ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ, ಗೃಹಲಕ್ಷ್ಮೀ ಯೋಜನೆ ಭ್ರಷ್ಟಾಚಾರ ಆರೋಪದ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿತು. ಇದರೊಂದಿಗೆ, ಅಲೆಮಾರಿ ಸಮುದಾಯಗಳು, ದಲಿತ ಕುಟುಂಬಗಳು ಸೇರಿದಂತೆ ವಿವಿಧ ಸಂಘಗಳು ಬೇಡಿಕೆಗಳ ಈಡೇರಿಕೆಗೆ ಧರಣಿ ನಡೆಸಿದವು.

ಬೆಳಗಾವಿ (ಡಿ.20): ಚಳಿಗಾಲದ ಅಧಿವೇಶನದ ಕೊನೆ ದಿನವೂ ವಿಪಕ್ಷ ಬಿಜೆಪಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.

ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸದನಕ್ಕೆ ತಪ್ಪು ಮಾಹಿತಿ ನೀಡಿ, ₹5000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿಗರು, ‘ಅಕ್ಕಾ... ಅಕ್ಕಾ... ಎಲ್ಲಿದೆ ರೊಕ್ಕಾ?, ಯಾರದೊ ರೊಕ್ಕ ಲಕ್ಷ್ಮೀ ಅಕ್ಕನ ಜಾತ್ರೆ, ಹೆಣ್ಣು ಮಕ್ಕಳ ರೊಕ್ಕ ಕಾಂಗ್ರೆಸ್‌ ಮಂತ್ರಿ ಜಾತ್ರಿ’ ಎಂದು ಸಚಿವೆ ಹೆಬ್ಬಾಳ್ಕರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೃಹಲಕ್ಷ್ಮಿ ಯೋಜನೆ ಹಣವನ್ನು ಫಲಾನುಭವಿಗಳಿಗೆ ನೀಡದೇ ಹೆಬ್ಬಾಳ್ಕರ್‌ ಅವರು ಸಾವಿರಾರು ಕೋಟಿ ದುರುಪಯೋಗಪಡಿಸಿಕೊಂಡಿದ್ದು, ಕನ್ನಡ ನಾಡಿನ ಗೃಹಿಣಿಯರಿಗೆ ಅನ್ಯಾಯ ಮಾಡಲು ಯತ್ನಿಸಿದ್ದಾರೆ. ಸದನಕ್ಕೆ ತಪ್ಪು ಮಾಹಿತಿ ನೀಡಿದ ಹೆಬ್ಬಾಳ್ಕರ್‌ ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೇ ಬಾಕಿ ಉಳಿದಿರುವ ಗೃಹಲಕ್ಷ್ಮಿ ಹಣವನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಗಳ ಧರಣಿ:

ಕರ್ನಾಟಕ ಅಲೆಮಾರಿ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ವಸತಿ ಶಾಲೆಗಳನ್ನು ಮಂಜೂರು ಮಾಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿ, ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಗಾಯರಾಣ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ದಲಿತ ಕುಟುಂಬಗಳಿಗೆ ಜಮೀನುಗಳನ್ನು ಸಕ್ರಮಗೊಳಿಸಿ ಸಾಗುವಳಿ ಪತ್ರ ನೀಡುವಂತೆ ಒತ್ತಾಯಿಸಿ ಹುಕ್ಕೇರಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಪ್ರತಿ ಟನ್ ಕಬ್ಬಿಗೆ ₹4000 ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಸಂಘ ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳು ಅಧಿವೇಶನದ ಕೊನೆಯ ದಿನವೂ ಪ್ರತಿಭಟನೆ ನಡೆಸಿದವು.