ಸರ್ಕಾರಿ ನೇಮಕಾತಿ ವಿಳಂಬ ಮತ್ತು ಪರೀಕ್ಷೆಯಲ್ಲಿನ ವೈಫಲ್ಯದಿಂದ ಮನನೊಂದು, 25 ವರ್ಷದ ಯುವತಿಯೊಬ್ಬಳು ಧಾರವಾಡದಲ್ಲಿ ರೈಲಿಗೆ ಸಿಲುಕಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಯುವತಿ.
ಧಾರವಾಡ (ಡಿ.17):ಸರ್ಕಾರಿ ನೇಮಕಾತಿ ಪರೀಕ್ಷೆಗಳು ಸಕಾಲದಲ್ಲಿ ನಡೆಯುತ್ತಿಲ್ಲ, ಪರೀಕ್ಷೆ ಬರೆದರೂ ಉದ್ಯೋಗ ಸಿಗುವುದು ಕಷ್ಟವಾಗಿದೆ ಎಂದು ಮನನೊಂದ ಯುವತಿಯೊಬ್ಬಳು ರೈಲು ಹಳಿಗೆ ಬಿದ್ದು ಆತ್ಮ೧ಹತ್ಯೆ ಮಾಡಿಕೊಂಡಿರುವ ದುರ್ಘಟನೆ ಧಾರವಾಡದಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಕಗ್ಗಲ್ ಗ್ರಾಮದ ವಿದ್ಯಾರ್ಥಿನಿ, 25 ವರ್ಷದ ಪಲ್ಲವಿ ಕಗ್ಗಲ್ ಸಾವಿಗೆ ಶರಣಾಗಿದ್ದಾಳೆ.
ನಾಲ್ಕು ವರ್ಷಗಳ ಓದು: ದೈಹಿಕ ಪರೀಕ್ಷೆಪಾಸಾದರೂ ಕೈಕೊಟ್ಟ ಅದೃಷ್ಟ
ಬಿಕಾಂ ಪದವಿ ಮುಗಿಸಿದ್ದ ಯುವತಿ, ಕಳೆದ ನಾಲ್ಕು ವರ್ಷಗಳಿಂದಲೂ ಧಾರವಾಡದಲ್ಲಿ ಉಳಿದುಕೊಂಡು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದರು. ಇತ್ತೀಚೆಗೆ ನಡೆದಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಪಲ್ಲವಿ 2024ರಲ್ಲಿ ಯಶಸ್ವಿಯಾಗಿ ಉತ್ತೀರ್ಣಳಾಗಿದ್ದಳು. ಆದರೆ, ಲಿಖಿತ ಪರೀಕ್ಷೆಯಲ್ಲಿ ಮಾತ್ರ ಯಶಸ್ಸು ಸಿಕ್ಕಿರಲಿಲ್ಲ. ಇದರ ಜೊತೆಗೆ, ಸರ್ಕಾರದ ನೇಮಕಾತಿ ಪ್ರಕ್ರಿಯೆಗಳ ವಿಳಂಬ ಮತ್ತು ಅನಿಶ್ಚಿತತೆಯು ಯುವತಿಯನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತ್ತು ಎನ್ನಲಾಗಿದೆ. ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ನೇಮಕಾತಿ ವಿಳಂಬ ವಿರೋಧಿಸಿ ನಡೆದ ಪ್ರತಿಭಟನೆಯಲ್ಲೂ ಪಲ್ಲವಿ ಭಾಗವಹಿಸಿದ್ದಳು.
ಶಿವಗಿರಿ ರೈಲ್ವೆ ಟ್ರ್ಯಾಕ್‌ನಲ್ಲಿ ಘಟನೆ: ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ
ಬುಧವಾರ (ಡಿಸೆಂಬರ್ 17, 2025) ಧಾರವಾಡದ ಶಿವಗಿರಿ ರೈಲ್ವೆ ಟ್ರ್ಯಾಕ್‌ಗೆ ಬಿದ್ದ ಯುವತಿ ಪಲ್ಲವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹವನ್ನು ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಧಾರವಾಡದ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

