ಹಾಸನದ ಮೊಸಳೆ ಹೊಸಳ್ಳಿ ಅಪಘಾತದಲ್ಲಿ ಗಾಯಗೊಂಡವರನ್ನು ದೇವೇಗೌಡರು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದರು. ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಹಾಸನ (ಸೆ.14): ಮೊಸಳೆ ಹೊಸಳ್ಳಿಯಲ್ಲಿ ಗಣೇಶೋತ್ಸವದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶನಿವಾರ ವ್ಹೀಲ್‌ ಚೇರಿನಲ್ಲೇ ಆಸ್ಪತ್ರೆಗೆ ಬಂದು ಭೇಟಿ ಮಾಡಿ ಸಾಂತ್ವನ ಹೇಳಿ, ಮೃತರಿಗೆ ತಮ್ಮ ಪಕ್ಷದಿಂದಲೂ ಪರಿಹಾರ ಘೋಷಿಸಿದರು.

ಮಾಧ್ಯಮದೊಂದಿಗೆ ಮಾತನಾಡಿ, ಹಾಸನದಲ್ಲಿ ಮೃತಪಟ್ಟ 10 ಜನರಲ್ಲಿ ೬ ಜನ ಹೊಳೇನರಸೀಪುರ ತಾಲೂಕಿನವರೇ ಆಗಿದ್ದು, ಅಲ್ಲಿನ ಜನರೊಂದಿಗೆ ತಮ್ಮ ಆತ್ಮೀಯ ಬಾಂಧವ್ಯವಿದೆ ಎಂದು ದೇವೇಗೌಡರು ಭಾವುಕರಾದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ೫ ಲಕ್ಷ ರು. ಪರಿಹಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ೨ ಲಕ್ಷ ರು. ಮತ್ತು ಗಾಯಾಳುಗಳಿಗೆ ೫೦ ಸಾವಿರ ರು. ಪರಿಹಾರ ಘೋಷಿಸಿರುವುದನ್ನು ದೇವೇಗೌಡರು ಮೆಚ್ಚಿಕೊಂಡರು.

ಆದಾಗ್ಯೂ ಮೃತರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತವೆ. ಆದ್ದರಿಂದ ಕನಿಷ್ಠ ೧೦ ಲಕ್ಷ ರು. ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ನಾನು ಸಿದ್ದರಾಮಯ್ಯನವರ ಬಳಿ ಇದನ್ನೇ ಮನವಿ ಮಾಡುತ್ತೇನೆ ಎಂದರು. ಜೆಡಿಎಸ್ ಪಕ್ಷದ ಪರವಾಗಿ ಗಂಭೀರ ಗಾಯಗೊಂಡವರಿಗೆ ೨೫ ಸಾವಿರ, ಸಣ್ಣಪುಟ್ಟ ಗಾಯಗಳಾಗಿರುವವರಿಗೆ ೨೦ ಸಾವಿರ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.