ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ರೇವಣ್ಣ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಮಗನ ಜನ್ಮದಿನದ ಸಂಭ್ರಮದಲ್ಲಿದ್ದ ಕುಟುಂಬದ ಮೇಲೆ ದುಃಖದ ಮುಸುಕು ಆವರಿಸಿದೆ.

ಬೆಂಗಳೂರು (ಆ.2): ಆಗಸ್ಟ್‌ 5 ರಂದು ಮಗನ 35ನೇ ವರ್ಷದ ಜನ್ಮದಿನ ಆಚರಿಸುವ ಖುಷಿಯಲ್ಲಿದ್ದ ತಾಯಿ ಭವಾನಿ ರೇವಣ್ಣಗೆ ಶಾಕ್‌ ಆಗಿದೆ. ಕಳೆದ ಒಂದು ವರ್ಷದಿಂದ ಮಗ ಜೈಲಿನಿಂದ ಬಿಡುಗಡೆಯಾಗಲಿ ಎಂದು ಭವಾನಿ ರೇವಣ್ಣ ಹಾಗೂ ಎಚ್‌ಡಿ ರೇವಣ್ಣ ಸುತ್ತದೇ ಇರುವ ದೇವಸ್ಥಾನಗಳಲ್ಲಿ ಮಾಡದೇ ಇರುವ ಪೂಜೆಗಳಿಲ್ಲ. ಇದೆಲ್ಲದರ ನಡುವೆಯೂ ಭವಾನಿ ರೇವಣ್ಣಗೆ ಅತಿದೊಡ್ಡ ಶಾಕ್‌ ಎನ್ನುವಂತೆ ಶನಿವಾರ ಜನಪ್ರತಿನಿಧಿಗಳ ನ್ಯಾಯಾಲಯ ಪ್ರಜ್ವಲ್‌ ರೇವಣ್ಣಗೆ ಒಂಚೂರು ಕನಿಕರ ತೋರಿಸದೆ ಜೀವಾವಧಿ ಶಿಕ್ಷೆ ನೀಡಿದೆ. ಅದರೊಂದಿಗೆ ಹಲವು ಸೆಕ್ಷನ್‌ಗಳಲ್ಲೂ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ.

ಕಳೆದ 14 ತಿಂಗಳಲ್ಲಿ ಪ್ರಜ್ವಲ್‌ ರೇವಣ್ಣ ಬಗ್ಗೆ ಎಲ್ಲಿಯೂ ಮಾತನಾಡದೇ ಇದ್ದ ಭವಾನಿ ರೇವಣ್ಣ, ಶನಿವಾರ ಕೋರ್ಟ್‌ನಲ್ಲಿ ಮಗನಿಗೆ ಕಡಿಮೆ ಪ್ರಮಾಣದ ಶಿಕ್ಷೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಇದಕ್ಕಾಗಿ ಮಧ್ಯಾಹ್ನದಿಂದಲೇ ಅವರು ಟಿವಿ ಮುಂದೆ ಕೂತಿದ್ದರು. ಆದರೆ, ಇಡೀ ಕುಟುಂಬಕ್ಕೆ ಆಘಾತ ಎನ್ನುವಂತೆ ಕೋರ್ಟ್‌ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿತು.

ಕಡಿಮೆ ಶಿಕ್ಷೆ ಪ್ರಮಾಣದ ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ಕುಟುಂಬಕ್ಕೆ ಭಾರೀ ಆಘಾತವಾಗಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ವಕೀಲರ ಜೊತೆಗೆ ಚರ್ಚೆ ನಡೆಸಲು ಭಾವನಿ ರೇವಣ್ಣ ತೀರ್ಮಾನ ಮಾಡಿದ್ದಾರೆ.

ಆಗಸ್ಟ್ 5ರಂದು ಪ್ರಜ್ವಲ್ ಬರ್ತ್ ಡೇ ಆಚರಿಸಿಕೊಳ್ಳಲು ಇಡೀ ಕುಟುಂಬ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಶಿಕ್ಷೆ ಪ್ರಮಾಣದ ಹಿನ್ನಲೆ ಹೆಚ್.ಡಿ ರೇವಣ್ಣ ನಿವಾಸದಲ್ಲಿ ಮೌನ ಆವರಿಸಿದೆ.

ದಂಡ: ಪ್ರಜ್ವಲ್‌ ರೇವಣ್ಣಗೆ ಒಟ್ಟು 11.60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಸಂತ್ರಸ್ತ ಮಹಿಳೆಗೆ ಇದರಲ್ಲಿ 11.25 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ.

ಪ್ರಜ್ವಲ್ ರೇವಣ್ಣ ಶಿಕ್ಷೆ

1. ಸೆ.376(2)(ಕೆ): ಜೀವಾವಧಿ ಶಿಕ್ಷೆ, 5 ಲಕ್ಷ ದಂಡ, ತಪ್ಪಿದಲ್ಲಿ 1 ವರ್ಷ ಜೈಲು ಶಿಕ್ಷೆ

2. ಸೆ.376(2)(ಎನ್): ಜೀವಾವಧಿ ಶಿಕ್ಷೆ ಅಂದರೆ ಜೀವನಪರ್ಯಂತ ಶಿಕ್ಷೆ, 5 ಲಕ್ಷ ದಂಡ, ತಪ್ಪಿದಲ್ಲಿ 1 ವರ್ಷ ಜೈಲು ಶಿಕ್ಷೆ

3. ಸೆ.354ಎ: 3 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ತಪ್ಪಿದಲ್ಲಿ 6 ತಿಂಗಳವರೆಗೆ SI ಗೆ 25,000 ದಂಡ

4. ಸೆ.354ಬಿ: 7 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ತಪ್ಪಿದಲ್ಲಿ 6 ತಿಂಗಳವರೆಗೆ SI ಗೆ 50,000 ದಂಡ

5. ಸೆ.354ಸಿ: 3 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ತಪ್ಪಿದಲ್ಲಿ 6 ತಿಂಗಳವರೆಗೆ SI ಗೆ 25,000 ದಂಡ

6. ಸೆ.506: 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ತಪ್ಪಿದಲ್ಲಿ 3 ತಿಂಗಳವರೆಗೆ SI ಗೆ 10,000 ದಂಡ

7. ಸೆ.201: 3 ವರ್ಷಗಳ ಕಠಿಣ ಜೈಲು ಶಿಕ್ಷೆ, 6 ತಿಂಗಳ ಕಾಲ SI ತಪ್ಪಿದರೆ 25,000 ದಂಡ

8. ಸೆ.66 ಇ ಐಟಿ ಕಾಯ್ದೆ: 3 ವರ್ಷಗಳ ಕಠಿಣ ಜೈಲು ಶಿಕ್ಷೆ, 6 ತಿಂಗಳ ಕಾಲ SI ತಪ್ಪಿದರೆ 25,000 ದಂಡ

9. ದಂಡದ ಮೊತ್ತದಲ್ಲಿ 11,25,000 ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತದೆ, ಉಳಿದ ಮೊತ್ತವು ರಾಜ್ಯಕ್ಕೆ ಮಾತ್ರ.

10. ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತದೆ.