ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ನೇ ಜಯಂತ್ಯುತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಈ ಐದು ದಿನಗಳ ಮಹೋತ್ಸವವನ್ನು ಉದ್ಘಾಟಿಸಲಿದ್ದು, ರಾಜ್ಯಪಾಲರು ಹಾಗೂ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ.

ಮಳವಳ್ಳಿ (ಡಿ.16): ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ೧೦೬೬ನೇ ಜಯಂತ್ಯುತ್ಸವಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣ ಸಂಪೂರ್ಣ ಸಜ್ಜಾಗಿದ್ದು, ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣಕ್ಕೆಕ್ಕೆ ಇದೇ ಮೊದಲಬಾರಿಗೆ ರಾಷ್ಟ್ರಪತಿ ಅಗಮನ:

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣಕ್ಕೆ ಮೊದಲಬಾರಿಗೆ ರಾಷ್ಟ್ರಪತಿ ಅವರು ಆಗಮಿಸುತ್ತಿದ್ದು, ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳವಾರ ಮಧ್ಯಾಹ್ನ 3.15ಕ್ಕೆ ಮುರ್ಮು ಅವರು ಜಯಂತಿ ಮಹೋತ್ಸವ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ವಹಿಸುವರು. ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸುವರು. ಸಚಿವ ಎನ್.ಚಲುವರಾಯಸ್ವಾಮಿ ಪಾಲ್ಗೊಳ್ಳುವರು. 5 ದಿನ ನಿರಂತರವಾಗಿ ನಾಟಕಗಳ ಪ್ರದರ್ಶನ, ಉಪನ್ಯಾಸ, ವಾದ್ಯಗೋಷ್ಠಿ, ಸಂಗೀತ ಸಂಜೆ, ವಚನ ನೃತ್ಯರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಡಿ.21ರಂದು ಸಮಾರೋಪಗೊಳ್ಳುವುದು ಎಂದು ತಿಳಿಸಿದರು.

ಸುತ್ತೂರು ಮಠದ ಹಿನ್ನೆಲೆ

ಸುತ್ತೂರು ಪುರಾತನ ಮಠಗಳಲ್ಲಿ ಒಂದಾಗಿದ್ದು, ಜನಪರ ಕಾಳಜಿ, ಮೌಲ್ಯ, ಶೈಕ್ಷಣಿಕವಾಗಿ ಅನೇಕ ಸುಧಾರಣೆಗಳನ್ನು ಮಾಡುತ್ತಾ ಬಂದಿದೆ. ಆ ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯೂ ಸುತ್ತೂರು ಕ್ಷೇತ್ರದಿಂದ ಟಿ.ನರಸೀಪುರ, ಬೆಳಕವಾಡಿ ಮಾರ್ಗವಾಗಿ ಮಳವಳ್ಳಿ ತಲುಪಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ರಾಷ್ಟ್ರಪತಿ ಅವರ ಆಗಮನಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಾರೇಹಳ್ಳಿ ಹೆಲಿಪ್ಯಾಡ್‌ನಲ್ಲಿ 3 ಹೆಲಿಕಾಪ್ಟರ್‌ಗೆ ಜಾಗ ಗುರುತಿಸಲಾಗಿದೆ. ಭದ್ರತೆಗೆ ಇಬ್ಬರು ಎಸ್‌ಪಿ, 4 ಡಿವೈಎಸ್ಪಿ ಸೇರಿದಂತೆ 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.