ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ, ದೇಶಾದ್ಯಂತ ಇಂಡಿಗೋ ವಿಮಾನ ರದ್ದಾಗಿರುವ ಕಾರಣ ಕೋಲಾಹಲ ಸೃಷ್ಟಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಲೋಕಲ್ ಮಾರ್ಕೆಟ್ ರೀತಿ ಬದಲಾಗಿದೆ.

ಬೆಂಗಳೂರು (ಡಿ.06) ದೇಶಾದ್ಯಂತ ಕಳೆದ ಕೆಲ ದಿನಗಳಿಂದ ಇಂಡಿಗೋ ವಿಮಾನ ಪ್ರಯಾಣ ಭಾರಿ ಸಮಸ್ಯೆಯಲ್ಲಿ ಸಿಲುಕಿದೆ. 1000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದೆ. ಇಂದೂ ಕೂಡ 400ಕ್ಕೂ ಹಚ್ಚು ಇಂಡಿಗೋ ವಿಮಾನ ಪ್ರಯಾಣ ರದ್ದಾಗಿದೆ. ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ವಿಮಾನದ ಸ್ಟೇಟಸ್ ಚೆಕ್ ಮಾಡಿಕೊಂಡು ಹಲವು ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಒಂದೇ ಸಮನೇ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ವಿಮಾನ ನಿಲ್ದಾಣದ ಗೇಟ್ ಬಳಿ ನೂಕು ನುಗ್ಗಲು ಸಂಭವಿಸಿದೆ.

ಸ್ಟೇಟಸ್ ಚೆಕ್ ಮಾಡಿಕೊಂಡು ಒಳಗಡೆ ಹೋಗಲು ನೂಕು ನುಗ್ಗಲು

ಪ್ರಯಾಣಿಕರು ವಿಮಾನದ ಸ್ಟೇಟಸ್ ಚೆಕ್ ಮಾಡಿ ಧಾವಂತದಿಂದ ಒಳಗೆ ಹೋಗುವ ಪ್ರಯತ್ನ ಮಾಡಿದ್ದಾರೆ. ಇದರ ಪರಿಣಾಮ ಡಿಪಾರ್ಚರ್ ಗೇಟ್ ಮುಂಬಾಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ನೂಕು ನುಗ್ಗಲು ಸಂಭವಿಸಿದೆ. ಇತ್ತ ಪ್ರಯಾಣಿಕರನ್ನು ನಿಯಂತ್ರಣ ಮಾಡಲು ಸಿಬ್ಬಂದಿಯ ಹರಸಾಹಸ ಪಟ್ಟಿದ್ದಾರೆ. ಸಿಐಎಸ್ಎಫ್ ಭದ್ರತಾ ಪಡೆ ಹಾಗೂ ಏರ್ಪೋಟ್ ಸಿಬ್ಬಂದಿಗಳು ಪ್ರಯಾಣಿಕರನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತಿದೆ.

ಮತ್ತೊಂದೆಡೆ ಇಂಡಿಗೋ ವಿಮಾನ ಸಬ್ಬಂದಿಗಳು ರದ್ದಾಗಿರುವ ವಿಮಾನ ಹಾಗೂ ವಿಳಂಬವಾಗಿರುವ ವಿಮಾನಗಳ ಪಟ್ಟಿ ಹಿಡಿದು ಪ್ರಯಾಣಿಕರ ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮೊದಲೇ ಆಕ್ರೋಶಗೊಂಡಿರುವ ಪ್ರಯಾಣಿಕರು ಇಂಡಿಗೋ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ. ಸಾವಿರಾರು ಇಂಡಿಗೋ ವಿಮಾನಗಳು ರದ್ದಾಗಿರುವ ಕಾರಣ ಪ್ರಯಾಣಿಕರು ಕಣ್ಣೀರಿಡುತ್ತಿದ್ದಾರೆ.ಮತ್ತೊಂದೆಡೆ ಹೆಚ್ಚಿನ ಲಗೇಜ್ ಬ್ಯಾಗ್ ಸಮೇತ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಹಲವು ಪ್ರಯಾಣಿಕರು ಬಂದಿಳಿದರೂ ಲಗೇಜ್ ಸಿಗದೇ ಪರದಾಡುತ್ತಿದ್ದಾರೆ.

ಇಂಡಿಗೋ ವಿಮಾನ ರದ್ದಾಗಿ ಇತರ ವಿಮಾನ ಬೆಲೆ ದುಬಾರಿ

ಇಂಡಿಗೋ ವಿಮಾನ ರದ್ದಾಗಿರುವ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪ್ರಯಾಣಕ್ಕಾಗಿ ಇತರ ವಿಮಾನ ಬುಕ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಇತರ ವಿಮಾನ ಟಿಕೆಟ್ ಬುಕಿಂಗ್ ಮಾಡಲು ಪ್ರಯತ್ನಿಸುತ್ತಿದ್ದಂತೆ ವಿಮಾನ ಟಿಕೆಟ್ ಬೆಲೆ ದುಬಾರಿಯಾಗಿದೆ. ಇಂದಿನ ವಿಮಾನ ಬೆಲೆ ಭಾರಿ ಏರಿಕೆಯಾಗಿದೆ.

15 ಸಾವಿರದಿಂದ 80 ಸಾವಿರಕ್ಕೆ ಏರಿಕೆಯಾದ ಟಿಕೆಟ್ ಬೆಲೆ

ಪ್ರಯಾಣಿಕರ ಪರದಾಟ ಬೆನ್ನಲ್ಲೆ ವಿಮಾನ ಟಿಕೆಟ್ ಬೆಲೆಗಳು ಗಗನಕ್ಕೇರಿದೆ. ಇಂಡಿಗೋ ವಿಮಾನಗಳಲ್ಲಿ ಹಲವು ದಿನಗಳ ಹಿಂದೆ ಬುಕಿಂಗ್ ಮಾಡಿ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸುದ್ದಂತೆ ವಿಮಾನ ರದ್ದಾಗುತ್ತಿದೆ, ಕೆಲವು ವಿಳಂಬವಾಗುತ್ತಿದೆ. ಹೀಗಾಗಿ ಪ್ರಯಾಣಿಕರು ಏರ್ ಇಂಡಿಯಾ, ಸ್ಟಾರ್ ಏರ್, ಆಕಾಶ್ ಏರ್ ಸೇರಿದಂತೆ ಇತರೆ ವಿಮಾನಗಳಲ್ಲಿ ಟಿಕೆಟ್ ಬುಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ಈ ವಿಮಾನಗಳ ಟಿಕೆಟ್ ಬೆಲೆ 15-20 ಸಾವಿರ ರೂಪಾಯಿಯಿಂದ 75-80 ಸಾವಿರ ರೂಪಾಯಿಗೆ ಏರಿಕೆಯಾಗಿದೆ.

ಮುಂಬೈ, ದೆಹಲಿ, ಹೈದರಾಬಾದ್, ಚೆನೈ, ಪುಣೆ ಸೇರಿದಂತೆ ಅಂತರಾಜ್ಯಗಳಿಗೆ ತೆರಳಲು ಬಾರಿ ಬೆಲೆ ತೆರಬೇಕಾಗಿದೆ. ದುಪಟ್ಟ ದುರದಿಂದ ಪ್ರಯಾಣಿಕರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಇತರ ವಿಮಾನಗಳು ಬೆಲೆ ಏರಿಕೆ ಮಾಡದಂತೆ ಸೂಚನೆ ನೀಡಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ. ಪ್ರಯಾಣಿಕರ ಪರದಾಟದಲ್ಲೇ ಹಣ ಮಾಡಲು ಇತರ ವಿಮಾನಯಾನ ಸಂಸ್ಥೆಗಳು ಮುಂದಾಗಿದೆ. ಪರಿಣಾಮ ಹಲವು ಪ್ರಯಾಣಿಕರು ಪ್ರಯಾಣವನ್ನೇ ರದ್ದು ಮಾಡಿದ್ದಾರೆ. ಆದರೆ ತುರ್ತಾಗಿ ಪ್ರಯಾಣ ಮಾಡಬೇಕಾದ ಹಲವರು ಆತಂಕಗೊಂಡಿದ್ದಾರೆ.