ರಾಜ್ಯದ ಕೆಲ ಜಿಲ್ಲೆಗಳ ಅಥವಾ ನಿರ್ದಿಷ್ಟ ಭೌಗೋಳಿಕ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು ಇಡೀ ರಾಜ್ಯದ ಸಂಪ್ರದಾಯವಾಗಿರಲಿದೆ. ನಿರ್ದಿಷ್ಟ ಪ್ರದೇಶದಲ್ಲಷ್ಟೇ ಆ ಸಂಪ್ರದಾಯ ಆಚರಿಸಲಾಗುತ್ತದೆ.

ಬೆಂಗಳೂರು (ಅ.15): ರಾಜ್ಯದ ಕೆಲ ಜಿಲ್ಲೆಗಳ ಅಥವಾ ನಿರ್ದಿಷ್ಟ ಭೌಗೋಳಿಕ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು ಇಡೀ ರಾಜ್ಯದ ಸಂಪ್ರದಾಯವಾಗಿರಲಿದೆ. ನಿರ್ದಿಷ್ಟ ಪ್ರದೇಶದಲ್ಲಷ್ಟೇ ಆ ಸಂಪ್ರದಾಯ ಆಚರಿಸಲಾಗುತ್ತದೆ ಎಂಬ ಕಾರಣಕ್ಕೆ ಆ ಭಾಗ ಕರ್ನಾಟಕಕ್ಕೆ ಸೇರಿದ್ದಲ್ಲ ಎಂಬುದಾಗಿ ಹೇಳಲಾಗುತ್ತದೆಯೇ? ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ರಾಜ್ಯದ ವಿವಿಧೆಡೆ ಕಂಬಳ ಕ್ರೀಡೆ ಆಯೋಜನೆಗೆ ಅನುಮತಿಸುವ ವಿಚಾರದಲ್ಲಿ ಸರ್ಕಾರ ಕಾನೂನು-ನಿಯಮಗಳಂತೆ ತೀರ್ಮಾನಿಸಬಹುದು ಎಂದು ನುಡಿದಿದೆ.

ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳ ಸಾಂಪ್ರದಾಯಿಕ ಕಂಬಳ ಕ್ರೀಡೆಯನ್ನು ರಾ‍ಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಆಯೋಜಿಸಲು ನಿರ್ಬಂಧ ಹೇರುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಮತ್ತು ಪಿಲಿಕುಳ ನಿಸರ್ಗಧಾಮ (ಜೈವಿಕ ಉದ್ಯಾನವನ)ದಲ್ಲಿ ಉದ್ದೇಶಿತ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ ‘ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್, (ಪೇಟಾ) ಸಂಸ್ಥೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಹಾಗೆಯೇ, ಆ ಬಗ್ಗೆ ವಿಸ್ತೃತ ಆದೇಶ ಹೊರಡಿಸಲಾಗುವುದು ಎಂದೂ ತಿಳಿಸಿದೆ.

ಸರ್ಕಾರ ವಿವರಣೆ ನೀಡಬೇಕು

ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ಪಿಲಿಕುಳ ನಿಸರ್ಗಧಾಮವನ್ನು ಜೈವಿಕ ಉದ್ಯಾನವನವೆಂದು ಗೊತ್ತುಮಾಡಿದ್ದರೆ, ಆ ಸ್ಥಳದಲ್ಲಿ ಕಂಬಳ ಆಯೋಜನೆಗೆ ಅವಕಾಶ ಇರುವುದಿಲ್ಲ. ಜೈವಿಕ ಉದ್ಯಾನವನ್ನು ‘ಹಬ್ಬದ ಮೈದಾನವಾಗಿ ಮಾಡಲಾಗದು. ಹಿಂದೆ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ಕ್ರೀಡೆ ಆಯೋಜಿಸಬಹುದು ಎಂದು ತಜ್ಜರು ವರದಿ ನೀಡಿದ್ದಾರೆ. ಒಂದೊಮ್ಮೆ ಪಿಲಿಕುಳವು ಜೈವಿಕ ಉದ್ಯಾನವಾಗಿದ್ದರೆ, ತಜ್ಞರ ವರದಿಯೇ ತಪ್ಪಾಗಲಿದೆ. ಆದ್ದರಿಂದ ಪಿಲಿಕುಳದ ವಾಸ್ತವ ಸ್ಥಾನ-ಮಾನ ಬಗ್ಗೆ ಸರ್ಕಾರ ವಿವರಣೆ ನೀಡಬೇಕು. ಮುಂದಿನ ವಿಚಾರಣೆ ವೇಳೆ ಪಿಲಿಕುಳದಲ್ಲಿ ಕಂಬಳ ಆಯೋಜನೆಯ ವಿಷಯ ಪರಿಶೀಲಿಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ನ.11ಕ್ಕೆ ಮುಂದೂಡಿತು.