ಮಹಾರಾಷ್ಟ್ರದಲ್ಲಿ ಮರಾಠಿ ಬಾರದ ಚಾಲಕರ ಪರವಾನಗಿ ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಕರವೇ, ಕರ್ನಾಟಕದಲ್ಲೂ ಇದೇ ನಿಯಮ ಜಾರಿಗೆ ತರಲು ಆಗ್ರಹಿಸಿದೆ. ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರ ಪರವಾನಗಿ ರದ್ದುಗೊಳಿಸಲು ಕರವೇ ಆಗ್ರಹಿಸಿದೆ.

ಬೆಂಗಳೂರು (ಏ.17): ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಇದೇ ನಿಯಮವನ್ನು ಇಲ್ಲಿಯೂ ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಕರವೇ ಎಕ್ಸ್ ಖಾತೆಯಲ್ಲಿ ಏನಿದೆ?

ಈ ನಿಯಮ ಮಹಾರಾಷ್ಟ್ರದಲ್ಲಿ ಮೇ 1ರಿಂದ ಜಾರಿಗೆ ಬರಲಿದೆ. ಈಗಾಗಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ಆ ರಾಜ್ಯಾದ್ಯಂತ 59 ಆರ್‌ಟಿಒ ಕಚೇರಿಗಳಲ್ಲಿ ತಪಾಸಣೆ ನಡೆಸಿ, ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿಯದ ಚಾಲಕರ ಪರವಾನಗಿಗಳನ್ನು ರದ್ದುಗೊಳಿಸುವ ಕೆಲಸ ಆರಂಭಿಸಿರುವುದನ್ನು ಕರವೇ ಸ್ವಾಗತಿಸುತ್ತದೆ ಎಂದು ‘ಎಕ್ಸ್‌’ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಮಹಾರಾಷ್ಟ್ರ ತೀರ್ಮಾನ ಸರಿ ಇದೆ

ಜೀವನ ನಿರ್ವಹಣೆಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವವರು ಆ ರಾಜ್ಯದ ಅಧಿಕೃತ ಭಾಷೆಯನ್ನು ಕಲಿಯುವುದು ಅತ್ಯಂತ ಮೂಲಭೂತ ಕರ್ತವ್ಯವಾಗಿದೆ. ತಮ್ಮ ಜೀವನಾಧಾರಕ್ಕಾಗಿ ಆ ರಾಜ್ಯದ ಮಣ್ಣು, ನೀರು ಮತ್ತು ಜನರನ್ನು ಅವಲಂಬಿಸುವಾಗ, ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನರೊಂದಿಗೆ ಬೆರೆಯುವುದು ಸಹಜವಾದ ನೈತಿಕ ಜವಾಬ್ದಾರಿಯಾಗಿದೆ. ಹಾಗಾಗಿ ಮಹಾರಾಷ್ಟ್ರ ಸರ್ಕಾರದ ಈ ತೀರ್ಮಾನ ಸಂಪೂರ್ಣವಾಗಿ ಸರಿಯಾಗಿದ್ದು ಇಂದಿನ ಅಗತ್ಯವಾದದ್ದು ಎಂದಿದ್ದಾರೆ.

ತಮಿಳುನಾಡಿನಲ್ಲೂ ಅಲ್ಲಿನ ಚಾಲಕರು ಪರವಾನಗಿ ಪಡೆಯುವಾಗ ಅಥವಾ ನವೀಕರಿಸುವಾಗ ತಮಿಳು ಭಾಷೆಯಲ್ಲಿ ಕನಿಷ್ಠ ಮಟ್ಟದ ಜ್ಞಾನ ಇದೆಯೇ ಎಂದು ಪರೀಕ್ಷಿಸಲಾಗುತ್ತಿದೆ. ಈ ಧೋರಣೆಯನ್ನು ಕರ್ನಾಟಕ ಸರ್ಕಾರವೂ ತಕ್ಷಣ ಅನುಸರಿಸಬೇಕು. ಕನ್ನಡ ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಮತ್ತು ಇತರ ಸಾರಿಗೆ ವಾಹನ ಚಾಲಕರ ಪರವಾನಗಿ ರದ್ದುಗೊಳಿಸುವ ಸ್ಪಷ್ಟ ನಿಯಮಾವಳಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.