ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (BSWML), ಮಿಟ್ಟಗಾನಹಳ್ಳಿ ಮತ್ತು ಕಣ್ಣೂರು ಪ್ರದೇಶಗಳಲ್ಲಿ ಶೇಖರಣೆಯಾಗಿರುವ 2,878 ಮಿಲಿಯನ್ ಲೀಟರ್ ಲೀಚೆಟ್ (ದ್ರವ ತ್ಯಾಜ್ಯ) ಸಂಸ್ಕರಿಸಲು ಮುಂದಾಗಿದೆ. ಇದಕ್ಕಾಗಿ ₹474.89 ಕೋಟಿ ಮೊತ್ತದ ಟೆಂಡರ್ ಅನ್ನು 'ಮುಕ್ಕ ಪ್ರೋಟಿನ್ಸ್ ಲಿಮಿಟೆಡ್'ಗೆ ನೀಡಿದೆ.

ವರದಿ- ನಂದೀಶ್ ಮಲ್ಲೇನಹಳ್ಳಿ,ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು (ಡಿ.6): ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ (BSWML), ಹೊಸ ‘ಲೀಚೆಟ್ ಸಂಸ್ಕರಣಾ ಘಟಕ’ನಿರ್ಮಿಸಲು ಮತ್ತು ಲೀಚೆಟ್ ತ್ಯಾಜ್ಯ ಸಂಸ್ಕರಿಸಲು ಮುಂದಾಗಿದೆ. ಇದಕ್ಕಾಗಿ ಬಿಎಸ್‌ಡಬ್ಲ್ಯುಎಂಎಲ್, ಪ್ರತಿ ಲೀಟರ್ ಲೀಚೆಟ್ ತ್ಯಾಜ್ಯ ಸಂಸ್ಕರಣೆಗೆ 1 ರೂಪಾಯಿ 65 ಪೈಸೆನಂತೆ ಒಟ್ಟು 474.89 ಕೋಟಿ ರೂ. ಮೊತ್ತದ ಟೆಂಡರ್‌ನ್ನು ‘ಮುಕ್ಕ ಪ್ರೋಟಿನ್ಸ್ ಲಿಮಿಟೆಡ್’ಗೆ ನಿಯಮದಂತೆ ನೀಡಲಾಗಿದೆ. ಸಚಿವ ಸಂಪುಟ, ಆರ್ಥಿಕ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗೆ ಟೆಂಡರ್ ಮೊತ್ತಕ್ಕೆ ಈಗಾಗಲೇ ಅನುಮೋದನೆ ನೀಡಿದೆ.

ಮಿಟ್ಟಗಾನಹಳ್ಳಿ, ಕಣ್ಣೂರು ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿಯ ಪರಿಣಾಮ ಈ ಪ್ರದೇಶಗಳಲ್ಲಿ ಅಂದಾಜು 2,878 ಮಿಲಿಯನ್ ಲೀ. ಲಿಚೇಟ್ ( ತ್ಯಾಜ್ಯದಿಂದ ಹೊರಬರುವ ದ್ರವ ತ್ಯಾಜ್ಯ) ಶೇಖರಣೆಯಾಗಿದೆ. ಆದ್ದರಿಂದ, ಲೀಚೆಟ್ ಸಂಸ್ಕರಣಾ ಘಟಕ ನಿರ್ಮಿಸಲು, ಲೀಚೆಟ್ ತ್ಯಾಜ್ಯ ಸಂಸ್ಕರಿಸಲು ಬಿಎಸ್‌ಡಬ್ಲ್ಯುಎಂಎಲ್‌ನಿಂದ ಮುಕ್ಕ ಪ್ರೋಟಿನ್ಸ್ ಲಿಮಿಟೆಡ್, ಕಾರ್ಯಾದೇಶ ಪತ್ರ ಪಡೆದಿದೆ. 9 ತಿಂಗಳದೊಳಗೆ ಲೀಚೆಟ್ ಸಂಸ್ಕರಣಾ ಘಟಕ ನಿರ್ಮಿಸಬೇಕು ಮತ್ತು ಹಂತ ಹಂತವಾಗಿ 2,878 ಮಿಲಿಯನ್ ಲೀಟರ್ ಲಿಚೇಟ್ ತ್ಯಾಜ್ಯವನ್ನು ಸಂಸ್ಕರಿಸಬೇಕು. ಮುಂದಿನ 4 ವರ್ಷ ಅವಧಿಯೊಳಗೆ ಈ ಎಲ್ಲ ಕೆಲಸ ಮಾಡುವಂತೆ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ. ಅದರಂತೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ( ಕೆಎಸ್‌ಪಿಸಿಬಿ)ಮತ್ತು ಬಿಎಸ್‌ಡಬ್ಲ್ಯುಎಂಎಲ್ ಘನತ್ಯಾಜ್ಯ ನಿಯಮದಂತೆ ಗುತ್ತಿಗೆ ಪಡೆದ ಕಂಪನಿ ಕಾರ್ಯನಿರ್ವಹಿಸಬೇಕೆಂದು ಆದೇಶಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪ್ರಸ್ತುತ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ವಿಲೇವಾರಿಗೆ ಯಾವುದೇ ಭೂ ಭರ್ತಿ ಘಟಕಗಳು ಲಭ್ಯವಿಲ್ಲ. ಬಿರುಸಾಗಿ ಮಳೆಯಾಗುವ ಸಂದರ್ಭದಲ್ಲಿ ಲೀಚೆಟ್ ಶೇಖರಣೆಗೊಂಡಿರುವ ಹೊಂಡಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮ, ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತಿದೆ. ಗ್ರಾಮಗಳಲ್ಲಿ ವಾಸಿಸುತ್ತಿರುವ ಮಕ್ಕಳಿಂದ ಹಿಡಿದು ದೊಡ್ಡ ವಯೋಮಾನದವರ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸುತ್ತಮುತ್ತಲಿನ ಕೆರೆಗಳು ಕಲುಷಿತಗೊಂಡಿವೆ. ಮೀನು, ಪಕ್ಷಿ ಸೇರಿ ಅನೇಕ ಜಲಜರ ಪ್ರಾಣಿಗಳು ಮೃತಪಟ್ಟಿವೆ.

ಭೂಭರ್ತಿ ಘಟಕಗಳಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶೇಖರಣೆಗೊಂಡಿರುವ ಲೀಚೆಟ್ ಸಂಸ್ಕರಿಸಿದರೆ ಹೊಸದಾಗಿ ಭೂಭರ್ತಿ ಘಟಕದ ಸ್ಥಳ ದೊರೆಯಲಿದೆ. ಅಲ್ಲದೆ, ಲಿಚೆಟ್‌ನಲ್ಲಿರುವ ಜೈವಿಕ, ರಾಸಾಯನಿಕ, ಅಲ್ಟ್ರಾಫಿಲ್ಟ್ರೇಷನ್, ರಿವರ್ಸ್ ಆಸ್ಮೋಸಿಸ್‌ನಂತಹ ಕಲ್ಮಷ ಅಂಶ ತೆಗೆದುಹಾಕಲು ‘ಲೀಚೆಟ್ ಸಂಸ್ಕರಣಾ ಘಟಕ ಕಾರ್ಯನಿರ್ವಹಿಸಲಿದೆ. ಹಾನಿಕಾರಕ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಮೂಲಕ ಪರಿಸರ ಮಾಲಿನ್ಯ ತಡೆಯಲಾಗುತ್ತದೆ. ಸಂಸ್ಕರಿಸಿದ ನೀರನ್ನು ಗಿಡಗಳಿಗೆ ನೀರುಣಿಸಲು, ವಾಹನ ಸ್ವಚ್ಛಗೊಳಿಸಲು ಮತ್ತು ಕೆಲವು ಸಂದರ್ಭಗಳಲ್ಲಿ ಕೆರೆ ತುಂಬಿಸಲು ಬಳಸಲಾಗುತ್ತದೆ. ಸ್ಥಳೀಯರ ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಕಳೆದ ವರ್ಷ ಮೇನಲ್ಲಿ ರಾಜಧಾನಿಯಲ್ಲಿ ಕಸ ವಿಲೇವಾರಿಗಾಗಿ ಬಿಎಸ್‌ಡಬ್ಲ್ಯುಎಂಎಲ್ ಸ್ಥಾಪಿಸಲಾಯಿತು. ಸರ್ಕಾರ ಮತ್ತು ಜಿಬಿಎ ಅಡಿ ಇದು ಕಾರ್ಯನಿರ್ವಹಿಸುತ್ತಿದೆ. ಮನೆ ಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆ. ಸಂಗ್ರಹ ಮಾಡಿದ ಕಸವನ್ನು ಟಿಪ್ಪರ್ ಲಾರಿಗಳ ಮೂಲಕ ಕಸ ಸಂಸ್ಕರಣಾ ಘಟಕ ಅಥವಾ ಕ್ವಾರಿಗಳಿಗೆ ಸಾಗಿಸುವ ಜವಾಬ್ದಾರಿಯನ್ನು ಬಿಎಸ್‌ಡಬ್ಲ್ಯುಎಂಎಲ್ ನಿಭಾಯಿಸುತ್ತಿದೆ. ಅಟೋ, ಟಿಪ್ಪರ್, ಕಾಂಪ್ಯಾಕ್ಟರ್, ಚಾಲಕರು, ಸಹಾಯಕರು ಕಂಪನಿ ವ್ಯಾಪ್ತಿಗೆ ಬಂದಿದ್ದಾರೆ. ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ವಾರ್ಡ್ ಮಟ್ಟದ ಇಂಜಿನಿಯರ್‌ಗಳು, ಸಿಬ್ಬಂದಿ ಹಾಗೂ ಮಾರ್ಷಲ್‌‌ಗಳು ಕಂಪನಿ ಅಧೀನಕ್ಕೆ ಒಳಪಟ್ಟಿದ್ದಾರೆ. ಪ್ರತಿ ವರ್ಷ ಸರ್ಕಾರ ಮತ್ತು ಜಿಬಿಎ, ಬಿಎಸ್‌ಡಬ್ಲ್ಯುಎಂಎಲ್‌ಗೆ ಅನುದಾನ ನೀಡುತ್ತಿದೆ.

ಏನಿದು ಲಿಚೆಟ್ ಟ್ರೀಟ್ಮೆಂಟ್ ಪ್ಲಾಂಟ್?

ತ್ಯಾಜ್ಯದಿಂದ ಹೊರಬರುವ ದ್ರವ ತ್ಯಾಜ್ಯ ಅಂದರೆ ಲಿಚೇಟ್‌ನ್ನು ‘ಲೀಚೆಟ್ ಸಂಸ್ಕರಣಾ ಘಟಕ’ ಗಳಲ್ಲಿ ಸಂಸ್ಕರಿಸಲಾಗುತ್ತದೆ. ಮಿಟ್ಟಗಾನಹಳ್ಳಿ ಮತ್ತು ಕಣ್ಣೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಘನತ್ಯಾಜ್ಯ ಸುರಿಯಲಾಗುತ್ತಿದೆ. ತ್ಯಾಜ್ಯ ವಸ್ತುಗಳು ಸುರಿಯುವುದರಿಂದ ಉಂಟಾಗುವ ಮಾಲಿನ್ಯ ತಗ್ಗಿಸಲು ಈ ಘಟಕಗಳು ಪ್ರಮುಖ ಪಾತ್ರವಹಿಸಲಿವೆ. ಪರಿಣಾಮಕಾರಿಯಾಗಿ ಲೀಚೆಟ್ ಸಂಸ್ಕರಿಸುವ ಮೂಲಕ ಕೆರೆಗಳನ್ನು ಕಲುಷಿತವಾಗುವುದನ್ನು ತಡೆಯಲಿದೆ. ಈ ಮೂಲಕ ಪ್ರಮುಖ ಜಲಮೂಲ ರಕ್ಷಣೆಗೆ ಅನುಕೂಲವಾಗಲಿದೆ.