ಕನ್ನಡ ಮತ್ತು ಕನ್ನಡಿಗರ ಅವಹೇಳನ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣಗೌಡ ಅವರು   ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಕನ್ನಡ ಹಾಡು ಹಾಡುವಂತೆ ಕೋರಿದ ಯುವಕನಿಗೆ ಸೋನು ನಿಗಮ್ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಮೇ.5): ಕನ್ನಡ ಮತ್ತು ಕನ್ನಡಿಗರ ಅವಹೇಳನ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣಗೌಡ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಕನ್ನಡ ಹಾಡು ಹಾಡುವಂತೆ ಕೋರಿದ ಯುವಕನಿಗೆ ಸೋನು ನಿಗಮ್ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸೋನು ನಿಗಮ್ ಒಬ್ಬ ಹುಚ್ಚ:

ಸೋನು ನಿಗಮ್ ಒಬ್ಬ ಹುಚ್ಚ ಕನ್ನಡ ಹಾಡು ಎಂದಿದ್ದಕ್ಕೆ ಹಾಡಲ್ಲ ಅಂತ ಹೇಳಬಹುದಿತ್ತು. ಅದುಬಿಟ್ಟು ಕಾಶ್ಮೀರದ ಭಯೋತ್ಪಾದನೆಗೆ ಹೋಲಿಸಿದ್ದು ಸರಿಯಲ್ಲ. ಇಂಥ ಹೇಳಿಕೆಯೇ ಅವನೊಬ್ಬ ದೊಡ್ಡ ಹುಚ್ಚ ಎಂದು ತೋರಿಸಿದ್ದಾನೆ. ಆ ರೀತಿಯ ಹೇಳಿಕೆಗೆ ಕ್ಷಮೆಯಾಚನೆ ಮಾಡಬಹುದಿತ್ತು. ಆದರೆ ವಿಡಿಯೋ ಮಾಡಿ ಮತ್ತೆ ತನ್ನ ಹೇಳಿಕೆ ಸಮರ್ಥಿಸಿಕೊಂಡಿದ್ದಾನೆ ಎಂದರೆ ನಮ್ಮ ಕಾರ್ಯಕರ್ತರು, ಕನ್ನಡಿಗರು ಸುಮ್ಮನೆ ಬಿಟ್ಟರೆಯೇ? ಎಂದು ಕಿಡಿಕಾರಿದರು.

ಇದನ್ನೂ ಓದಿ:ಗಾಯಕ ಸೋನು ನಿಗಮ್​​ ಮೇಲೆ ಕ್ರಮಕ್ಕೆ ಮುಂದಾದ ಫಿಲ್ಮ್ ಚೇಂಬರ್!

ಈಗಾಗಲೇ ಕರವೇ ಕಾರ್ಯಕರ್ತ ಧರ್ಮರಾಜ್ ಗೌಡ ಅವರಿಂದ ಸೋನು ನಿಗಮ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಷ್ಟ್ರದ್ರೋಹದ ಆರೋಪದಡಿ ದೂರು ದಾಖಲಾಗಿದೆ. ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಬಂಧಿಸಬೇಕು. ಅವನಿಗೆ ನಾಲ್ಕು ದಿನ ಜೈಲಿಗೆ ಕಳಿಸಿದರೆ ಪರಿವರ್ತನೆ ಆಗುತ್ತದೆ. ಕರ್ನಾಟಕ ಸರ್ಕಾರ ಮತ್ತು ಪೊಲೀಸರು ಯಾವುದೇ ರಿಯಾಯತಿ ನೀಡಬಾರದು ಎಂದು ನಾರಾಯಣಗೌಡ ಒತ್ತಾಯಿಸಿದರು.

ಸೋನು ನಿಗಮ್‌ಗೆ ನೋಟಿಸ್:

ಕನ್ನಡ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆ ಅವಲಹಳ್ಳಿ ಪೊಲೀಸರು ಸೋನು ನಿಗಮ್‌ಗೆ ನೋಟಿಸ್ ಕೊಟ್ಟಿದ್ದಾರೆ. ಸೋನು ನಿಗಮ್‌ಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಇದಲ್ಲದೇ ಕಾರ್ಯಕ್ರಮದ ಆಯೋಜಕರಿಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಸೋನು ಯಾವ ಕಾಂಟ್ರಾಕ್ಟ್‌ನಲ್ಲಿ ಬಂದಿದ್ದರು, ಎಷ್ಟು ಗಂಟೆಗಳ ಕಾರ್ಯಕ್ರಮ, ಯಾರೆಲ್ಲ ಜೊತೆಯಲ್ಲಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕನ್ನಡ ಕಲಾವಿದರಿಗೆ ಅವಕಾಶ ನೀಡಿ: ನಾರಾಯಣಗೌಡ 
ಸೋನು ನಿಗಮ್‌ಗೆ ಕನ್ನಡದಲ್ಲಿ ಹಾಡುವ ನಿರ್ಬಂಧ ಹೇರಬೇಕು. ಕನ್ನಡ ಕಲಾವಿದರು ಮತ್ತು ಸಂಗೀತ ನಿರ್ದೇಶಕರಿಗೆ ಅವಕಾಶ ನೀಡಬೇಕು. ಯಾವ ಸಂಗೀತ ನಿರ್ದೇಶಕರೂ ಸೋನು ಅವರಿಂದ ಹಾಡಿಸಬಾರದು ಎಂದು ಒತ್ತಾಯಿಸಿದ್ದಾರೆ. ಫಿಲ್ಮ್ ಚೇಂಬರ್‌ಗೆ ಕೂಡ ಅಡ್ಡಗೋಡೆ ಮೇಲೆ ದೀಪ ಇಡದೆ ಸರಿಯಾದ ತೀರ್ಮಾನ ಕೈಗೊಳ್ಳಿ ಎಂದು ನಾರಾಯಣ ಗೌಡ ತಾಕೀತು ಮಾಡಿದರು.

ಇದನ್ನೂ ಓದಿ:ಆರೋಪ, ಬೆಂಗಳೂರಿನಲ್ಲಿ FIR ಬಳಿಕವೂ ಕೆಲಸ ಮುಂದುವರಿಸಿದ ಗಾಯಕ ಸೋನು ನಿಗಮ್!

ಕನ್ನಡಿಗರ ಆಕ್ರೋಶ
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಸೋನು ನಿಗಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರವೇ ಕಾರ್ಯಕರ್ತರು ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಕನ್ನಡ ಭಾಷೆ ಭಾವನಾತ್ಮಕ ವಿಚಾರ. ಇಂತಹ ಅವಮಾನವನ್ನು ಸಹಿಸುವುದಿಲ್ಲ ಎಂದು ಕರವೇ ಹೇಳಿದೆ. ತನಿಖೆಯ ಮುಂದಿನ ಹಂತದಲ್ಲಿ ಪೊಲೀಸರು ಆಯೋಜಕರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಿದ್ದಾರೆ. ಕಾನೂನಾತ್ಮಕ ಕ್ರಮಕ್ಕೆ ಕರವೇ ಒತ್ತಾಯಿಸಿದ್ದು, ಈ ವಿವಾದದ ಮುಂದಿನ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ನಮ್ಮ ಸುದ್ದಿಗಳನ್ನು ಓದುತ್ತಾ ಇರಿ.