ಡಿಜಿಪಿ ಕಚೇರಿಗೆ ಸಲ್ಲಿಕೆಯಾದ ವಿಚಿತ್ರ ದೂರುಗಳು, ಧೂಳು ಮುಚ್ಚಲು ಟ್ಯಾಂಕರ್ ಮಳೆ ಸುರಿಸಿದ ಪ್ರಸಂಗ, ಗ್ಯಾಸ್ ಸಮಸ್ಯೆಯಿಂದ ಅರ್ಧ ಇಡ್ಲಿ ನೀಡಿದ ಹೋಟೆಲ್ ಕಥೆ ಹಾಗೂ ಎಣ್ಣೆ ಏಟಿನಲ್ಲಿ ಮಾಜಿ ಸಚಿವರಿಗೆ ಬರುವ ಕರೆಗಳ ಕುರಿತಾದ ಸ್ವಾರಸ್ಯಕರ ಘಟನಾವಳಿಗಳ ಸಂಗ್ರಹವಿದು.

- ಡಿಜಿ ಕಚೇರಿಗೆ ಡಿಜೈನ್‌ ಡಿಜೈನ್‌ ದೂರುಗಳು । ಕೊಪ್ಪಳದಲ್ಲಿ ರಸ್ತೆಯನ್ನಷ್ಟೇ ಒದ್ದೆ ಮಾಡಿದ ವಿಶೇಷ ಮಳೆ । 1 ಪ್ಲೇಟ್‌ ಅಂದರೆ ಒಂದೂವರೆ ಇಡ್ಲಿ ಅಷ್ಟೇ ಕೊಡೋದಾ?

--

ಕಾರ್ಖಾನೆಯ ಮಾರ್ಗವಂತು ಮಳೆ ಸುರಿದಂತೆ ಸಂಪೂರ್ಣ ಒದ್ದೆಯಾಗಿತ್ತು. ಮುಂದೆ ಹೋಗುತ್ತಿದ್ದಂತೆಲ್ಲ ರಸ್ತೆಯಲ್ಲಿ ನೀರೋ ನೀರೋ ಎನ್ನುವಂತಾಗಿತ್ತು. ಬೇರೆಲ್ಲೂ ಸುರಿಯದ ಸ್ಪೆಷಲ್‌ ಮಳೆ ಇಲ್ಲಿ ಮಾತ್ರ ಸುರಿದಿರುವುದು ಅಚ್ಚರಿಗೆ ಕಾರಣವಾಯಿತು. ಅಧ್ಯಕ್ಷರು ತಂಪಾಗಿರಬೇಕು ಎಂಬ ಕಾರಣದಿಂದ ಅವರು ಎಲ್ಲೆಲ್ಲಿ ಸಾಗುತ್ತಾರೆ ಎನ್ನುವ ಮಾಹಿತಿ ಮಳೆರಾಯನಿಗೆ ಇತ್ತೇ ಎನ್ನುವ ಪ್ರಶ್ನೆಯೂ ಬಂದು ಹೋಯಿತು.

ದೂರು-1

‘ನನ್ನ ಮೆದಳು ಕಾಣೆಯಾಗಿದೆ ಸರ್. ನನ್ನ ನರಗಳನ್ನು ಯಾರೋ ಕತ್ತರಿಸಿಕೊಳ್ಳುತ್ತಿರುವ ಭೀತಿ ಇದೆ. ನನ್ನನ್ನು ಕಾಪಾಡಿ’

ದೂರು -2

ನಮ್ಮ ಮನೆ ಕೊಳಾಯಿಯಲ್ಲಿ ಬರುವ ನೀರಿಗೆ ಪಕ್ಕದ ಮನೆಯವರು ವಿಷ ಹಾಕುತ್ತಿದ್ದಾರೆ. ನನ್ನನ್ನು ಕಾಪಾಡಿ...

ದೂರು-3 

ನನ್ನ ಮಮ್ಮಿ ಸೋನಿಯಾ ಗಾಂಧಿ. ನನ್ನ ಡ್ಯಾಡಿ ರಾಜೀವ್‌ ಗಾಂಧಿ. ಅವರನ್ನು ಭೇಟಿ ಮಾಡಿಸಿ !!

ಇಂಥ ದೂರುಗಳು ಬಹುಶಃ ನಿಮ್ಹಾನ್ಸ್‌ನಲ್ಲಿರುವವರಿಂದ ಬರಬಹುದು ಅಂತ ನಿಮಗೆ ಅನಿಸಬಹುದು. ಆದರೆ, ಇದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಸಲ್ಲಿಕೆಯಾದ ದೂರುಗಳು!

ಇತ್ತೀಚೆಗೆ ಡಿಜಿ ಕಚೇರಿಗೆ ಮೂರು ಮಂದಿ ಪ್ರತ್ಯೇಕವಾಗಿ ಆಗಮಿಸಿದ್ದರು. ಮೊದಲಿಗೆ ಬಂದವ ಸೋನಿಯಾ-ರಾಜೀವ್‌ ನನ್ನ ಮಮ್ಮಿ ಡ್ಯಾಡಿ. ಅವರು ನನ್ನನ್ನು ಭೇಟಿಯಾಗುತ್ತಿಲ್ಲ, ಭೇಟಿ ಮಾಡಿಸಿ ಅಂತ ಗಂಟು ಬಿದ್ದ. ಯಾರು ಈ ಸೋನಿಯಾ, ರಾಜೀವ್‌ ಅಂತ ಅಧಿಕಾರಿ ಪ್ರಶ್ನಿಸಿದರೆ, ಅದೇ ಸಾರ್‌... ಸೋನಿಯಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಎಂದು ಬಿಡುವುದೇ!

ಆತನನ್ನು ಸಾಗಹಾಕುವಲ್ಲಿ ಸಾಕಾಗಿಹೋದ ಅಧಿಕಾರಿ ಬಳಿ ನಂತರ ಮಹಿಳೆಯೊಬ್ಬರು ಬಂದರು. ಏನಮ್ಮ ನಿನ್ನ ಸಮಸ್ಯೆ ಅಂದ್ರೆ... ನಮ್ಮ ಮನೆ ಕೊಳಾಯಿಯಲ್ಲಿ ಬರುವ ನೀರಿಗೆ ಪಕ್ಕದ ಮನೆಯವರು ವಿಷ ಹಾಕುತ್ತಿದ್ದಾರೆ. ನನ್ನನ್ನು ಕಾಪಾಡಿ ಎಂದು ಬೇಡಿಕೊಂಡಳು.

ಅದಾದ ಮೇಲೆ ಬಂದಾತ ನನ್ನ ಮಿದುಳು ಕಾಣೆಯಾಗಿದೆ ಸರ್... ನನ್ನ ನರಗಳನ್ನು ಯಾರೋ ಕತ್ತರಿಸಿಕೊಳ್ಳುತ್ತಿರುವ ಭೀತಿ ಇದೆ. ನನ್ನನ್ನು ಕಾಪಾಡಿ ಎಂದು ಬೇಡಿಕೊಂಡ.

ಇದನ್ನು ಕೇಳಿ ತಮ್ಮ ಮಿದುಳು ಇದ್ದಲ್ಲೇ ಇದೆಯೇ ಎಂದು ಪರೀಕ್ಷಿಸಿಕೊಂಡ ಅಧಿಕಾರಿ ಈ ಮೂವರನ್ನೂ ಸಾಗಹಾಕಲು ಹರಸಾಹಸ ಪಟ್ಟರು. ನಮಗೆ ಸಹಾಯ ಮಾಡದೆ ಹೋದರೆ ಪ್ರಾಣ ಕಳೆದುಕೊಳ್ಳುತ್ತೇವೆ ಎಂದು ಅವರಲ್ಲೊಬ್ಬ ಹೇಳಿದಾಗ ಅಧಿಕಾರಿಗೆ ಪೀಕಲಾಟ. ಕೊನೆಗೆ ಸ್ಥಳೀಯ ಪೊಲೀಸರ ಮೂಲಕ ಕ್ರಮ ಜರುಗಿಸುತ್ತೇವೆ ಎಂದಾಗ ದೂರುದಾರರು ತೆರಳಿದ್ದಾರೆ. ಈ ದೂರುಗಳನ್ನು ಸ್ವೀಕರಿಸಿದ ಅಧಿಕಾರಿ, ಕೊನೆಗೆ ನನ್ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಬಿಡಿ ಎಂದು ಮೇಲಾಧಿಕಾರಿಗಳ ಬಳಿ ಗೊಳಾಡುತ್ತಿದ್ದಾರಂತೆ ಎಂಬುದು ನಿಜಕ್ಕೂ ಸುಳ್ಳು ಸುದ್ದಿಯಂತೂ ಅಲ್ಲ.

ಕೊಪ್ಪಳದಲ್ಲಿ ಟ್ಯಾಂಕರ್ ಮಳೆ!

ಹಿಂದೆ ಪವಾಡ ಪುರುಷರು, ಮಹಾ ಮಹಿಮರು ಇದ್ದ ಕಡೆ, ಹೆಜ್ಜೆ ಇಟ್ಟ ಭಾಗದಲ್ಲಿ ಮಳೆ, ಬೆಳೆ ಆಗುತ್ತಿತ್ತಂತೆ ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಕಲಿಯುಗದಲ್ಲಿ ಇಂಥ ಪವಾಡ ಬಹುಶಃ ನೀವು ಕೇಳಿರಲಿಕ್ಕಿಲ್ಲ ಅನಿಸುತ್ತೆ. ನಂಬಲು ಕಷ್ಟ ಆದರೂ ಇಂಥ ಘಟನೆ ಕೊಪ್ಪಳದಲ್ಲಿ ಇತ್ತೀಚೆಗೆ ನಡೆಯಿತು.

ನಡೆದಿದ್ದಿಷ್ಟೇ, ಇತ್ತೀಚೆಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಕೊಪ್ಪಳ ಸಮೀಪದ ಕಾರ್ಖಾನೆ ತ್ಯಾಜ್ಯದ ಅವಾಂತರ ಪರಿಶೀಲನೆ ಮಾಡಲು ಆಗಮಿಸಿದ್ದರು.

ಕಾರ್ಖಾನೆಯ ಮಾರ್ಗವಂತು ಮಳೆ ಸುರಿದಂತೆ ಸಂಪೂರ್ಣ ಒದ್ದೆಯಾಗಿತ್ತು. ಮುಂದೆ ಹೋಗುತ್ತಿದ್ದಂತೆಲ್ಲ ರಸ್ತೆಯಲ್ಲಿ ನೀರೋ ನೀರೋ ಎನ್ನುವಂತಾಗಿತ್ತು. ಬೇರೆಲ್ಲೂ ಸುರಿಯದ ಸ್ಪೆಷಲ್‌ ಮಳೆ ಇಲ್ಲಿ ಮಾತ್ರ ಸುರಿದಿರುವುದು ಅಚ್ಚರಿಗೆ ಕಾರಣವಾಯಿತು. ಅಧ್ಯಕ್ಷರು ತಂಪಾಗಿರಬೇಕು ಎಂಬ ಕಾರಣದಿಂದ ಅವರು ಎಲ್ಲೆಲ್ಲಿ ಸಾಗುತ್ತಾರೆ ಎನ್ನುವ ಮಾಹಿತಿ ಮಳೆರಾಯನಿಗೆ ಇತ್ತೇ ಎನ್ನುವ ಪ್ರಶ್ನೆಯೂ ಬಂದು ಹೋಯಿತು. ತಾವು ಸಾಗುತ್ತಿರುವ ರಸ್ತೆ ಮಾತ್ರ ಮಳೆಯಿಂದ ಒದ್ದೆಯಾಗಿತ್ತು. ಅಕ್ಕಪಕ್ಕದ ಹೊಲದಲ್ಲಿಲ್ಲದ ಮಳೆ ರಸ್ತೆಯಲ್ಲಷ್ಟೇ ಸುರಿದಿದೆ, ಏನಿದು ಚಮತ್ಕಾರ ಎನ್ನುವುದು ನರೇಂದ್ರಸ್ವಾಮಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೂ ಯಕ್ಷಪ್ರಶ್ನೆಯಾಗಿ ಕಾಡಿತು.

ಕಾರಿನಿಂದ ಇಳಿಯುತ್ತಿದ್ದಂತೆ ಸೇರಿದ್ದ ಜನ ನೀವು ಸಾಗುವ ಹಾದಿಯಲ್ಲಿ ನೋಡಿದರಲ್ಲ, ಹೇಗೆ ನೀರು ಸುರಿದಿದ್ದಾರೆ ನೋಡಿ, ಧೂಳು ಗೊತ್ತಾಗಬಾರದು ಅಂತ ದಾರಿಯುದ್ದಕ್ಕೂ ಟ್ಯಾಂಕರ್ ಮೂಲಕ ಮಳೆ ಬಂದಂತೆ ನೀರು ಸುರಿದಿದ್ದಾರೆ ಎಂದು ಹೇಳಿದಾಗಲೇ ಗೊತ್ತಾಗಿದ್ದು, ಇದು ಕಾರ್ಖಾನೆಯವರು ಧೂಳು ಮುಚ್ಚಲು ಸುರಿಸಿದ ಮಳೆ ಅಂತ. ವಿಷಯ ಗೊತ್ತಾಗುತ್ತಿದ್ದಂತೆ ಜನಪ್ರತಿನಿಧಿಗಳು ಬಾಯ್ಮುಚ್ಚಿಕೊಂಡು ನಕ್ಕರೇ ವಿನಃ ಬಾಯ್ಬಿಟ್ಟು ನಗಲಿಲ್ಲ.

--------

ಗ್ಯಾಸ್‌ ಪ್ರಾಬ್ಲಮ್ಮೂ ಒಂದೂವರೆ ಇಡ್ಲಿಯೂ...!

ಅಮೆರಿಕ ಇಸ್ರೇಲ್‌ ಜೊತೆ ಸೇರಿ ಇರಾನ್‌ ಮೇಲೆ ಯುದ್ಧ ಶುರು ಮಾಡಿದ ನಂತರ ಅದರ ‘ಬಿಸಿ’ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಮಾತ್ರವಲ್ಲದೆ ಭಾರತವೂ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ತಟ್ಟಿದೆ. ಪ್ರಮುಖವಾಗಿ ಅಡುಗೆ ಅನಿಲ ಹಾಗೂ ತೈಲೋತ್ಪನ್ನಗಳ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಎಷ್ಟೋ ಹೋಟೆಲ್‌ಗಳಿಗೆ ‘ಗ್ಯಾಸ್‌'' ಪೂರೈಕೆಯಾಗದೇ ಬಂದ್‌ ಆಗಿವೆ. ಕೆಲವೆಡೆ ‘ಐಟಂ’ ಗಳನ್ನು ಕಡಿಮೆ ಮಾಡಲಾಗಿದೆ. ಕೆಲವರು ‘ಸೌದೆ’ ಒಲೆಗೆ ಮರಳಿದ್ದಾರೆ.

ಹೀಗಿರುವಾಗ ಮೈಸೂರಿನ ಹೋಟೆಲ್‌ವೊಂದರಲ್ಲಿ ಗ್ರಾಹಕರೊಬ್ಬರು ಒಂದು ಪ್ಲೇಟ್‌ ಇಡ್ಲಿ-ಸಾಂಬಾರ್‌ ಆರ್ಡರ್‌ ಮಾಡಿದರು. ಸಾಮಾನ್ಯವಾಗಿ ಒಂದು ಪ್ಲೇಟ್‌ ಅಂದರೆ ಎರಡು ಇಡ್ಲಿ ಕೊಡಲಾಗುತ್ತದೆ. ಆದರೆ ಆ ಗ್ರಾಹಕನಿಗೆ ಪೂರೈಸಿದ ಪ್ಲೇಟ್‌ನಲ್ಲಿ ಒಂದೂವರೆ ಇಡ್ಲಿ ಮಾತ್ರ ಇತ್ತು! ಇದನ್ನು ಗಮನಿಸಿದ ಅವರು ಸಪ್ಲೈಯರ್‌ ಅನ್ನು ಕರೆದು ‘ಗ್ಯಾಸ್‌ ಪ್ರಾಬ್ಲಂ ಅಂತ ಎರಡು ಇಡ್ಲಿ ಬದಲು ಒಂದೂವರೆ ಇಡ್ಲಿ ಕೊಟ್ಟಿದ್ದೀರಾ?’ ಎಂದು ಪ್ಲೇಟಿನಲ್ಲಿರುವ ಒಂದೂವರೆ ಇಡ್ಲಿ ತೋರಿಸಿ, ತರಾಟೆಗೆ ತೆಗೆದುಕೊಂಡರು.

ಆಗ ಸಪ್ಲೈಯರ್‌ ‘ನೋಡ್ಲಿಲ್ಲ, ಸ್ಸಾರಿ’ ಎಂದೇಳಿ ಇನ್ನೊಂದು ಇಡ್ಲಿ ತಂದು ಪ್ಲೇಟಿಗೆ ಹಾಕಿದರು!. ಇದರಿಂದ ಅರ್ಧ ಇಡ್ಲಿ ಹೋಟೆಲ್‌ನವರಿಗೆ ಉಳಿತಾಯವಾಗುವ ಬದಲು ಗ್ರಾಹಕನಿಗೆ ಲಾಭವಾಯಿತು.!

ಇನ್ನು ಮುಂದೆ ಇಡ್ಲಿ-ಸಾಂಬಾರ್‌ ಆರ್ಡರ್‌ ಮಾಡಿದರೆ ಅದರಲ್ಲೂ ‘ಡಿಪ್‌’ ಮಾಡಿದ್ದರೆ ಎರಡು ಇಡ್ಲಿ ಇದೆಯೇ? ಎಂದು ‘ಡೀಪ್‌ ಆಗಿ ನೋಡಬೇಕು’ ಎಂದು ಆ ಗ್ರಾಹಕ ಹೇಳಿದಾಗ ಅಕ್ಕಪಕ್ಕದಲ್ಲಿದ್ದವರು ನಸುನಕ್ಕರು!.

ಎಣ್ಣೆ ಏಟಿನಲ್ಲಿ ಮಾಜಿ ಸಚಿವರಿಗೆ ಕಾಲ್ ಮಾಡೋರು ಯಾರು?

ಕಾರವಾರದಲ್ಲಿ ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ತಮ್ಮ ನಿವಾಸದಲ್ಲಿ ಅಪರೂಪಕ್ಕೆ ಪಕ್ಷದ ಮುಖಂಡರ ಸಭೆ ಕರೆದು ಮಾತನಾಡಲು ತೊಡಗಿದರು.

ನಾನಿನ್ನೂ ಪಕ್ಷದ ಕೆಲಸಗಳಿಂದ, ಸಂಘಟನೆಯಿಂದ ವಿಮುಖನಾಗಿಲ್ಲ. ಕ್ಷೇತ್ರದ ಜನತೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇನೆ. ಜನರು ಹಗಲು ರಾತ್ರಿ ಕಾಲ್ ಮಾಡಿದರೂ ಮಾತನಾಡುತ್ತೇನೆ. ಕೆಲವರು ಸ್ವಲ್ಪ ಹಾಕ್ಕೊಂಡು ಕಾಲ್ ಮಾಡ್ತಾರೆ. ಆದರೆ ಬೇಜಾರಿಲ್ಲ. ಅವರದ್ದೂ ಕಾಲ್ ರಿಸೀವ್ ಮಾಡಿ ಮಾತನಾಡ್ತೇನೆ. ಏನು ಮಾಡೋಕಾಗುತ್ತೆ ಎಂದಾಗ ಸಭೆಯಲ್ಲಿದ್ದವರಿಗೆ ಆಶ್ಚರ್ಯ.

ಎಣ್ಣೆ ಹಾಕ್ಕೊಂಡು ಮಾಜಿ ಸಚಿವರ ಜತೆ ಮಾತನಾಡುವವರಿಗೆ ಎಷ್ಟು ಧೈರ್ಯ ಇರಬೇಕು? ಅಲ್ಲ, ಎಣ್ಣೆ ಹಾಕ್ಕೊಂಡು ಮಾತನಾಡಿದರೂ ನಡೆಯುತ್ತೆ ಎಂಬ ಉಡಾಫೆಯೇ? ಎಂಬ ಗುಸುಗುಸು ಮಾತು ಕೇಳಿಬಂತು.

ರಾಜಕಾರಣದಲ್ಲಿ ಇದ್ದವರು, ಜನಸೇವಕರು ಇದನ್ನೆಲ್ಲ ಸಹಿಸಿಕೊಂಡರಷ್ಟೆ ಉಳಿಗಾಲ ಎಂದೂ ಪ್ರಮುಖರೊಬ್ಬರು ಹೇಳಿದರು. ಈಗ ಮಾಜಿ ಸಚಿವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಕಾಲ್ ಮಾಡುವವರು ಹಾಕಿದ್ದು ಗೋವಾ ಎಣ್ಣೆಯೇ ಇಲ್ಲವೇ ನಮ್ಮ ರಾಜ್ಯದ ಎಣ್ಣೆಯೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

--------

-ಗಿರೀಶ್ ಮಾದೇನಹಳ್ಳಿ

-ಸೋಮರಡ್ಡಿ ಅಳವಂಡಿ

-ಅಂಶಿ ಪ್ರಸನ್ನಕುಮಾರ್‌

-ವಸಂತಕುಮಾರ್ ಕತಗಾಲ