ವಿಧಾನಸಭೆಯಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಸ್ವಪಕ್ಷೀಯ ಶಾಸಕ ಕುಣಿಗಲ್ ರಂಗನಾಥ್ ಅವರೇ ಸರ್ಕಾರದ ವಿರುದ್ಧ ಅಸಮಾಧಾನ.. ಈ ಚರ್ಚೆಯು ಮುಖ್ಯಮಂತ್ರಿ ಸ್ಥಾನದ ಜಟಾಪಟಿಯಾಗಿ ಮಾರ್ಪಟ್ಟಾಗ, 'ಐದು ವರ್ಷ ನಾನೇ ಸಿಎಂ' ಎಂದು ಸಿದ್ದರಾಮಯ್ಯ ವಿಪಕ್ಷಗಳಿಗೆ  ಸ್ವಪಕ್ಷೀಯರಿಗೆ ಸ್ಪಷ್ಟ ಸಂದೇಶ ರವಾನಿಸಿದರು.

ವಿಧಾನಸಭೆ (ಡಿ.16): ವಿಧಾನಸಭೆಯಲ್ಲಿ ಅನುದಾನ ಹಂಚಿಕೆ ವಿಚಾರ ಪ್ರಸ್ತಾಪಿಸಿ ಸ್ವಪಕ್ಷೀಯ ಶಾಸಕ ಕುಣಿಗಲ್ ರಂಗನಾಥ್ ಅವರೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಡೆಗೆ ಬೆರಳು ತೋರಿಸಿ, ಮಧುಗಿರಿಗೆ 100 ಕೋಟಿ ಅನುದಾನ ಕೊಡುತ್ತೀರಿ, ಆದರೆ ನನ್ನ ಕ್ಷೇತ್ರಕ್ಕೆ ಏಕೆ ಅನುದಾನ ನೀಡುತ್ತಿಲ್ಲ? ನನ್ನ ಕ್ಷೇತ್ರಕ್ಕೆ ಹಿಂದೆ ಮಂಜೂರಾಗಿದ್ದ ಒಂದು ಸಾವಿರ ಕೋಟಿ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂದು ಆಕ್ರೋಶದಿಂದ ಪ್ರಶ್ನಿಸಿದರು. ರಂಗನಾಥ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದು, ಅವರ ಈ ಪ್ರಶ್ನೆಯು ಸದನದಲ್ಲಿ ಸಿಎಂ ಸ್ಥಾನದ ಜಟಾಪಟಿಗೆ ಕಾರಣವಾಯಿತು.

ಐದು ವರ್ಷಗಳ ಕಾಲ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ

ಶಾಸಕ ರಂಗನಾಥ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನುದಾನ ಹೆಚ್ಚು ಕಡಿಮೆಯಾಗಿದ್ದರೆ ಪರಿಶೀಲಿಸೋಣ, ಯಾರಿಗೂ ಅನುದಾನ ಕಡಿತ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.

ಈ ವೇಳೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಧ್ಯಪ್ರವೇಶಿಸಿ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟ ಕಾರಣದಿಂದ ರಂಗನಾಥ್‌ ಅವರಿಗೆ ಉರಿಯುತ್ತಿದೆ ಎಂದು ಲೇವಡಿ ಮಾಡಿದರು. ಇದಕ್ಕೆ ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ, 'ಐದು ವರ್ಷ ನಾವೇ ಇರುತ್ತೇವೆ. ಜನರು 140 ಶಾಸಕರನ್ನು ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವೇ ಇರುತ್ತೇವೆ, 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಮುಂದೆಯೂ ನಿಮಗೆ (ಬಿಜೆಪಿಗೆ) ಜನ ಅವಕಾಶ ಕೊಡಲ್ಲ' ಟಾಂಗ್ ಕೊಟ್ಟರು. ಈ ವೇಳೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಸಹ '140 ಶಾಸಕರು ಸಪೋರ್ಟ್ ಮಾಡಿದ್ದಾರೆ. ಅದಕ್ಕೆ ಐದು ವರ್ಷ ನಾನೇ ಅಂತಿದ್ದಾರೆ' ಎಂದು ಸಿಎಂ ಪರ ನಿಂತರು.

'ಉರಿತಿರೋದಕ್ಕೆ ಉಪ್ಪಾಕಬೇಡಿ': ಸಿಎಂ-ವಿಪಕ್ಷಗಳ ನಡುವೆ ವಾಕ್ಸಮರ

ಶಾಸಕ ರಂಗನಾಥ್ ಆಕ್ರೋಶದಿಂದ ಹೇಳುತ್ತಿದ್ದಾರೆ ಎಂಬ ಅಶೋಕ್ ಹೇಳಿಕೆಗೆ, 'ಉರಿತೀರೋದಕ್ಕೆ ಉಪ್ಪು ಹಾಕಬೇಡ' ಎಂದ ಸಿಎಂ, ತಕ್ಷಣ ಅಶೋಕ್, 'ಹಾಗಾದರೆ ಉರಿಯುತ್ತಿದೆಯೇ?' ಎಂದು ಲೇವಡಿ ಮಾಡಿದರು. 'ಅದು ಗಾದೆ ಮಾತು ಕಣಯ್ಯ' ಎಂದ ಸಿಎಂ ಮಾತಿಗೆ, ಸುನಿಲ್ ಕುಮಾರ್ 'ಗಾದೆ ಮಾತೋ.. ಮನಸ್ಸಿನ ಮಾತೋ?' ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ ಮಾತನಾಡಿ, 'ನೀವು ಎಷ್ಟೇ ಉಪ್ಪಾಕಿದರೂ, ನಮ್ಮ ಶಾಸಕರು ಐದು ವರ್ಷ ಇರಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವೇ ಇರುತ್ತೇವೆ' ಎಂದು ಖಚಿತಪಡಿಸಿದರು.

ಯತ್ನಾಳ್ 'ಎಷ್ಟು ಸೀಟು ಅನ್ನೋದು ಮುಖ್ಯ ಅಲ್ಲ, ಐದು ವರ್ಷಗಳ ಕಾಲ ಸಿಎಂ ಆಗೋದು ಮುಖ್ಯ' ಎಂದು ಕೆಣಕಿದಾಗ, ಸಿದ್ದರಾಮಯ್ಯ ಸ್ಪಷ್ಟವಾಗಿ, 'ನಾನೇ ಮುಖ್ಯಮಂತ್ರಿ, ಈಗಲೂ ನಾನೇ ಮುಖ್ಯಮಂತ್ರಿ' ಎಂದು ಘೋಷಿಸಿದರು. ಸುನಿಲ್ ಕುಮಾರ್ ಮತ್ತೆ ಎದ್ದು ನಿಂತು 'ಮುಂದೆಯೂ ನಾನೇ ಮುಖ್ಯಮಂತ್ರಿ ಅಂತ ಹೇಳಿ' ಎಂದು ಕಾಲೆಳೆದರು.

ಹೈಕಮಾಂಡ್ ಮೇಲೆ ನಂಬಿಕೆ: ಸಿಎಂ ಸಿದ್ದರಾಮಯ್ಯ

ಚರ್ಚೆಯ ಕೊನೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಅಧಿಕಾರದ ಕುರಿತು ತೀವ್ರ ವಾಕ್ಸಮರ ನಡೆಯಿತು. 'ನಮ್ಮಲ್ಲಿ ಹೈಕಮಾಂಡ್ ಇದೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ಜನ ಆಶೀರ್ವಾದ ಮಾಡಿದ್ದಾರೆ. ಬಿಜೆಪಿಯವರಿಗೆ ಒಮ್ಮೆಯೂ ಆಶೀರ್ವಾದ ಮಾಡಿಲ್ಲ' ಎಂದ ಸಿಎಂ ಸಿದ್ದರಾಮಯ್ಯ. ಇದಕ್ಕೆ ಸುನಿಲ್ ಕುಮಾರ್, '2028ಕ್ಕೆ ಜನ ಆಶೀರ್ವಾದ ಮಾಡುತ್ತಾರೆ' ಎಂದು ತಿರುಗೇಟು ನೀಡಿದರು. ಕುಣಿಗಲ್ ರಂಗನಾಥ್ ಅವರ ಅನುದಾನದ ಪ್ರಶ್ನೆಯಿಂದ ಆರಂಭವಾದ ಈ ಚರ್ಚೆಯು ಸದನದಲ್ಲಿ ಮುಖ್ಯಮಂತ್ರಿ ಸ್ಥಾನದ ಜಟಾಪಟಿಯೊಂದಿಗೆ ಅಂತ್ಯವಾಯಿತು.