ಗುತ್ತಿಗೆದಾರರ ಪ್ರತಿಭಟನೆಯ ನಂತರ, ರಾಜ್ಯ ಸರ್ಕಾರವು ಸಣ್ಣ ಮತ್ತು ಮಧ್ಯಮ ಕಾಮಗಾರಿಗಳ ಬಾಕಿ ಬಿಲ್ ಪಾವತಿಗಾಗಿ 300 ಕೋಟಿ ರು. ಬಿಡುಗಡೆ ಮಾಡಿದೆ. ಹಂತಹಂತವಾಗಿ ಹಣ ಬಿಡುಗಡೆ ಮಾಡುವ ಭರವಸೆಯಂತೆ ಈ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿಗಳೊಂದಿಗಿನ ಸಭೆ ಇನ್ನೂ ಬಾಕಿ ಇದೆ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ.

- ಬೆಂಗಳೂರು (ಏ.19): ಗುತ್ತಿಗೆದಾರರ ಹೋರಾಟದ ನಂತರದಿಂದ ಬಾಕಿ ಬಿಲ್‌ ಪಾವತಿಗೆ ಮುಂದಾಗುತ್ತಿರುವ ರಾಜ್ಯ ಸರ್ಕಾರ, ಮಾರ್ಚ್‌ನಲ್ಲಿ 2 ಸಾವಿರ ಕೋಟಿ ರು. ಪಾವತಿ ನಂತರ ಇದೀಗ ಸಣ್ಣ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಗೆ 300 ಕೋಟಿ ರು. ಬಿಡುಗಡೆ ಮಾಡಿದೆ.

ಬಾಕಿ ಬಿಲ್‌ ಪಾವತಿಸುವಂತೆ ಆಗ್ರಹಿಸಿ ಕಳೆದ ತಿಂಗಳು ರಾಜ್ಯ ಗುತ್ತಿಗೆದಾರರ ಸಂಘದಿಂದ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಅದಾದ ನಂತರ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಂತಹಂತವಾಗಿ ಬಾಕಿ ಬಿಲ್‌ ಪಾವತಿಸುವುದಾಗಿ ತಿಳಿಸಿದ್ದರು. ಅದರಂತೆ ಮಾರ್ಚ್‌ ತಿಂಗಳಲ್ಲಿ 2 ಸಾವಿರ ಕೋಟಿ ರು. ಅನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ರಸ್ತೆ ಗುಂಡಿ ದುರಸ್ತಿ, ಕಟ್ಟಡಗಳು, ಸೇತುವೆ ದುರಸ್ತಿ ಸೇರಿ ಮತ್ತಿತರ ಸಣ್ಣ ಮತ್ತು ಮಧ್ಯಮ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಗಾಗಿ ಲೋಕೋಪಯೋಗಿ ಇಲಾಖೆಯಿಂದ 300 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅದರಲ್ಲಿ, ಅಂದಾಜು 4 ಸಾವಿರ ಗುತ್ತಿಗೆದಾರರಿಗೆ 10 ಲಕ್ಷ ರು.ಗಿಂತ ಕಡಿಮೆ ಮೊತ್ತದ ಬಾಕಿ ಬಿಲ್‌ಗಳನ್ನು ಪಾವತಿಸಲಾಗುತ್ತದೆ.

ಸಿಎಂ ಜತೆ ಸಭೆ ಭರವಸೆ ಈಡೇರಿಲ್ಲ:

ಲೋಕೋಪಯೋಗಿ ಇಲಾಖೆ ಹಣ ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌, ಈ ಹಿಂದೆ ನಡೆಸಿದ ಪ್ರತಿಭಟನೆಯಿಂದಾಗಿ ಬಾಕಿ ಬಿಲ್‌ ಪಾವತಿಗೆ ಸರ್ಕಾರ 2 ಸಾವಿರ ಕೋಟಿ ರು. ಬಿಡುಗಡೆ ಮಾಡಿತ್ತು. ಇದೀಗ 300 ಕೋಟಿ ರು. ಬಿಡುಗಡೆ ಮಾಡಿ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಸಲು ಸೂಚಿಸಲಾಗಿದೆ. ಸರ್ಕಾರ ಕೊಟ್ಟ ಮಾತಿನಂತೆ ಹಂತಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಇನ್ನು, ಹಿಂದೆ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ ಅವರೊಂದಿಗೆ ನಮ್ಮನ್ನೂ ಕರೆಸಿ ಸಭೆ ಮಾಡಿಸುವುದಾಗಿ ಭರವಸೆ ನೀಡಲಾಗಿತ್ತು. ಈವರೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಿಲ್ಲ. ಶೀಘ್ರ ಮುಖ್ಯಮಂತ್ರಿ ಅವರು ನಮ್ಮನ್ನು ಕರೆದು ಸಭೆ ಮಾಡಿ ಸಮಸ್ಯೆ ಆಲಿಸಬೇಕು ಹಾಗೂ ಅದಕ್ಕೆ ಪರಿಹಾರ ನೀಡಬೇಕು ಎಂದರು.