ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ವಿರುದ್ಧ ಲುಕ್ ಔಟ್ ನೋಟಿಸ್ (ಎಲ್‌ಓಸಿ) ಅನ್ನು ಮಂಗಳವಾರ ಜಾರಿಗೊಳಿಸಲಾಗಿದೆ.

ಬೆಂಗಳೂರು (ಡಿ.24): ನ್ಯಾಯಾಲಯದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ವಿರುದ್ಧ ಲುಕ್ ಔಟ್ ನೋಟಿಸ್ (ಎಲ್‌ಓಸಿ) ಅನ್ನು ಮಂಗಳವಾರ ಜಾರಿಗೊಳಿಸಲಾಗಿದೆ. ಈ ಲುಕ್ ಔಟ್‌ ನೋಟಿಸ್ ಅನ್ನು ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಅಧಿಕಾರಿಗಳು ಕಳುಹಿಸಲಿದ್ದಾರೆ.

ಈ ಹಿನ್ನಲೆಯಲ್ಲಿ ವಿಮಾನ ಹತ್ತಿ ವಿದೇಶಕ್ಕೆ ಪರಾರಿಯಾಗಲು ಶಾಸಕರಿಗೆ ಕಷ್ಟವಾಗಲಿದ್ದು, ಅಜ್ಞಾತವಾಗಿರುವ ಬೈರತಿ ಬಸವರಾಜು ಅವರಿಗೆ ಮತ್ತಷ್ಟು ಕಾನೂನಿನ ಕುಣಿಕೆಯನ್ನು ಸಿಐಡಿ ಬಿಗಿಗೊಳಿಸಿದಂತಾಗಿದೆ. ಹೈಕೋರ್ಟ್‌ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬಳಿಕ ಕಳೆದ ಶುಕ್ರವಾರದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಕಣ್ಮರೆಯಾಗಿರುವ ಶಾಸಕ ಬೈರತಿ ಬಸವರಾಜು ಪತ್ತೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಿಐಡಿ ಹುಡುಕಾಟ ನಡೆಸಿದೆ. ಆದರೆ ಇದುವರೆಗೆ ಶಾಸಕರ ಸುಳಿವು ಮಾತ್ರ ಸಿಗುತ್ತಿಲ್ಲ. ಬಂಧನ ಭೀತಿಯಿಂದ ವಿದೇಶಕ್ಕೆ ಶಾಸಕರು ಪರಾರಿಯಾಗಬಹುದು ಎಂದು ಶಂಕೆ ಸಿಐಡಿ ವ್ಯಕ್ತಪಡಿಸಿದೆ.

ಹೀಗಾಗಿ ಇಂಟರ್‌ ಫೋಲ್‌ಗೆ ರೌಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಾಸಕ ಬೈರತಿ ಬಸವರಾಜು ಪತ್ತೆಗೆ ಲುಕ್‌ ಔಟ್‌ ಜಾರಿಗೊಳಿಸುವಂತೆ ಸಿಐಡಿ ಮನವಿ ಮಾಡಿತ್ತು. ಈ ಕೋರಿಕೆಗೆ ಸ್ಪಂದಿಸಿದ ಇಂಟರ್‌ ಫೋಲ್ ಅಧಿಕಾರಿಗಳು, ಶಾಸಕರ ವಿರುದ್ಧ ಲುಕ್‌ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಅಂತೆಯೇ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಶಾಸಕರ ವಿರುದ್ಧ ನೋಟಿಸ್ ಜಾರಿಯಲ್ಲಿರುತ್ತದೆ. ಒಂದು ವೇಳೆ ವಿಮಾನ ನಿಲ್ದಾಣದಲ್ಲಿ ಶಾಸಕರು ಕಾಣಿಸಿಕೊಂಡರೆ ತಕ್ಷಣವೇ ಅವರನ್ನು ವಶಕ್ಕೆ ಪಡೆದು ನಂತರ ಸಿಐಡಿಗೆ ವಲಸೆ ವಿಭಾಗದ ಅಧಿಕಾರಿಗಳು ಹಸ್ತಾಂತರಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋಕಾ ಜಾರಿ: ವಕೀಲರಿಗೆ ಮೇಲ್ಮನವಿಗೆ ದಾಖಲೆ ಸಲ್ಲಿಕೆ

ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದ ಸಂಬಂಧ ಶಾಸಕ ಬೈರತಿ ಬಸವರಾಜು ಸೇರಿದಂತೆ ಆರೋಪಿಗಳ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000) ಜಾರಿ ಸಲುವಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಂಬಂಧ ಕಾನೂನು ತಜ್ಞರ ತಂಡಕ್ಕೆ ಸಿಐಡಿ ದಾಖಲೆಗಳನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ ಸಿಐಡಿ ಕೋಕಾ ಕಾಯ್ದೆ ಜಾರಿಗೊಳಿಸಿದ್ದನ್ನು ಹೈ ಕೋರ್ಟ್ ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿಐಡಿ ನಿರ್ಧರಿಸಿದೆ. ಅಂತೆಯೇ ಕೊಲೆ ಪ್ರಕರಣ ಸಂಬಂಧಿಸಿದ ಕನ್ನಡದಲ್ಲಿದ್ದ ಎಲ್ಲ ದಾಖಲೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಸಲ್ಲಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಕೋರ್ಟ್‌ಗೆ ವಕೀಲರು ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.