ಬೆಳಗಾವಿ, ಮಂಡ್ಯ ಮತ್ತು ಶಿವಮೊಗ್ಗದಲ್ಲಿ ಸಾಲಬಾಧೆ ತಾಳಲಾರದೆ ರೈತರು ಮತ್ತು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಗ್ಯಾರಂಟಿಗಳ ನಡುವೆ ರೈತರು ಮತ್ತು ನೇಕಾರರ ಸಂಕಷ್ಟ ಹೆಚ್ಚುತ್ತಿದೆ.
ಬೆಳಗಾವಿ/ಮಂಡ್ಯ/ಶಿವಮೊಗ್ಗ: ಒಂದೆಡೆ ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಜ್ಯದ ರೈತರು ಹಾಗೂ ನೇಕಾರರ ಸಂಕಷ್ಟ ಹೇಳತೀರದಾಗಿದೆ. ಹತ್ಯೆಗಳ ಮೇಲಿನ ರಾಜಕಾರಣ, ಸಮಾವೇಶ ಹಾಗೂ ರಾಜಕೀಯ ಹೇಳಿಕೆಗಳಲ್ಲೇ ರಾಜ್ಯದ ರಾಜಕಾರಣಿಗಳು ಬ್ಯುಸಿಯಾಗಿದ್ದರೆ, ಇನ್ನೊಂದೆಡೆಸ ದಿನಕ್ಕೆ ಒಂದರಂತೆ ರೈತರು, ನೇಕಾರರು ಸಾವು ಕಾಣುತ್ತಿದ್ದಾರೆ.
ಇಂದು ಬೆಳಗಾವಿಯಲ್ಲಿ ಸಾಲಬಾಧೆ ತಾಳಲಾರದೆ ನೇಕಾರನೊಬ್ಬ ತನ್ನ ಇಷ್ಟು ವರ್ಷ ಕೆಲಸ ಮಾಡುತ್ತಿದ್ದ ಮಗ್ಗದ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಘಟನೆ ನಡೆದಿದೆ. 53 ವರ್ಷದ ನೇಕಾರ ರಮೇಶ ಮರಿಜಾಡರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಉದ್ಯಮ ನಡೆಸುವ ನಿಟ್ಟಿನಲ್ಲಿ ರಮೇಶ್ ಹಲವು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡಲು ನೇಕಾರ ಸಂಘದ ಒತ್ತಾಯ ಮಾಡಿದೆ.
ಇದೇ ರೀತಿಯ ಘಟನೆಯಲ್ಲಿ ಬುಧವಾರ ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮರಟಿಕೊಪ್ಪಲು ಗ್ರಾಮದ ರೈತ 45 ವರ್ಷದ ಮಂಜೇಗೌಡ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಂಡ್ಯದ ಕೆ.ಆರ್.ಪೇಟೆ ತಾ. ಸಾಧುಗೋನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.
ವಿವಿಧ ಬ್ಯಾಂಕಿನಲ್ಲಿ ಸಾಲ, ಖಾಸಗಿ ವ್ಯಕ್ತಿಗಳಿಂದಲೂ 5 ಲಕ್ಷದವರೆಗೂ ಕೈ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸಾಲದ ಸುಳಿಯಿಂದಾಗಿ ಮನನೊಂದು ನೇಣಿಗೆ ಶರಣಾಇದ್ದ. ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಾಲ ಬಾಧೆಯಿಂದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ: ಕಳೆದ ಭಾನುವಾರ ಸಾಲಬಾಧೆಯಿಂದ ಮನನೊಂದು ರೈತನೋರ್ವ ಕಳೆನಾಶಕ ಸೇವಿಸಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ನಡೆದಿತ್ತು.
ಹರತಾಳು ಗ್ರಾಮದ ಮಂಜಪ್ಪ ಮೃತಪಟ್ಟ ರೈತ. ಕೃಷಿ ಕೆಲಸಕ್ಕಾಗಿ ಹರತಾಳು ಕೃಷಿ ಪತ್ತಿನ ಸಹಕಾರ ಸಂಘದಿಂದ 1.90 ಲಕ್ಷ ರೂ. ಹಾಗೂ ಕೃಷಿ ಕಾರ್ಯಕ್ಕಾಗಿ ಶಿವಮೊಗ್ಗದ ಅದಾನಿ ಫೈನಾನ್ಸ್ ನಲ್ಲಿ 7 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಸರಿಯಾದ ಬೆಳೆ ಬಾರದೇ ಸಾಲ ಕಟ್ಟಲು ಆಗದೇ ಬೇಸತ್ತಿದ್ದರು.
ಭಾನುವಾರ ಬೆಳಗ್ಗೆ 6 ಗಂಟೆಗೆ ಮನೆ ಪಕ್ಕದಲ್ಲಿರುವ ತನ್ನ ಹಳೆ ಮನೆಯಲ್ಲಿ ಕಳೆನಾಶಕ ಸೇವಿಸಿದ್ದಾರೆ. ಕೂಡಲೇ ಅವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಮಂಜಪ್ಪ ಮೃತಪಟ್ಟಿದ್ದರು.


