ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯ ಹಿಂದೆ ಒಂದು ಗುಂಪಿದೆ. ಈ ಗುಂಪೇ ಆತನಿಗೆ ಬುರುಡೆ ನೀಡಿ ಎಸ್‌ಐಟಿ ಮುಂದೆ ಶರಣಾಗುವಂತೆ ಒತ್ತಾಯಿಸಿದೆ ಎಂದು ವಿಶೇಷ ತನಿಖಾ ತಂಡಕ್ಕೆ ತಿಳಿಸಿದ್ದಾನೆ.

ಬೆಂಗಳೂರು (ಆ.18): ಹಿಂದೂ ಧರ್ಮದ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮುಂದೆ ಬಂದಿರುವ ಅನಾಮಿಕ ತಾನಾಗಿಯೇ ಮುಂದೆ ಬಂದಿಲ್ಲ. ಆ... ಒಂದು ಗುಂಪು ನನಗೆ ಬುರುಡೆ ಕೊಟ್ಟು ಎಸ್‌ಐಟಿ ಮುಂದೆ ಶರಣಾಗಲು ಹೇಳಿತ್ತು. ಬುರುಡೆ ಕೊಟ್ಟು ಅವರು ಹೇಳಿದಂತೆ ನಾನು ಹೇಳಿದ್ದೇನೆ ಎಂದು ವಿಶೇಷ ತನಿಖಾ ತಂಡದ ಮುಮದೆ ಹೇಳಿದ್ದಾನೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (ವಿಶೇಷ ತನಿಖಾ ತಂಡ) ಮುಂದೆ ಹಾಜರಾದ ದೂರುದಾರ ಅನಾಮಿಕ, ತಾನು ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳಿಕೆ ನೀಡಿರುವುದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ತನಿಖಾಧಿಕಾರಿಗಳು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಹೇಳಿಕೆಯ ಪ್ರಮುಖ ಅಂಶಗಳು:

  • ತಮಿಳುನಾಡಿನಲ್ಲಿ ನೆಲೆ: '2014ರಲ್ಲಿ ಧರ್ಮಸ್ಥಳವನ್ನು ಬಿಟ್ಟ ನಂತರ ನಾನು ತಮಿಳುನಾಡಿನಲ್ಲಿ ನೆಲೆಸಿದ್ದೆ' ಎಂದು ಅನಾಮಿಕ ಹೇಳಿದ್ದಾರೆ.
  • ಸಂಪರ್ಕಿಸಿದ ಗುಂಪು: '2023ರಲ್ಲಿ ಕೆಲವು ಜನರ ಗುಂಪು ನನ್ನನ್ನು ಸಂಪರ್ಕಿಸಿತು. ಕಾನೂನು ಪ್ರಕಾರವೇ ಶವಗಳನ್ನು ಹೂತಿದ್ದೆ ಎಂದು ನಾನು ಅವರಿಗೆ ಹೇಳಿದ್ದೆ' ಎಂದು ತಿಳಿಸಿದ್ದಾರೆ.
  • ಪೊಲೀಸರ ಮುಂದೆ ಶರಣಾಗಲು ಒತ್ತಡ: ಆ ಗುಂಪು, ತಾನು ಪೊಲೀಸರ ಮುಂದೆ ಶರಣಾಗುವಂತೆ ಒತ್ತಡ ಹೇರಿದೆ. "ಬುರುಡೆ ತಂದು ಕೊಟ್ಟು ಅವರು ಹೇಳಿದಂತೆ ನಾನು ನಡೆದುಕೊಂಡೆ' ಎಂದು ಅನಾಮಿಕ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
  • ಸುಳ್ಳು ಹೇಳಿಕೆಗೆ ಸಹಕಾರ: 'ಪೊಲೀಸರ ಮುಂದೆ ಏನು ಹೇಳಬೇಕೆಂದು ಮೂವರು ನನಗೆ ಹೇಳಿಕೊಟ್ಟಿದ್ದರು. ಅವರ ಒತ್ತಡಕ್ಕೆ ಒಳಗಾಗಿ ನಾನು ಸುಳ್ಳು ಹೇಳಿಕೆ ಕೊಟ್ಟೆ' ಎಂದು ಅನಾಮಿಕ ಸ್ಪಷ್ಟಪಡಿಸಿದ್ದಾರೆ.
  • ಸುಜಾತಾ ಭಟ್ ದೂರಿನ ನಂತರ ಧೈರ್ಯ: 'ಸುಜಾತಾ ಭಟ್ ಅವರು ದೂರು ಕೊಡುವ ತನಕ ನನಗೆ ಭಯವಾಗುತ್ತಿತ್ತು. ಆದರೆ, ಸುಜಾತಾ ಅವರು ದೂರು ಕೊಟ್ಟ ನಂತರ ನನಗೆ ಧೈರ್ಯ ಬಂತು' ಎಂದು ಅನಾಮಿಕ ಹೇಳಿದ್ದಾರೆ.

ಈ ಹೇಳಿಕೆಯ ನಂತರ, ಎಸ್ಐಟಿ ಅಧಿಕಾರಿಗಳು ದೂರುದಾರನ ಸಂಪೂರ್ಣ ವಿಡಿಯೋ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ, ಪ್ರಕರಣದ ಮುಂದಿನ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ದೂರುದಾರ ಅನಾಮಿಕನ ಈ ಸ್ಫೋಟಕ ಹೇಳಿಕೆಯು ಪ್ರಕರಣದ ಆಳವಾದ ತನಿಖೆಗೆ ಒತ್ತಾಯಿಸುತ್ತಿದೆ. ಈ ಮೂಲಕ, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ತಲೆ ಬುರುಡೆ ಕೊಟ್ಟು, ನೂರಾರು ಶವ ಹೂತಿದ್ದೇನೆ ಎಂದಿದ್ದ ಅನಾಮಿಕ:

ಅನಾಮಿಕ ವ್ಯಕ್ತಿ ಪೊಲೀಸರಿಗೆ ಕೊಟ್ಟ ಬುರುಡೆ ಹಾಗೂ ಅದನ್ನು ಹೊರಗೆ ತೆಗೆದ ವಿಡಿಯೋವನ್ನು ಪೊಲೀಸರ ಮುಂದೆ ಇಟ್ಟಿದ್ದಾನೆ. ಈ ಬುರುಡೆ ಎಲ್ಲಿ ಸಿಕ್ಕಿದೆ ಎಂದು ಕೇಳಿದಾಗ, ಇದೊಂದೇ ಅಲ್ಲ ಇಂತಹ ನೂರಾರು ಹೆಣ್ಣು ಮಕ್ಕಳ ಶವಗಳನ್ನು ನಾನು ಧರ್ಮಸ್ಥಳದ ಸುತ್ತಮುತ್ತಲೂ ಹೂತಿದ್ದೇನೆ. ನಿಮಗೆ ಶವಗಳನ್ನು ಹೂತಿರುವ ಶವಗಳನ್ನು ಹೂತಿದ್ದಾಗಿ ತಿಳಿಸಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಸಿತ್ತು. ಆದರೆ, ಅನಾಮಿಕ ತೋರಿಸಿದ 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಎರಡರಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದವು. ಆತ ತೋರಿಸಿದ ಯಾವುದೇ ಜಾಗದಲ್ಲಿ ಮಹಿಳೆಯರ ಅಸ್ತಿಪಂಜರ ಸಿಕ್ಕಿಲ್ಲ. ಇದೀಗ ಅನಾಮಿಕ ವ್ಯಕ್ತಿಯನ್ನು ತೀವ್ರ ವಿಚಾರಣೆ ಮಾಡಿದಾಗ ಒಂದು ನನಗೆ ಬುರುಡೆ ಕೊಟ್ಟು, ಎಸ್ಐಟಿ ಮುಂದೆ ಹೀಗೆ ಹೇಳುವಂತೆ ತಿಳಿಸಿತ್ತು. ಇದಾದ ನಂತರ ನಾನು ಎಸ್‌ಐಟಿ ಮುಂದೆ ಬುರುಡೆ ಕೊಟ್ಟು ಶರಣಾಗಿದ್ದೆ ಎಂದು ತಿಳಿಸಿದ್ದಾನೆ.

ಬುರುಡೆ ತಂದಿದ್ದು ಎಲ್ಲಿಂದ ಎಂಬುದಕ್ಕೇ ಸ್ಪಷ್ಟ ಉತ್ತರವಿಲ್ಲ:

ಇನ್ನು ಅನಾಮಿಕ ವ್ಯಕ್ತಿ ಪೊಲೀಸರಿಗೆ ತಂದುಕೊಟ್ಟ ತಲೆ ಬುರುಡೆ ಎಲ್ಲಿಂದ ತಂದಿದ್ದೀಯ ಎಂದು ಕೇಳಿದ್ದಾರೆ. ಇದಕ್ಕೆ ಸ್ಪಷ್ಟವಾಗಿ ಉತ್ತರ ಕೊಡದ ಅನಾಮಿಕ ವ್ಯಕ್ತಿ ಬಂಗ್ಲೆಗುಡ್ಡ, ಬೋಳಿಯಾರು, ಕಲ್ಲೇರಿ, ಕಾಡು ಎಂದೆಲ್ಲಾ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಇದರಿಂದ ಎಸ್‌ಐಟಿ ಆತನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಅನಾಮಿಕ ವ್ಯಕ್ತಿ ತಂದುಕೊಟ್ಟ ತಲೆಬುರುಡೆ ಕೂಡ ಪುರುಷನದ್ದು, ಎಂದು ಎಫ್‌ಎಸ್‌ಎಲ್ ವರದಿಯಿಂದ ತಿಳಿದುಬಂದಿದೆ.