ಕರ್ನಾಟಕ ಸರ್ಕಾರದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಫರ್ ಝೋನ್ ವಿಸ್ತೀರ್ಣ, ಸಾರ್ವಜನಿಕ ಸಮಾಲೋಚನೆ ಕೊರತೆ ಹಾಗೂ ಟೌನ್‌ಹಾಲ್ ಅಸೋಸಿಯೇಷನ್‌ನ ಆಕ್ಷೇಪಣೆಗಳನ್ನು ಪರಿಗಣಿಸಿ ರಾಜ್ಯಪಾಲರು ಸ್ಪಷ್ಟನೆ ಕೋರಿದ್ದಾರೆ.
ಬೆಂಗಳೂರು: ಕರ್ನಾಟಕ ಸರ್ಕಾರವು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 2014ರ ಸೆಕ್ಷನ್ 12ಕ್ಕೆ ತಿದ್ದುಪಡಿ ತರಲು ಮುಂದಾಗಿದ್ದರೂ, ರಾಜ್ಯಪಾಲರು ಆ ವಿಧೇಯಕವನ್ನು ಸ್ಪಷ್ಟನೆಗಳ ಕೊರತೆಯಿಂದಾಗಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಪ್ರಸ್ತುತ ವಿಧೇಯಕದಲ್ಲಿ ಕೆರೆಗಳ ವಿಸ್ತೀರ್ಣವನ್ನು ಅವಲಂಬಿಸಿ ಬಫರ್ ಝೋನ್ ನಿಗದಿ ಮಾಡುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ತಜ್ಞರ ಅಭಿಪ್ರಾಯದ ಪ್ರಕಾರ, ಪ್ರಸ್ತುತ ಜಾರಿಗೆ ಇರುವ 30 ಮೀಟರ್ ಬಫರ್ ಝೋನ್ ಸಾಕಾಗುವುದಿಲ್ಲ. ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಲು ಕನಿಷ್ಠ 300 ಮೀಟರ್ ಬಫರ್ ಝೋನ್ ಅಗತ್ಯವಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಮಾಲೋಚನೆ ಮಾಡಿಲ್ಲ
ವಿಧೇಯಕದ ತಿದ್ದುಪಡಿ ಪ್ರಸ್ತಾಪಿಸುವ ಮೊದಲು ತಜ್ಞರ ಸಮಿತಿಯೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸದಿರುವುದು ಪ್ರಮುಖ ಆಕ್ಷೇಪಾರ್ಹ ಅಂಶವಾಗಿದೆ. ಪರಿಸರ ಹಾಗೂ ನೀರಿನ ಮೂಲಗಳನ್ನು ನೇರವಾಗಿ ಪ್ರಭಾವಿಸುವಂತಹ ನಿರ್ಧಾರ ತೆಗೆದುಕೊಳ್ಳುವಾಗ ಜನರ ಅಭಿಪ್ರಾಯ ಕಡ್ಡಾಯವಾಗಿರಬೇಕೆಂದು ತಜ್ಞರು ಒತ್ತಾಯಿಸಿದ್ದಾರೆ.
ಟೌನ್‌ಹಾಲ್ ಅಸೋಸಿಯೇಷನ್‌ನ ಆಕ್ಷೇಪ
ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್ ರಾಜ್ಯಪಾಲರಿಗೆ ಸಲ್ಲಿಸಿದ ಆಕ್ಷೇಪಣೆಯಲ್ಲಿ, ಈ ತಿದ್ದುಪಡಿ ಸಂವಿಧಾನದ ಮೂಲಭೂತ ತತ್ವಗಳನ್ನೂ ಈಗಾಗಲೇ ಜಾರಿಯಲ್ಲಿರುವ ಕಾನೂನನ್ನೂ ಉಲ್ಲಂಘಿಸುತ್ತದೆ ಎಂದು ತಿಳಿಸಲಾಗಿದೆ. ಜೊತೆಗೆ, ಈ ಬದಲಾವಣೆ ಪ್ರತಿಯೊಬ್ಬ ನಾಗರಿಕರಿಗೂ ಹಾನಿಕಾರಕವಾಗಿದ್ದು, ನೀರಿನ ಸುರಕ್ಷತೆ ಮತ್ತು ಆರೋಗ್ಯಕರ ಪರಿಸರದ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ರಾಜ್ಯಪಾಲರ ಸೂಚನೆ
ಈ ಎಲ್ಲಾ ಆಕ್ಷೇಪಣೆಗಳನ್ನು ಪರಿಗಣಿಸಿ ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ನೀಡದೇ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಜೊತೆಗೆ, ಟೌನ್‌ಹಾಲ್ ಅಸೋಸಿಯೇಷನ್ ಎತ್ತಿರುವ ಪ್ರಶ್ನೆಗಳು ಹಾಗೂ ತಜ್ಞರ ಅಭಿಪ್ರಾಯಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡುವುದು ಅಗತ್ಯವೆಂದು ತಿಳಿಸಿದ್ದಾರೆ.
“ಈ ತಿದ್ದುಪಡಿಯ ಪರಿಣಾಮಗಳು ನಿಜವಾಗಿಯೂ ಪರಿಸರ ಮತ್ತು ಸಮಾಜಕ್ಕೆ ಪ್ರತಿಕೂಲವಾಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ವಿವರಿಸುವುದು ಸರ್ಕಾರದ ಕರ್ತವ್ಯ. ಸರಿಯಾದ ಸಮಾಲೋಚನೆ ನಡೆಸಿ, ಅಗತ್ಯವಾದ ವಿವರಣೆಗಳೊಂದಿಗೆ ಮರುಸಲ್ಲಿಕೆ ಮಾಡಬೇಕು” ಎಂದು ರಾಜ್ಯಪಾಲರು ಸೂಚಿಸಿದ್ದಾರೆ.
ಏನಿದು ವಿಧೇಯಕ..? ಆಕ್ಷೇಪ ಯಾಕೆ..?
- ಕೆರೆಗಳ ಬಫರ್ ಝೋನ್ 30 ಮೀಟರ್ ನಿಗದಿ ಮಾಡಲಾಗಿದೆ
- ಈ ಕಾಯ್ದೆಯಲ್ಲಿ ಇದೀಗ ಕೆರೆಗಳಿಗೆ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸಲಾಗುತ್ತಿದೆ.
- 5 ಗುಂಟೆವರೆಗೆ ಕರೆಗಳಿಗೆ 0 ಮೀಟರ್
- 5 ಗುಂಟೆಯಿಂದ 1 ಎಕರೆಯವರೆಗೆ - 3 ಮೀಟರ್
- 1-10 ಎಕರೆಯವರೆಗೆ - 6 ಮೀಟರ್
- 10-25 ಎಕರೆಯವರೆಗೆ - 12 ಮೀಟರ್
- 25 -100 ಎಕರೆಯವರೆಗೆ - 24 ಮೀಟರ್
- 100 ಎಕರೆಗಿಂತ ದೊಡ್ಡದಾದ ಕೆರೆಗಳಿಗೆ - 30 ಮೀಟರ್
ಹೀಗೆ ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ವಲಯ ನಿಗದಿ ಮಾಡಲಾಗಿದೆ. ಬಫರ್ ಝೋನ್‌ಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಪಡಿಸಲು ಅವಕಾಶ ಕಲ್ಪಿಸಲು ತಿದ್ದುಪಡಿ ಮಾಡಲಾಗಿತ್ತು.


