ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳನ್ನು ಬಳಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲೇ ಪಪ್ಪಿ ಬರೋಬ್ಬರಿ 2000 ಕೋಟಿ ರು. ಹಣವನ್ನು ಗಳಿಸಿದ್ದರು ಎಂದು ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.

ಬೆಂಗಳೂರು/ ನವದೆಹಲಿ (ಸೆ.04): ಅಕ್ರಮವಾಗಿ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳನ್ನು ನಡೆಸುತ್ತಿದ್ದ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ಇ.ಡಿ. ಸ್ಫೋಟಕ ಆರೋಪ ಮಾಡಿದೆ. ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳನ್ನು ಬಳಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲೇ ಪಪ್ಪಿ ಬರೋಬ್ಬರಿ 2000 ಕೋಟಿ ರು. ಹಣವನ್ನು ಗಳಿಸಿದ್ದರು ಎಂದು ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.

ಆನ್‌ಲೈನ್‌ ಬೆಟ್ಟಿಂಗ್‌ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಾಸಕ ವೀರೇಂದ್ರ ಹಾಗೂ ಅವರ ದುಬೈನಲ್ಲಿನ ಸಹಚರರು, ಅಕ್ರಮ ವಿಧಾನದಲ್ಲಿ ತಾವು ಗಳಿಸಿದ ಹಣವು ಇ-ಕಾಮರ್ಸ್‌ ಉದ್ದಿಮೆಯಿಂದ ಗಳಿಸಿದ ನೈಜ ಆದಾಯ ಎಂದು ತೋರಿಸಿಕೊಳ್ಳಲು ಹಲವಾರು ಗೇಟ್‌ವೇಗಳು ಹಾಗೂ ಫಿನ್‌ಟೆಕ್‌ ಸೇವಾ ಕಂಪನಿಗಳನ್ನು ಬಳಸಿಕೊಂಡಿದ್ದರು. ಹವಾಲಾ ಮೂಲಕ ಕೂಡ ಹಣ ವರ್ಗಾವಣೆ ನಡೆದಿದೆ ಎಂದೂ ಇ.ಡಿ. ಆರೋಪ ಮಾಡಿದೆ. ಇದೇ ವೇಳೆ, ಮಂಗಳವಾರ ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ನಿವಾಸದ ಮೇಲೆ ಮಂಗಳವಾರ ಮತ್ತೆ ದಾಳಿ ನಡೆಸಿದಾಗ ಐದು ಐಷಾರಾಮಿ ಕಾರು (ಮರ್ಸಿಡಿಸ್‌ ಬೆನ್ಜ್‌) ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಎಲ್ಲ ಕಾರುಗಳು ‘0003’ ಎಂಬ ವಿಐಪಿ ಸಂಖ್ಯೆಯನ್ನು ಹೊಂದಿವೆ.

ಇದರ ಜತೆಗೆ ವೀರೇಂದ್ರಗೆ ಸೇರಿದ 9 ಬ್ಯಾಂಕ್‌ ಖಾತೆಗಳು ಹಾಗೂ ಒಂದು ಡಿಮ್ಯಾಟ್‌ ಖಾತೆಯಲ್ಲಿದ್ದ 40.69 ಕೋಟಿ ರು. ಹಣ ಸೇರಿದಂತೆ ಒಟ್ಟಾರೆ 55 ಕೋಟಿ ರು. ಅನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ. ಕೆಲ ದಿನಗಳ ಹಿಂದೆ 12 ಕೋಟಿ ರು. ನಗದನ್ನು ಇ.ಡಿ. ಜಪ್ತಿ ಮಾಡಿತ್ತು. ಅಕ್ರಮವಾಗಿ ಗಳಿಸಿದ ಹಣವನ್ನು ಸಂಗ್ರಹಿಸಿಡಲು ಬಳಕೆ ಮಾಡುತ್ತಿದ್ದ 262 ಬ್ಯಾಂಕ್‌ ಖಾತೆಗಳಲ್ಲಿದ್ದ 14.46 ಕೋಟಿ ರು. ಹಣವನ್ನು ಆರೋಪಿ ಸ್ಥಾನದಲ್ಲಿರುವ ಪೇಮೆಂಟ್‌ ಗೇಟ್‌ವೇಯೊಂದರಿಂದ ವಶಪಡಿಸಿಕೊಳ್ಳಲಾಗಿದೆ. ವೀರೇಂದ್ರ ಹಾಗೂ ಅವರ ಸಹಚರರು ಹಲವಾರು ಗೇಮಿಂಗ್‌ ವೆಬ್‌ಸೈಟ್‌ಗಳಿಂದ ಸಂಪಾದಿಸಿದ ಹಣವನ್ನು ಈ ಗೇಟ್‌ವೇ ಮೂಲಕವೇ ವರ್ಗಾಯಿಸಲಾಗುತ್ತಿತ್ತು ಎಂದು ವಿವರಿಸಿದೆ.

ವೀರೇಂದ್ರ ಅವರು ಕಿಂಗ್‌567, ರಾಜಾ567, ಲಯನ್‌567ನಂತಹ ಆನ್‌ಲೈನ್‌ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದರು. ಅವುಗಳಿಂದ ಸಂಪಾದಿಸಿದ ಹಣವನ್ನು ಪೇಮೆಂಟ್‌ ಗೇಟ್‌ವೇಗಳ ಮೂಲಕ ವರ್ಗಾಯಿಸುತ್ತಿದ್ದರು. ವೀರೇಂದ್ರ ಹಾಗೂ ಅವರ ಸಹಚರರು ನಡೆಸುತ್ತಿದ್ದ ವೆಬ್‌ಸೈಟ್‌ಗಳಿಂದ ಅಲ್ಪಾವಧಿಯಲ್ಲಿ 2000 ಕೋಟಿ ರು.ನಷ್ಟು ಅಗಾಧ ಹಣ ಒಂದೇ ಗೇಟ್‌ವೇ ಮೂಲಕ ವರ್ಗಾವಣೆಯಾಗಿದೆ ಎಂಬುದು ಪತ್ತೆಯಾಗಿದೆ ಎಂದು ತಿಳಿಸಿದೆ. ವೀರೇಂದ್ರ ಅವರ ಸಹೋದರರಾಗಿರುವ ಕೆ.ಸಿ. ತಿಪ್ಪೇಸ್ವಾಮಿ ಅವರು ಡೈಮಂಡ್‌ ಸಾಫ್ಟ್‌ಟೆಕ್‌, ಟಿಆರ್‌ಎಸ್‌ ಟೆಕ್ನಾಲಜೀಸ್‌ ಹಾಗೂ ಪ್ರೈಮ್‌9ಟೆಕ್ನಾಲಜೀಸ್‌ ಎಂಬ ಮೂರು ಕಂಪನಿಗಳನ್ನು ದುಬೈನಿಂದ ನಡೆಸುತ್ತಿದ್ದರು. ಈ ಕಂಪನಿಗಳು ವೀರೇಂದ್ರ ಅವರ ಕಾಲ್‌ಸೆಂಟರ್‌ ಹಾಗೂ ಗೇಮಿಂಗ್‌ ವ್ಯವಹಾರದ ಜತೆಗೆ ನಂಟು ಹೊಂದಿದ್ದವು ಎಂದು ವಿವರಿಸಿದೆ.

ಕುಸುಮಾ ಸೋದರ ಪಾಲುದಾರ: ತಮ್ಮ ಸಹೋದರ ತಿಪ್ಪೇಸ್ವಾಮಿ, ಸೋದರ ಸಂಬಂಧಿ ಪೃಥ್ವಿ ಎನ್‌.ರಾಜ್‌ ಹಾಗೂ ಇವರ ಜತೆ ನಂಟು ಹೊಂದಿದ್ದ ಅನಿಲ್‌ ಗೌಡ ಎಂಬಾತ ಸೇರಿದಂತೆ ಕೆಲವರ ಪಾಲುದಾರಿಕೆಯಲ್ಲಿ ದುಬೈನಲ್ಲಿ ಕ್ಯಾಸಲ್‌ ರಾಕ್‌ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌, ಲ್ಯಾಸ್ಕಾಕ್ಸ್‌ ಕೋರ್ಸ್ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ನಂತಹ ಕಂಪನಿಗಳನ್ನು ಸ್ಥಾಪಿಸಿರುವ ಶಂಕೆ ಇದೆ ಎಂದೂ ಹೇಳಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಿಂದ 2023ರಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದ ಕುಸುಮಾ ಎಚ್‌. ಅವರ ಸೋದರ ಈ ಅನಿಲ್‌ ಎಂದೂ ವಿವರಿಸಿದೆ.

ಸಿಕ್ಕಿಂನಲ್ಲಿ ಬಂಧಿಸಿದ್ದ ಇ.ಡಿ.: ಇ.ಡಿ. ಅಧಿಕಾರಿಗಳು ಕಳೆದ ಆ.22ರಂದು ಕೆ.ಸಿ.ವೀರೇಂದ್ರ, ಅವರ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿದಂತೆ ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು ನಗರ, ಹುಬ್ಬಳ್ಳಿ, ಜೋಧ್‌ಪುರ, ಮುಂಬೈ, ಗೋವಾ ಸೇರಿ ರಾಜ್ಯ ಹಾಗೂ ಹೊರರಾಜ್ಯಗಳ 31 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಶೋಧ ಕಾರ್ಯದ ವೇಳೆ ಸುಮಾರು 12 ಕೋಟಿ ರು. ನಗದು, ಸುಮಾರು 6 ಕೋಟಿ ರು. ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿವಸ್ತುಗಳು, 1 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿ, ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದರು. ವೀರೇಂದ್ರ ಅವರ ಸಹೋದರ ಕೆ.ಸಿ.ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್‌.ರಾಜ್‌ ಅವರ ಬಳಿ ಕೋಟ್ಯಂತರ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅಂತೆಯೇ ವೀರೇಂದ್ರ ಅವರಿಗೆ ಸೇರಿದ 17 ಬ್ಯಾಂಕ್‌ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಫ್ರೀಜ್‌ ಮಾಡಿದ್ದರು. ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ.ಅಧಿಕಾರಿಗಳು ಆ.23ರಂದು ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ವೀರೇಂದ್ರ ಅವರನ್ನು ಬಂಧಿಸಿ ಬೆಂಗಳೂರಿಗೆ ತಂದಿದ್ದರು.

ವೀರೇಂದ್ರ ಐದು ವಿಐಪಿ ಕಾರು ವಶ: ಮಂಗಳವಾರ ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ನಿವಾಸದ ಮೇಲೆ ಮಂಗಳವಾರ ಮತ್ತೆ ದಾಳಿ ನಡೆಸಿದಾಗ ಐದು ಐಷಾರಾಮಿ ಕಾರು (ಮರ್ಸಿಡಿಸ್‌ ಬೆನ್ಜ್‌) ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಎಲ್ಲ ಕಾರುಗಳು ‘0003’ ಎಂಬ ವಿಐಪಿ ಸಂಖ್ಯೆಯನ್ನು ಹೊಂದಿವೆ ಎಂದು ಇ.ಡಿ. ತಿಳಿಸಿದೆ.