ಕಲಬುರಗಿ ನಗರ ಸೇರಿದಂತ ಜಿಲ್ಲಾದ್ಯಂತ ಗುರುವಾರ ಮಧ್ಯರಾತ್ರಿಯಿಂದಲೇ ಭಾರಿ ಮಳೆ ಆರಂಭವಾಗಿದೆ. ಇದುವರೆಗೂ ಭೀಮಾ ಪ್ರವಾಹದಿಂದಾಗಿ ಜಿಲ್ಲೆಯ ಜನತೆ, ರೈತರು ಭಾರಿ ಮಳೆಯಿಂದಾಗಿ ಕಂಗಾಲಾಗಿದ್ದಾರೆ.

ಕಲಬುರಗಿ (ಸೆ.27): ಕಲಬುರಗಿ ನಗರ ಸೇರಿದಂತ ಜಿಲ್ಲಾದ್ಯಂತ ಗುರುವಾರ ಮಧ್ಯರಾತ್ರಿಯಿಂದಲೇ ಭಾರಿ ಮಳೆ ಆರಂಭವಾಗಿದೆ. ಇದುವರೆಗೂ ಭೀಮಾ ಪ್ರವಾಹದಿಂದಾಗಿ ಜಿಲ್ಲೆಯ ಜನತೆ, ರೈತರು ಭಾರಿ ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಗುರುವಾರ ರಾತ್ರಿಯಿಂದಲೇ ಶುರುವಾಗಿರುವ ಮಳೆ ಶುಕ್ರವಾರದಿಂದ ಮತ್ತಷ್ಟೂ ಬಿರುಸುಗೊಂಡಿದ್ದು ನಿರಂತರ ಸುರಿಯುತ್ತಿದೆ. ಇದರಿಂದಾಗಿ ನಗರ ಹಾಗೂ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮುಂದಿನ 3 ದಿನಗಳ ಕಾಲ ಮಳೆ ಹೀಗೇ ಧೋ ಎಂದು ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದಲ್ಲದೆ ಕಲಬುರಗಿ ಜಿಲ್ಲೆಗೆ ಎಲ್ಲೋ ಆಲರ್ಟ್‌ ಘೋಷಣೆ ಮಾಡಿದೆ. ಹೀಗಾಗಿ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರ ಮಳೆ ಕಲಬುರಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಹರಡಿದೆ. ಚಿಂಚೋಳಿ, ಅಫಜಲಪುರ, ಜೇವರ್ಗಿ, ಚಿತ್ತಾಪುರದಲ್ಲಂತೂ ಇನ್ನೂ ಬಿರುಸಿನಿಂದ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾದ್ಯಂತ 24 ಗಂಟೆಗಳಲ್ಲೇ 40 ರಿಂದ 70 ಮಿಮಿ ನಷ್ಟು ಮಳೆ ಸುರಿದಿದೆ.

ಭೀಮಾ ಪ್ರವಾಹ ಯಥಾಸ್ಥಿತಿ

ಭೀಮಾ ನದಿ ಪ್ರವಾಹ ಪೀಡಿತ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ್‌, ಕಲಬುರಗಿಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭೀಮಾನದಿ ನೀರು ಆವರಿಸಿ ಅನೇಕ ಸೇತುವೆಗಳು ಮುಳುಗಿವೆ. ಬೋಟ್‌ಗಳನ್ನು ಬಳಸಿ 2 ದಿನವಾದ ಶುಕ್ರವಾರವೂ ಜನ ಸಂಚಾರ ಸಾಗಿದೆ. ಮೇಲೆ ಮಳೆ ಸುರಿಯುತ್ತಿರುವುದರಿಂದ ಜನ ಈ ದುರವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಣ್ಣೂರಲ್ಲಿರುವ ದಲಿತರ ಕೇರಿ ಸುತ್ತುವರಿದ ಭೀಮಾ ನೀರಿನಿಂದ ಅನೇಕ ತೊಂದರೆ ಎದರಿಸುತ್ತಿದ್ದರೂ ಕಾಯಂ ಪರಿಹಾರ ಕಲ್ಪಿಸುವವರೆಗೆ ಹೊರಗೆ ಬರುವುದಿಲ್ಲವೆಂದು 50 ದಲಿತ ಕುಟುಂಬದವರು ಅಲ್ಲೇ ಉಳಿದಿದ್ದಾರೆ. ಇಡೀ ದಿನ ಮನ ಒಲಿಸಿದರು ಮನೆ ಬಿಟ್ಟು ಕಾಳಜಿ ಕೇಂದ್ರಗಳತ್ತ ಬಾರದೆ ನೀರಿನಿಂದ ಸುತ್ತುವರಿದ ಮನೆಗಳಲ್ಲೇ ವಾಸವಾಗಿದ್ದಾರೆ. ಏತನ್ಮಧ್ಯೆ ಭೀಮಾ ಪ್ರವಾಹದಲ್ಲಿ ಹೆಚ್ಚಳವೂ ಇಲ್ಲ, ಕಮ್ಮಿಯೂ ಇಲ್ಲ ಎಂಬಂತೆ ಯತಾಸ್ಥಿತಿ ಮುಂದುವರಿದಿದೆ. ಹೀಗಾಗಿ ನದಿ ನೀರು ಹೊಲಗದ್ದೆ ಹೊಕ್ಕಿದ್ದು ಹಾಗೆಯೇ ತಟಸ್ಥವಾಗಿ ಉಳಿದುಕೊಂಡಿದೆ. ಇದರಿಂದಾಗಿ ನದಿ ತೀರದ ಸಾವಿರಾರು ಹೆಕ್ಟರ್‌ ರೈತರ ಬೆಳೆ ನಷ್ಟವಾಗಿದೆ.