ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಕನಕಗಿರಿ ತಾಲೂಕುಗಳಲ್ಲಿ ಚಿರತೆ ಹಾಗೂ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಜನವಸತಿ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಚಿರತೆಯೊಂದು ಕಾಡುಹಂದಿಯನ್ನು ಬಲಿ ಪಡೆದರೆ, ಆಹಾರ ಅರಸಿ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದು, ಅರಣ್ಯ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ.

ಕೊಪ್ಪಳ (ಫೆ.13): ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕದ ಬದುಕುವಂತಾಗಿದೆ. ಒಂದು ಕಡೆ ಚಿರತೆಗಳ ಸರಣಿ ದಾಳಿ ನಡೆಯುತ್ತಿದ್ದರೆ, ಇನ್ನೊಂದೆಡೆ ಜನವಸತಿ ಪ್ರದೇಶಗಳಿಗೆ ಕರಡಿಗಳು ನುಗ್ಗುತ್ತಿರುವುದು ಜಿಲ್ಲೆಯ ಜನರನ್ನು ಕಂಗೆಡಿಸಿದೆ.

ಹುಲಿಯಾಪೂರ ತಾಂಡಾದಲ್ಲಿ ಚಿರತೆ ಪ್ರತ್ಯಕ್ಷ, ಕಾಡುಹಂದಿ ಬಲಿ

ಕುಷ್ಟಗಿ ತಾಲೂಕಿನ ಹುಲಿಯಾಪೂರ ತಾಂಡಾದಲ್ಲಿ ಚಿರತೆಯ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದೆ. ಗ್ರಾಮದ ಹೊರವಲಯದಲ್ಲಿ ಚಿರತೆಯು ಕಾಡುಹಂದಿಯೊಂದರ ಮೇಲೆ ದಾಳಿ ನಡೆಸಿ, ಅದನ್ನು ತಿಂದು ಹಾಕಿದೆ. ರಕ್ತಸಿಕ್ತ ಕುರುಹುಗಳು ಕಂಡ ಬಳಿಕ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಕಳೆದ ವಾರವಷ್ಟೇ ಗಂಗಾವತಿ ತಾಲೂಕಿನ ಸಣಾಪೂರ ಬಳಿಯೂ ಚಿರತೆ ಕಾಣಿಸಿಕೊಂಡಿದ್ದರಿಂದ ಈ ಭಾಗದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿರುವುದು ದೃಢಪಟ್ಟಿದೆ.

ಅರಣ್ಯ ಇಲಾಖೆಯಿಂದ ಹೈ ಅಲರ್ಟ್; ಒಂಟಿಯಾಗಿ ಓಡಾಡದಂತೆ ಸೂಚನೆ

ಚಿರತೆ ಹಾವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಕುಷ್ಟಗಿ ತಾಲೂಕಿನ ಮೆಣೆದಾಳ, ಹಿರೇಮನ್ನಾಪೂರ ಹಾಗೂ ಹುಲಿಯಾಪೂರ ತಾಂಡಾದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು, ರಾತ್ರಿ ಸಮಯದಲ್ಲಿ ಒಂಟಿಯಾಗಿ ಸಂಚರಿಸಬಾರದೆಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಸಣ್ಣ ಮಕ್ಕಳನ್ನು ಮನೆಯಿಂದ ಹೊರಗೆ ಬಿಡದಂತೆ ಮತ್ತು ಜಾನುವಾರುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.

ಹೊಸಗುಡ್ಡದಲ್ಲಿ ಕರಡಿ ಪ್ರತ್ಯಕ್ಷ: ಆಹಾರ ಅರಸಿ ನಾಡಿಗೆ ಲಗ್ಗೆ

ಚಿರತೆಯ ಆತಂಕದ ನಡುವೆಯೇ ಕನಕಗಿರಿ ತಾಲೂಕಿನ ಹೊಸಗುಡ್ಡ ಗ್ರಾಮದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದೆ. ನಿನ್ನೆ ರಾತ್ರಿ ಆಹಾರ ಅರಸಿ ಕರಡಿಯು ಗ್ರಾಮದೊಳಕ್ಕೆ ನುಗ್ಗಿದ್ದು, ಈ ದೃಶ್ಯ ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಕಾಡುಗಳಲ್ಲಿ ಆಹಾರ ಮತ್ತು ನೀರಿನ ಅಭಾವ ಉಂಟಾಗಿರುವುದರಿಂದ ವನ್ಯಮೃಗಗಳು ನಾಡಿನತ್ತ ಮುಖ ಮಾಡುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ರೈತಾಪಿ ವರ್ಗದಲ್ಲಿ ಮನೆಮಾಡಿದ ಭೀತಿ

ಜಿಲ್ಲೆಯಾದ್ಯಂತ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ತೆರೆದ ಬಾವಿಗಳು ಮತ್ತು ಕುರುಚಲು ಕಾಡುಗಳಿರುವ ಪ್ರದೇಶಗಳಲ್ಲಿ ಪ್ರಾಣಿಗಳು ಅವಿತು ಕುಳಿತಿರುವ ಸಾಧ್ಯತೆಯಿದೆ. ಅರಣ್ಯ ಇಲಾಖೆಯು ಕೂಡಲೇ ಬೋನು ಇರಿಸಿ ಚಿರತೆ ಮತ್ತು ಕರಡಿಯನ್ನು ಸೆರೆಹಿಡಿದು ಸಂಕಷ್ಟದಿಂದ ಪಾರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

YouTube video player