ಮಾದಕ ವಸ್ತುಗಳ ದುಷ್ಚಟಕ್ಕೆ ಮಕ್ಕಳು ಒಳಗಾಗುವುದನ್ನು ತಡೆಯಲು ವಿವಿಧ ಇಲಾಖೆಗಳನ್ನು ಒಳಗೊಂಡ ಮೇಲ್ವಿಚಾರಣ ತಂಡ ರಚಿಸಬೇಕೆಂದು ಕಾಂಗ್ರೆಸ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಆಗ್ರಹಿಸಿದರು.

ವಿಧಾನ ಪರಿಷತ್‌ : ಮಾದಕ ವಸ್ತುಗಳ ದುಷ್ಚಟಕ್ಕೆ ಮಕ್ಕಳು ಒಳಗಾಗುವುದನ್ನು ತಡೆಯಲು ವಿವಿಧ ಇಲಾಖೆಗಳನ್ನು ಒಳಗೊಂಡ ಮೇಲ್ವಿಚಾರಣ ತಂಡ ರಚಿಸಬೇಕೆಂದು ಕಾಂಗ್ರೆಸ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಆಗ್ರಹಿಸಿದರು.

11 ವರ್ಷದ ಮಕ್ಕಳು ಡ್ರಗ್ಸ್‌ ಚಟಕ್ಕೆ ಒಳಗಾಗುತ್ತಿರುವ ಸಂಶೋಧನಾ ವರದಿ

‘ಕನ್ನಡಪ್ರಭ’ ಪತ್ರಿಕೆಯ ಗುರುವಾರ ಸಂಚಿಕೆಯಲ್ಲಿ 11 ವರ್ಷದ ಮಕ್ಕಳು ಡ್ರಗ್ಸ್‌ ಚಟಕ್ಕೆ ಒಳಗಾಗುತ್ತಿರುವ ಕುರಿತಂತೆ ಸಂಶೋಧನಾ ವರದಿ ಉಲ್ಲೇಖಿಸಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಅವರು, ‘ಡ್ರಗ್ಸ್‌ ದಂಧೆಯಲ್ಲಿ ಮಹಿಳೆಯರೂ ಶಾಮೀಲಾಗುತ್ತಿದ್ದು, ಪೊಲೀಸ್‌ ಕಾರ್ಯಾಚರಣೆ ವೇಳೆ ಸಾಕಷ್ಟು ವಿದೇಶಿ, ರಾಜ್ಯ ಹಾಗೂ ಹೊರ ರಾಜ್ಯದ ಮಹಿಳೆಯರು ಸಿಕ್ಕಿ ಬೀಳುತ್ತಿದ್ದಾರೆ. ಈ ಮಹಿಳೆಯರು ಒಂದು ರೀತಿಯಲ್ಲಿ ಕೊರಿಯರ್‌ ರೀತಿಯಲ್ಲಿ ಬಳಕೆಯಾಗುತ್ತಿದ್ದಾರೆ. ಸುಮಾರು 300 ವಿದೇಶಿ ಮಹಿಳೆಯರನ್ನು ಗಡಿಪಾರು ಮಾಡಿದ್ದರೂ ನಿರಂತರವಾಗಿ ಮಹಿಳೆಯರು ಈ ದಂಧೆಯಲ್ಲಿ ತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ’ ಎಂದರು.

ದುಶ್ಚಟಕ್ಕೆ ಒಳಗಾಗುವುದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯ

ಸಂಶೋಧನಾ ವರದಿಯಲ್ಲಿ ಶೇ.15ರಷ್ಟು ವಿದ್ಯಾರ್ಥಿಗಳು ಜೀವನಮಾನದಲ್ಲಿ ಒಮ್ಮೆಯಾದರೂ ಡ್ರಗ್ಸ್‌ ಸೇವಿಸಿರುವುದು ಸಾಬೀತಾಗಿರುವುದು ದುರಂತವೇ ಸರಿ. ಸಮಾಜದಲ್ಲಿ ಮಕ್ಕಳು ಮಾದಕ ವ್ಯಸನಿಗಳಾಗಲು ಮನೆಯವರು ಮತ್ತು ಗೆಳೆಯರೇ ಕಾರಣ ಎಂಬುದು ಉಲ್ಲೇಖವಾಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗೃಹ ಇಲಾಖೆಯನ್ನು ಒಳಗೊಂಡ ಮೇಲ್ವಿಚಾರಣ ತಂಡ ರಚಿಸಿ, ಮಕ್ಕಳು ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗುವುದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

- ಡ್ರಗ್ಸ್‌ ದಂಧೆ ಹಾಗೂ ಪೂರೈಕೆಯಲ್ಲಿ ಮಹಿಳೆಯರ ಶಾಮೀಲು ಆತಂಕಕಾರಿ

- ಶಿಕ್ಷಣ, ಮಕ್ಕಳ ಕಲ್ಯಾಣ, ಗೃಹ ಇಲಾಖೆ ಜಂಟಿ ತಂಡ ರಚಿಸಿ ನಿಗಾ ಇಡಿ

- ಶಾಲಾ, ಕಾಲೇಜಿನ ಮಕ್ಕಳನ್ನು ಡ್ರಗ್ಸ್‌ ದುಶ್ಚಟದಿಂದ ಈ ಮೂಲಕ ಕಾಪಾಡಿ

- ‘ಕನ್ನಡಪ್ರಭ’ದ ಡ್ರಗ್ಸ್‌ ವರದಿ ಉಲ್ಲೇಖಿಸಿದ ತಿಪ್ಪಣ್ಣಪ್ಪ ಕಮಕನೂರು ಆಗ್ರಹ