ಪ್ರಧಾನಿ ನರೇಂದ್ರ ಮೋದಿ ಅವರು ಮೇ 13ರಂದು ಪಂಜಾಬಿನ ಆದಂಪುರ ವಾಯುನೆಲೆಗೆ ಭೇಟಿ ನೀಡಿ, ‘ಆಪರೇಷನ್ ಸಿಂದೂರ್’ನಲ್ಲಿ ಭಾಗವಹಿಸಿದ ಧೈರ್ಯಶಾಲಿ ಸೈನಿಕರನ್ನು ಭೇಟಿಯಾಗಿ ಅವರಿಗೆ ದೈರ್ಯ ತುಂಬಿದ್ದಾರೆ. 

ಕಲಬುರಗಿ (ಮೇ 14): ಪ್ರಧಾನಿ ನರೇಂದ್ರ ಮೋದಿ ಅವರು ಮೇ 13ರಂದು ಪಂಜಾಬಿನ ಆದಂಪುರ ವಾಯುನೆಲೆಗೆ ಭೇಟಿ ನೀಡಿ, ‘ಆಪರೇಷನ್ ಸಿಂದೂರ್’ನಲ್ಲಿ ಭಾಗವಹಿಸಿದ ಧೈರ್ಯಶಾಲಿ ಸೈನಿಕರನ್ನು ಭೇಟಿಯಾಗಿ ಅವರಿಗೆ ದೈರ್ಯ ತುಂಬಿದ್ದಾರೆ. 

ಈ ಭೇಟಿಯು ಸೈನಿಕರ ಮನೋಬಲವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಲಾಗಿದೆ. ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, 'ನಮ್ಮ ಸೈನಿಕರ ಕಾರ್ಯವೈಖರಿಯನ್ನು ಇಡೀ ರಾಷ್ಟ್ರ ಮೆಚ್ಚುತ್ತಿದೆ. ಪ್ರಧಾನಿ ಸೈನಿಕರಿಗೆ ದೈರ್ಯ ತುಂಬಿರುವುದು ಅವರ ಜವಾಬ್ದಾರಿಯ ಜೊತೆಗೆ ಶ್ಲಾಘನೀಯ ಕಾರ್ಯ' ಎಂದು ಹೇಳಿದ್ದಾರೆ. ಆದರೆ ಖರ್ಗೆ ಅವರು ಪ್ರಧಾನಿಯವರ ಕೆಲವು ಕ್ರಮಗಳ ಬಗ್ಗೆ ತೀವ್ರ ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ. 

ಏಪ್ರಿಲ್ 22ರಂದು ಪೆಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಪ್ರಧಾನಿ ಮೋದಿ ಬಿಹಾರ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದರು. ಜಮ್ಮು ಕಾಶ್ಮೀರ, ಆದಂಪುರ ಸೇರಿದಂತೆ ಎಲ್ಲೆಡೆ ಬ್ಲಾಕ್‌ಔಟ್ ಆಗಿದ್ದ ಸಂದರ್ಭದಲ್ಲಿ ಅವರು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಟ್ರಂಪ್‌ನ ಹೇಳಿಕೆಯ ಬಗ್ಗೆ ವಿವಾದ
ಪ್ರಧಾನಿಯವರ ಆಪ್ತ ಮಿತ್ರ ಎಂದು ಕರೆಯಲಾಗುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಹೇಳಿಕೆಗಳ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಟ್ರಂಪ್ ನಾಲ್ಕು ಬಾರಿ ಹೇಳಿದ್ದಾರೆ, ಭಾರತ-ಪಾಕಿಸ್ತಾನದ ಯುದ್ಧ ವಿರಾಮಕ್ಕೆ ತಾನೇ ಕಾರಣ ಎಂದು. ಭಾರತವನ್ನು ಒಂದು ಭಯೋತ್ಪಾದಕ ರಾಷ್ಟ್ರಕ್ಕೆ ಹೋಲಿಸುತ್ತಿದ್ದಾರೆ. ವ್ಯಾಪಾರದ ಆಮಿಷ, ತೆರಿಗೆ ರಿಯಾಯಿತಿ, ಎಂಟು ಸಾವಿರ ಕೋಟಿ ಸಾಲದ ಮೂಲಕ ಏನು ಸಾಧಿಸಲು ಹೊರಟಿದ್ದಾರೆ? ಈ ಹಣವನ್ನು ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಗೆ ಬಳಸಿದರೆ ಯಾರು ಹೊಣೆ? ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕದನ ವಿರಾಮಕ್ಕೆ ಪ್ರಿಯಾಂಕ್ ಖರ್ಗೆ ಅಸಮಾಧಾನ, ಪ್ರಧಾನಿ ಮೋದಿಗೆ ಎರಡು ಪ್ರಶ್ನೆ

ವಿದೇಶಾಂಗ ನೀತಿಯ ಮೇಲೆ ಟೀಕೆ
ಪ್ರಧಾನಿ ಮೋದಿ ನಮ್ಮ ವಿದೇಶಾಂಗ ನೀತಿಯನ್ನು ಟ್ರಂಪ್ ಬಳಿ ಅಡವಿಟ್ರಾ? ಟ್ರಂಪ್ ಮುಂದೆ ಮಂಡಿಯೂರಿದ್ರಾ?, ಕೈ-ಕಾಲು ಬಿದ್ದರಾ? ಅದು ನನಗೆ ಗೊತ್ತಿಲ್ಲ. ಆದರೆ, ಅವರು ‘ಮೈ ಫ್ರೆಂಡ್ ಮೋದಿ’ ಎಂದು ಕರೆಯುತ್ತಾ, ಯುದ್ಧವನ್ನು ತಾನೇ ನಿಲ್ಲಿಸಿದೆ ಎಂದು ಹೇಳುತ್ತಿದ್ದಾರೆ. ಟ್ರಂಪ್ ಬಳಸುವ ಭಾಷೆ ನಮ್ಮ ದೇಶದ ಬಗ್ಗೆ, ಪ್ರಧಾನಿಯವರ ಬಗ್ಗೆ ಯಾವ ರೀತಿಯದ್ದು ಎಂದು ಎಲ್ಲರೂ ಗಮನಿಸಬೇಕು ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಆಲ್ ಪಾರ್ಟಿ ಮೀಟಿಂಗ್‌ಗೆ ಆಗ್ರಹ
ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಪಾರದರ್ಶಕತೆ ತೋರಬೇಕು. ಸಿಸಿಎಸ್ (ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ) ಸಭೆ ಆಯೋಜಿಸಿ, ಆಲ್ ಪಾರ್ಟಿ ಮೀಟಿಂಗ್ ಕರೆಯಿರಿ, ಸಂಸತ್ತನ್ನು ಆಹ್ವಾನಿಸಿ. ಯಾರು ಯಾರ ಮುಂದೆ ಮಂಡಿಯೂರಿದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಖರ್ಗೆ ಒತ್ತಾಯಿಸಿದರು.

 ಇದನ್ನೂ ಓದಿ: ಸಂವಿಧಾನಕ್ಕೆ ಅತಿಹೆಚ್ಚು ಅವಮಾನ ಮಾಡಿದ್ದೇ ಕಾಂಗ್ರೆಸ್: ಖರ್ಗೆ, ಜ್ಯೂನಿಯರ್ ಖರ್ಗೆ ವಿರೆದ್ಧ ಜೋಶಿ ವಾಗ್ದಾಳಿ!

ಸೈನಿಕರಿಗೆ ಮೋದಿಯವರಿಂದ ಮನೋಬಲ
ಆದಂಪುರದಲ್ಲಿ ಪ್ರಧಾನಿ ಮೋದಿ, ಸೈನಿಕರೊಂದಿಗೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿ, ಅವರ ಧೈರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ನಮ್ಮ ಸೈನಿಕರ ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಒಳಗೊಂಡಿರುವ ಅವರೊಂದಿಗೆ ಸಮಯ ಕಳೆಯುವುದು ವಿಶೇಷ ಅನುಭವವಾಗಿತ್ತು, ಎಂದು ಮೋದಿ ತಮ್ಮ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.