ಸುವರ್ಣ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆ ವೇಳೆ, ಬಿಜೆಪಿ ಶಾಸಕ ಅಭಯ್ ಪಾಟೀಲ್ 'ಒಂದು-ಎರಡು ಬಾಳೆಲೆ ಹರಡು' ಹಾಡನ್ನು ಕಾಂಗ್ರೆಸ್ ಸರ್ಕಾರಕ್ಕೆ ಅನ್ವಯಿಸಿ ಹಾಡಿನ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತ ಮತ್ತು ಬಣ ರಾಜಕೀಯವನ್ನು ವ್ಯಂಗ್ಯವಾಡಿ ಸರ್ಕಾರದ ಕಾಲೆಳೆದರು.
ಸುವರ್ಣ ವಿಧಾನಸಭೆ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ತಮ್ಮ ಭಾಷಣದ ಕೊನೆಯಲ್ಲಿ ಒಂದು, ಎರಡು ಬಾಳೆಲೆ ಹರಡು... ಹಾಡನ್ನು ಕಾಂಗ್ರೆಸ್ ಸರ್ಕಾರಕ್ಕೆ ಅನ್ವಯಿಸಿಕೊಂಡು ಹಾಡಿ ಸರ್ಕಾರದ ಕಾಲೆಳೆದ ಪ್ರಸಂಗ ಜರುಗಿತು.
‘ಒಂದು-ಎರಡು ಬಣಗಳು ಎರಡು, ಮೂರು-ನಾಲ್ಕು ಲೆಕ್ಕ ಹಾಕು, ಐದು-ಆರು ಡಿನ್ನರ್ ಜೋರು, ಏಳು-ಎಂಟು ಯಾರ ಕಡೆಗೆ ನಂಟು, ಒಂಬತ್ತು-ಹತ್ತು ದೆಹಲಿಗೆ ಹತ್ತು, ಒಂದರಿಂದ ಹತ್ತು ಭಿನ್ನಮತ ಹೀಗಿತ್ತು. ಹೈಕಮಾಂಡ್ ತಲೆ ಕೆಡಿಸಿತ್ತು. ಕರ್ನಾಟಕ ಕಾಂಗ್ರೆಸ್ ಹಾಳಗೆಡವಿತ್ತು...’ ಎಂದು ಹಾಡನ್ನು ಹಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಆಂತರಿಕ ಬೆಳವಣಿಗೆಗಳ ಕುರಿತು ವ್ಯಂಗ್ಯವಾಡಿದರು.
- ಒಂದು-ಎರಡು ಬಣಗಳೆರಡು । ಐದು-ಆರು ಡಿನ್ನರ್ ಜೋರು । ಹಾಡಿನ ಮೂಲಕ ಸರ್ಕಾರಕ್ಕೆ ವ್ಯಂಗ್ಯ
ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಶಾಸಕ ಅಭಯ್ ಪಾಟೀಲ್, ಹೆಚ್ಚಿನ ಅನುದಾನಕ್ಕೆ ಆಗ್ರಹಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ನಾವು ಚಿಕ್ಕವರಾಗಿದ್ದಾಗ ನಮ್ಮ ಶಾಲೆಯಲ್ಲಿ ಒಂದು ಹಾಡು ಹೇಳಿ ಕೊಡುತ್ತಿದ್ದರು ಎಂದು ಒಂದು-ಎರಡು ಬಾಳೆಲೆ ಹರಡು ಹಾಡನ್ನು ಹಾಡಿದರು.


