂಪಿಸಿದ್ದಾನೆ ಎಂಬುದು ಬಹಿರಂಗವಾಗಿದೆ.

ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಹಾಗೂ CMS ಮಾಜಿ ಉದ್ಯೋಗಿ ಝೇವಿಯರ್ ವಿಚಾರಣೆಗೊಳಗಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಪರಾಧಕ್ಕೆ ಬಳಸಿದ ವಾಹನಗಳು, ಮೊಬೈಲ್‌ಗಳು ಮತ್ತು ಹಣದ ಸುಳಿವು ಹುಡುಕಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಭಾಗಿಯಾಗಿರುವುದನ್ನು ಪೊಲೀಸ್ ಇಲಾಖೆ ಕೂಡಾ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ.