ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ವರ್ತನೆ ಮತ್ತು ಅಧಿಕಾರ ದುರುಪಯೋಗದ ಆರೋಪದ ಮೇಲೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಆ.29): ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ವರ್ತನೆ ಮತ್ತು ಅಧಿಕಾರ ವ್ಯಾಪ್ತಿ ಮೀರಿದ ನಡವಳಿಕೆಗೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಅವರನ್ನು ಅಧ್ಯಕ್ಷೆ ಸ್ಥಾನದಿಂದ ತಕ್ಷಣ ಕೆಳಗಿಳಿಸಬೇಕೆಂದು ಒತ್ತಾಯಿಸಿರು.
ಸಬ್ ಇನ್ಸ್‌ಪೆಕ್ಟರ್ ಕುರ್ಚಿಯಲ್ಲಿ ಕೂರಲು ಇವರಿಗೇನು ಅರ್ಹತೆ?
ನಾಗಲಕ್ಷ್ಮೀ ಚೌಧರಿ ಅವರು ಪೊಲೀಸ್ ಠಾಣೆಯೊಂದರಲ್ಲಿ ಸಬ್ ಇನ್ಸ್‌ಪೆಕ್ಟರ್ ಕುರ್ಚಿಯಲ್ಲಿ ಕುಳಿತುಕೊಂಡಿರುವ ಆರೋಪ ಸಂಬಂಧ ‘X’ ಅಕೌಂಟ್‌ನಲ್ಲಿ ಫೋಟೋ ಸಹಿತ ಬರೆದು ಪೋಸ್ಟ್ ಮಾಡಿರುವ ಮಾಜಿ ಐಪಿಎಸ್ ಭಾಸ್ಕರ್ ಅವರು, ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಕುರ್ಚಿಯಲ್ಲಿ ಕುಳಿತುಕೊಂಡಿರುವ ಅಧಿಕಾರ ವ್ಯಾಪ್ತಿಯನ್ನು ಮೀರಿದ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ಠಾಣೆಯಲ್ಲಿ ಈ ರೀತಿಯ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕೇವಲ ಹಿರಿಯ ಅಧಿಕಾರಿಗಳು, ಸಚಿವರು ಅಥವಾ ಮುಖ್ಯಮಂತ್ರಿಗಳಿಗೆ ಮಾತ್ರ ಅಧಿಕಾರವಿದೆ. ಆದರೆ, ಚೌಧರಿ ಯಾರು? ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವರಿಗೇನು ಅಧಿಕಾರ ಎಂದು ಪ್ರಶ್ನಿಸಿದ ಭಾಸ್ಕರ್ ರಾವ್, ಇದು ನಾಗಲಕ್ಷ್ಮೀ ಚೌಧರಿ ಅವರ ದುರಹಂಕಾರ ಮತ್ತು ಅಜ್ಞಾನವನ್ನು ಪ್ರದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯೋಗದ ಅಧ್ಯಕ್ಷೆ ಸ್ಥಾನದಿಂದ ತೆಗೆಯಲು ಒತ್ತಾಯ:
ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಆಡಳಿತದ ಬಗ್ಗೆ ಚೌಧರಿ ಅವರಿಗೆ ಸೂಕ್ತ ಜ್ಞಾನವಿಲ್ಲ ಎಂದು ಆರೋಪಿಸಿರುವ ಭಾಸ್ಕರ್ ರಾವ್ ಅವರು, ಅವರ ಇಂಥ ನಡವಳಿಕೆಯಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ನಾಗಲಕ್ಷ್ಮೀ ಚೌಧರಿ ಅವರನ್ನು ತಕ್ಷಣ ಅಧ್ಯಕ್ಷೆ ಸ್ಥಾನದಿಂದ ತೆಗೆದುಹಾಕಬೇಕು, ಅಥವಾ ಅವರೇ ಸ್ವಯಂ ಇಚ್ಛೆಯಿಂದ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಈ ಆರೋಪಗಳಿಗೆ ನಾಗಲಕ್ಷ್ಮೀ ಚೌಧರಿ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿವಾದವು ಮಹಿಳಾ ಆಯೋಗದ ಕಾರ್ಯನಿರ್ವಹಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕಾದುನೋಡಬೇಕಾಗಿದೆ.


