ಬೆಂಗಳೂರು ಮೆಟ್ರೋ ದರ ಏರಿಕೆಯನ್ನು ದೆಹಲಿ ಮೆಟ್ರೋ ದರ ಏರಿಕೆಗೆ ಹೋಲಿಸಿ ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಬಿಎಂಆರ್ಸಿಎಲ್ ದರ ಏರಿಕೆ ಅಸಮಂಜಸ ಹಾಗೂ ಸಾರ್ವಜನಿಕರಿಗೆ ಹೊರೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಶುಲ್ಕ ನಿಗದಿ ಸಮಿತಿ ವರದಿ ಪ್ರಕಟಿಸದಿರುವುದನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು: ನಗರದ ನಮ್ಮ ಮೆಟ್ರೋ ದರ ಏರಿಕೆಯ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಕಿಡಿ ಕಾರಿದ್ದಾರೆ. ಇತ್ತೀಚೆಗೆ ದೆಹಲಿ ಮೆಟ್ರೋ ದರವನ್ನು ಏರಿಕೆ ಮಾಡಲಾಗಿದ್ದು, ಅದನ್ನು ಬೆಂಗಳೂರು ಮೆಟ್ರೋ (ಬಿಎಂಆರ್ಸಿಎಲ್) ದರಗಳೊಂದಿಗೆ ಹೋಲಿಸಿ, ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ಜಾರಿಯಾದ ಹೊಸ ದರಗಳ ಪ್ರಕಾರ, ದೆಹಲಿ ಮೆಟ್ರೋದಲ್ಲಿ ಪ್ರತಿ ಕಿಲೋಮೀಟರ್ಗೆ ಕನಿಷ್ಠ ₹1 ರಿಂದ ಗರಿಷ್ಠ ₹4 ರವರೆಗೆ ದರ ಏರಿಕೆಯಾಗಿದೆ. ಈ ದರ ಏರಿಕೆಯನ್ನು "ಸಮಂಜಸವಾದದ್ದು" ಸಾರ್ವಜನಿಕರಿಗೆ ಹೆಚ್ಚಿನ ಬಾಧೆ ಆಗದಂತೆ ಸಮತೋಲನ ಸಾಧಿಸುವ ರೀತಿಯಲ್ಲಿ ದರ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ದಿಲ್ಲಿ ಮೆಟ್ರೋ ದರ ಪಟ್ಟಿ ಹಾಕಿ ಬಿಎಂಆರ್ಸಿಎಲ್ ಗೆ ಸಂಸದರು ಟಾಂಗ್ ಕೊಟ್ಟಿದ್ದಾರೆ.
ದೆಹಲಿ ದರ ಪಟ್ಟಿ ಹೋಲಿಕೆ ಮಾಡಿ – ಬಿಎಂಆರ್ಸಿಎಲ್ ಗೆ ಟಾಂಗ್
ಈ ಹಿನ್ನೆಲೆಯಲ್ಲಿ, ತೇಜಸ್ವಿ ಸೂರ್ಯ ತಮ್ಮ ಟ್ವೀಟ್ನಲ್ಲಿ ದೆಹಲಿ ಮೆಟ್ರೋ ದರಪಟ್ಟಿಯನ್ನು ಹಂಚಿಕೊಂಡು, ಅದನ್ನು ಬೆಂಗಳೂರು ಮೆಟ್ರೋ ದರಗಳೊಂದಿಗೆ ಹೋಲಿಕೆ ಮಾಡಿದ್ದಾರೆ. "ದೆಹಲಿ ಮೆಟ್ರೋದಲ್ಲಿನ ಈ ಸಮಂಜಸವಾದ ಏರಿಕೆಗಳನ್ನು ಮತ್ತು ಬಿಎಂಆರ್ಸಿಎಲ್ ಬೆಂಗಳೂರಿನಲ್ಲಿ ಮಾಡಿರುವ ಏರಿಕೆಗಳೊಂದಿಗೆ ಹೋಲಿಸಿ ನೋಡಿ. ಬೆಂಗಳೂರಿನಲ್ಲಿ ಏರಿಸಿರುವ ದರಗಳು ಸಂಪೂರ್ಣವಾಗಿ ವಸ್ತುಸ್ಥಿತಿಗೆ ತಲೆ ಹಾಕದೇ ನಿರ್ಧರಿಸಲಾಗಿದೆ." ಎಂದು ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ
ಬೆಂಗಳೂರು ಮೆಟ್ರೋ ದರಗಳು ಇತರೆ ನಗರಗಳಿಗಿಂತ ಅತ್ಯಂತ ದುಬಾರಿ ಆಗಿದ್ದು, ಸಾಮಾನ್ಯ ಜನತೆಗೆ ಕೈಗೆಟುಕದಂತಿವೆ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಮೆಟ್ರೋ ಬಳಸುವ ಮಧ್ಯಮ ವರ್ಗ ಮತ್ತು ಉದ್ಯೋಗ ವರ್ಗದ ಪ್ರಯಾಣಿಕರು ದಿನನಿತ್ಯ ಹೆಚ್ಚುವರಿ ಭಾರವನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
"ಶುಲ್ಕ ನಿಗದಿ ಸಮಿತಿ ವರದಿ ಪ್ರಕಟಿಸದಿರುವುದು ನಾಚಿಕೆಗೇಡಿತನ"
ಅವರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಅಂದರೆ, ಬಿಎಂಆರ್ಸಿಎಲ್ ಇನ್ನೂ ಶುಲ್ಕ ನಿಗದಿ ಸಮಿತಿಯ ವರದಿಯನ್ನು ಪ್ರಕಟಿಸಿಲ್ಲ ಎಂಬುದು. ಇದು ಪಾರದರ್ಶಕತೆಗೆ ಧಕ್ಕೆ ತರುತ್ತದೆ ಹಾಗೂ ಸಾರ್ವಜನಿಕರಿಗೆ ನ್ಯಾಯವಾಗದ ನಿರ್ಧಾರ ಎಂದು ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ದೆಹಲಿ ಮೆಟ್ರೋ ದರ ಏರಿಕೆಯನ್ನು ಸಮಂಜಸವಾಗಿ ಪರಿಗಣಿಸಿ, ಅದೇ ಸಮಯದಲ್ಲಿ ಬೆಂಗಳೂರು ಮೆಟ್ರೋದಲ್ಲಿ ಜಾರಿಗೆ ತಂದಿರುವ ಕಡಿದಾದ ದರ ಏರಿಕೆಗಳನ್ನು ಪ್ರಶ್ನಿಸಿರುವ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಆಡಳಿತದ ಮೇಲೆ ಮತ್ತೊಮ್ಮೆ ಒತ್ತಡ ತಂದುಕೊಂಡಿದ್ದಾರೆ. ಇದೀಗ ಬಿಎಂಆರ್ಸಿಎಲ್ ಈ ಆರೋಪಕ್ಕೆ ಏನೆಂದು ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲವಾಗಿದೆ.


