ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ 14 ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಅತ್ಯಾಚಾ*ರ ಪ್ರಕರಣದಲ್ಲಿ ಆರೋಪಿಯಾಗಿರುವ ಅವರ ವಿರುದ್ಧ ತನಿಖೆ ಮುಂದುವರೆದಿದೆ.
ಬೆಂಗಳೂರು (ಜು.25): ಅತ್ಯಾಚಾ*ರ ಪ್ರಕರಣದಲ್ಲಿ ಆರೋಪಿತನಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ವಜಾಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲು ಪ್ರಜ್ವಲ್ ರೇವಣ್ಣ ಮತ್ತೊಂದು ತೀವ್ರ ಆಘಾತ ಅನುಭವಿಸಿದ್ದಾರೆ. ಈಗಾಗಲೇ 14 ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗೆ, ಇನ್ನಷ್ಟು ದಿನಗಳ ಕಾಲ ಜೈಲ್ಲಿನಲ್ಲಿಯೇ ಇರುವುದು ಅನಿವಾರ್ಯವಾಗಿದೆ.
ಪ್ರಕರಣದ ಹಿನ್ನೆಲೆ:
ಹಾಸನ ಲೋಕಸಭಾ ಕ್ಷೇತ್ರದ ಸಂಸದನಾಗಿದ್ದ ಪ್ರಜ್ವಲ್ ರೇವಣ್ಣ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬೆದರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ಲೋಕಸಭಾ ಚುನಾವಣೆ ವೇಳೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಸುಮಾರು 15 ಸಾವಿರಕ್ಕೂ ಅಧಿಕ ಫೋಟೋ ಮತ್ತು ವಿಡಿಯೋಗಳು ಪೆನ್‌ಡ್ರೈವ್ ಮೂಲಕ ಸಾರ್ವಜನಿಕರಿಗೆ ಹಂಚಿಕೆ ಆಗಿದ್ದವು. ಸಾವಿರಾರು ಮಹಿಳೆಯರನ್ನು ಪ್ರಜ್ವಲ್ ರೇವಣ್ಣ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಇದರ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾದಾಗ ಸಂತ್ರಸ್ತ ಮಹಿಳೆಯರಿಗೆ ಭದ್ರತೆ ನೀಡುವ ಭರಸವೆಯನ್ನೂ ನೀಡಿತ್ತು. ಈ ವೇಳೆ ಸಂತ್ರಸ್ತ ಮಹಿಳೆ ಹೊಳೆನರಸೀಪುರದಲ್ಲಿ ಅತ್ಯಾಚಾ*ರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದರು.
ಈ ಪ್ರಕರಣದ ಸ್ವರೂಪ ಗಂಭೀರ ಆಗುತ್ತಿದ್ದಂತೆ ವಿದೇಶದಿಂದ ಮರಳಿ ಬಂದ ಪ್ರಜ್ವಲ್ ರೇವಣ್ಣನನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ಇನ್ನು ಹಲವು ಬಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದುಮ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದಾರೆ. ಆದರೆ, ಸಂತ್ರಸ್ತ ಮಹಿಳೆಯನ್ನು ಅವರ ಮನೆಯವರು ಕಿಡ್ನಾಪ್ ಮಾಡಿದ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಪ್ರಭಾವಿ ಆಗಿದ್ದು, ಸಂತ್ರಸ್ತ ಮಹಿಳೆ ಮೇಲೆ ತಮ್ಮ ಪ್ರಭಾವ ಬೀರಬಹುದು ಎಂಬ ಕಾರಣದಿಂದ ಜಾಮೀನು ನಿರಾಕರಿಸುತ್ತಲೇ ಬಂದಿದೆ.
ಇದೀಗ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರ ಪೀಠವು ಜಾಮೀನು ಅರ್ಜಿಯನ್ನು ವಜಾ ಆದೇಶ ಹೊರಡಿಸಿದೆ.


