ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು, ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ₹10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಳ್ಳಿಗಳಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಸಿಗದಿರುವ ಸಮಸ್ಯೆ ಬಗೆಹರಿಸಲು ಈ ಯೋಜನೆ ಸಹಕಾರಿ.
ವಿಧಾನಪರಿಷತ್ (ಡಿ.18): ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ ₹10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಸದಸ್ಯ ಪುಟ್ಟಣ್ಣ ಆಗ್ರಹಿಸಿದ್ದಾರೆ.
ಬುಧವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಹಳ್ಳಿಗಳಲ್ಲಿ ರೈತರು, ಕೃಷಿ ಕಾರ್ಮಿಕರು, ಕೂಲಿಕಾರ್ಮಿಕರ ಮಕ್ಕಳನ್ನು ಯಾವ ಹೆಣ್ಮಕ್ಕಳು ಮದುವೆ ಆಗಲು ಒಪ್ಪುತ್ತಿಲ್ಲ. ಹೆಣ್ಮಕ್ಕಳೆಲ್ಲರೂ ಸರ್ಕಾರಿ ನೌಕರರು, ಸಿಟಿಗಳಲ್ಲಿರುವ ಗಂಡು ಮಕ್ಕಳನ್ನೇ ಮದುವೆಯಾಗಲು ಬಯಸುತ್ತಿದ್ದಾರೆ. ಹೀಗಾಗಿ ಗಂಡುಮಕ್ಕಳ ಮದುವೆಯೇ ಆಗುತ್ತಿಲ್ಲ. ಹೆಣ್ಣು ಸಿಗಲೆಂದು ಗಂಡು ಮಕ್ಕಳೆಲ್ಲ ಮಲೆ ಮಾದೇಶ್ವರ ಬೆಟ್ಟ, ಧರ್ಮಸ್ಥಳ ಹೀಗೆ ಬೇರೆ ಬೇರೆ ಧಾರ್ಮಿಕ ಕ್ಷೇತ್ರಗಳಿಗೆ ಹರಕೆ ಹೊರುತ್ತಿದ್ದಾರೆ. ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೂ ಮದುವೆಯಾಗುತ್ತಿಲ್ಲ. ಹೀಗಾಗಿ ಅವರ ಅನುಕೂಲಕ್ಕೆ ಸರ್ಕಾರ ಯೋಜನೆ ತರಬೇಕು ಎಂದರು.
ಇತ್ತೀಚಿಗಷ್ಟೇ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ನಡೆದ ವಿದ್ಯಾರ್ಥಿ ಹೋರಾಟದಲ್ಲಿಯೂ ಭಾಗವಹಿಸಿದ್ದರು.
ರೈತರ, ಕೃಷಿ ಕಾರ್ಮಿಕರು, ಕೂಲಿಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಲ್ಲಿ ಕನಿಷ್ಠ ₹10 ಲಕ್ಷ ಠೇವಣಿ ಭಾಗ್ಯ ಎಂಬ ಹೆಸರಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸಬೇಕು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಎನ್.ಎಸ್.ಬೋಜರಾಜು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.
ಆದಕಾರಣ ಸರ್ಕಾರ ರೈತರ ಮಕ್ಕಳ ನೆರವಿಗೆ ಬರಬೇಕು. ಹಾಗೆ ನೋಡಿದರೆ ₹25 ಲಕ್ಷ ಕೊಟ್ಟರೆ ಉತ್ತಮ. ಆದರೆ ಕನಿಷ್ಠ ₹10 ಲಕ್ಷವನ್ನಾದರೂ ಠೇವಣಿ ಇಡುವಂತಾಗಬೇಕು. ಈ ಮೂಲಕ ರೈತರ ಮಕ್ಕಳನ್ನು ಮದುವೆಯಾಗಲು ಉತ್ತೇಜನ ನೀಡಬೇಕು ಎಂದರು.


