ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೊಸ ಸಾಕ್ಷಿದಾರರು ಎಸ್ಐಟಿಗೆ ದೂರು ನೀಡಿದ್ದಾರೆ. ಮುಸುಕುಧಾರಿ ವ್ಯಕ್ತಿಯೊಬ್ಬ ರಹಸ್ಯವಾಗಿ ಶವಗಳನ್ನು ಹೂತಿಟ್ಟಿರುವುದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ.
ಬೆಳ್ತಂಗಡಿ: ಧರ್ಮಸ್ಥಳ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಅನಾಮಿಕ ಮುಸುಕುಧಾರಿ ವ್ಯಕ್ತಿ ಶವ ಹೂತಿದ್ದನ್ನು ಕಂಡಿದ್ದಾಗಿ ಇಬ್ಬರು ಸಾಕ್ಷಿದಾರರು ಮತ್ತೆ ಎಸ್ಐಟಿಗೆ ದೂರು ನೀಡಿದ್ದಾರೆ. ಎಸ್ಐಟಿ, ದೂರು ಸ್ವೀಕರಿಸಿ, ಸ್ಥಳೀಯ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ಸಲ್ಲಿಸಲು ಸೂಚನೆ ನೀಡಿದೆ. ಈ ಸೂಚನೆಯ ಹಿನ್ನೆಲೆಯಲ್ಲಿ ಇಬ್ಬರೂ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೃಶ್ಯಮಾಧ್ಯಮದಲ್ಲಿ ತೋರಿಸಲಾಗುತ್ತಿರುವ ದೂರುದಾರನನ್ನು ನಾವು ಗ್ರಾಮಸ್ಥರು ಗುರುತಿಸಿದ್ದೇವೆ. ಆತ ರಹಸ್ಯವಾಗಿ, ಜನರಿಗೆ ಕಾಣದಂತೆ ಧರ್ಮಸ್ಥಳ ಗ್ರಾಮದ ವಿವಿಧೆಡೆ ಶವಗಳನ್ನು ಕೊಂಡೊಯ್ದು ಹೂತುಹಾಕಿರುವುದನ್ನು ನಾವು ಹಲವು ಸ್ಥಳಗಳಲ್ಲಿ ನೋಡಿದ್ದೇವೆ. ಇಂತಹ ಕೆಲಸಗಳು ರಹಸ್ಯವಾಗಿ ಇರಲಾರವು ಎಂಬುದನ್ನು ಆತ ತಿಳಿದಿರಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಜನರ ರಕ್ಷಣೆಗೆಂದು ಮಾನ್ಯ ಮುಖ್ಯಮಂತ್ರಿ ಸ್ಥಾಪಿಸಿರುವ ಈ ವಿಶೇಷ ತನಿಖಾ ದಳಕ್ಕೆ ನಾವು ಸಹಕಾರ ನೀಡಬೇಕೆಂದು ನಿರ್ಧರಿಸಿದ್ದೇವೆ. ದೂರುದಾರನು ತೋರಿಸುತ್ತಿರುವ ಸ್ಥಳಗಳಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ನಮ್ಮನ್ನೂ ಸೇರಿಸಬೇಕು. ಜೊತೆಗೆ, ಆತ ರಹಸ್ಯವಾಗಿ ಶವ ಹೂತುಹಾಕಿದ್ದನ್ನು ನಾವು ನೋಡಿರುವ ಎಲ್ಲಾ ಸ್ಥಳಗಳನ್ನು ಸ್ವತಂತ್ರವಾಗಿ ತೋರಿಸಲು ಅವಕಾಶ ನೀಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಈ ರೀತಿಯಾಗಿ, ಮತ್ತಿಬ್ಬರು ಸಾಕ್ಷಿದಾರರು ಎಸ್ಐಟಿಗೆ ತಮ್ಮ ಹೇಳಿಕೆಗಳನ್ನು ದಾಖಲಿಸಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
13 ನೇ ಪಾಯಿಂಟ್ ಶೋಧಕ್ಕೆ ವಿಳಂಭವೇಕೆ?
ಇನ್ನು ಧರ್ಮಸ್ಥಳದ ಅರಣ್ಯದಲ್ಲಿ ನೂರಾರು ಮೃತದೇಹ ಹೂತಿಟ್ಟಿರುವ ಪ್ರಕರಣ ತನಿಖೆ ನಿರಂತರವಾಗಿ ಮುಂದುವರಿದಿದೆ. ಇಂದು ಬೆಳ್ತಂಗಡಿ ಎಸ್.ಐ.ಟಿ. ಕಚೇರಿಯಲ್ಲಿ ತೀವ್ರ ಚಟುವಟಿಕೆ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ತನಿಖಾ ಅಧಿಕಾರಿಗಳು ಕಚೇರಿಯಲ್ಲಿ ಹಾಜರಿದ್ದು, ಶೋಧ ನಡೆಸಬೇಕೋ ಅಥವಾ ಅನಾಮಿಕ ಮುಸುಕುದಾರಿಯನ್ನು ವಿಚಾರಣೆ ಮಾಡಬೇಕೋ ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ.
ಕಳೆದ 10 ದಿನಗಳಿಂದ ಮುಸುಕುದಾರಿ ತೋರಿಸಿದ ಸ್ಥಳಗಳಲ್ಲಿ ಭೂಮಿ ಅಗೆದು ಪರಿಶೀಲನೆ ನಡೆಸಿರುವ ಎಸ್.ಐ.ಟಿ., ನಿನ್ನೆ ಒಂದೇ ದಿನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿತ್ತು. ಈವರೆಗೆ ಒಟ್ಟು 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಇನ್ನೂ 13 ನೇ ಪಾಯಿಂಟ್ ಅನ್ನು ಶೋಧ ನಡೆಸದೆ ಬಿಟ್ಟಿದೆ. ಈ ಸ್ಥಳವನ್ನು ಅಗೆಯಲು ಜಿಪಿಆರ್ (GPR) ಯಂತ್ರದ ಬಳಕೆ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಆದರೂ 13ನೇ ಪಾಯಿಂಟ್ ಅನ್ನು ಅಗೆಯಲು ಯಾಕಿಷ್ಟು ತಡ ಎಂಬ ಕುತೂಹಲ ಮತ್ತು ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಇಂದು 2ನೇ ಶನಿವಾರವಾರ ರಜೆಯ ದಿನವಾದರೂ ಕೂಡ ಎಸಿ ಮತ್ತು ತಹಶಿಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ನೌಕರರು ಎಸ್ಐಟಿ ಕಾರ್ಯಕ್ಕೆ ಬೆಂಬಲ ನೀಡಲು ಕಚೇರಿಗೆ ಆಗಮಿಸಿದ್ದಾರೆ. ಎಸಿ ಸೂಚನೆಯಂತೆ, ಯಾವುದೇ ವಿಳಂಬವಿಲ್ಲದೆ ಶೋಧಕ್ಕೆ ತಯಾರಾಗಿದ್ದಾರೆ. ವಕೀಲರ ಜೊತೆ ಮುಸುಕುದಾರಿ ಇಂದು ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದು, ಪೊಲೀಸ್ ಭದ್ರತೆಯ ನಡುವೆ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮುಸುಕುದಾರಿ ಗುರುತಿಸಿದ ಸ್ಥಳಗಳಲ್ಲಿ ತಕ್ಷಣವೇ ಶೋಧ ಪ್ರಾರಂಭಿಸುವ ಸಾಧ್ಯತೆಯೂ ಅಧಿಕಾರಿಗಳ ಚರ್ಚೆಯ ಭಾಗವಾಗಿದೆ. ಇಂದಿನ ಬೆಳವಣಿಗೆ ಏನಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.


