ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ 'ನರೇಗಾ' ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ 5 ಕೋಟಿ ಮಾನವ ದಿನಗಳನ್ನು ಕಡಿತಗೊಳಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರು (ಡಿ.16): ಕಳೆದ ಮೂರು ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಮಹಾತ್ಮ ಗಾಂಧಿ ನರೇಗಾ' ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಮಾನವ ದಿನಗಳ ಸಂಖ್ಯೆಯನ್ನ 5 ಕೋಟಿ ಮಾನವ ದಿನಗಳನ್ನು ಕಡಿತಗೊಳಿಸಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೇಂದ್ರ ಸರ್ಕಾರವು ದೇಶದಾದ್ಯಂತ ಉದ್ಯೋಗ ವಂಚಿತರಾಗಿ ವಲಸೆ ಹೋಗುತ್ತಿದ್ದ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ಕೊಡುವ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (Mahatma Gandhi NREGA) ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ನೀಡಲು ಹಾಗೂ ದುಡಿಮೆಗೆ ತಕ್ಕಂತೆ ದಿನಗೂಲಿ ಕೊಡುವುದಕ್ಕೆ ಮುಂದಾಯಿತು. ಈ ಯೋಜನೆಯು ಹಲವು ವರ್ಷದಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದ್ದ ಮಾನ ದಿನಗಳ ಕೆಲಸವನ್ನು ಬರೋಬ್ಬರಿ 5 ಕೋಟಿ ಮಾನವ ದಿನದ ಕೆಲಸ ಕಡಿತಗೊಳಿಸಿದೆ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕಳೆದ ಮೂರು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ‘ಮಹಾತ್ಮ ಗಾಂಧಿ ನರೇಗಾ’ ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಮಾನವ ದಿನ ಗಳ ಸಂಖ್ಯೆಯನ್ನ ಗಣನೀಯವಾಗಿ ಕಡಿತಗೊಳಿಸಿದೆ.
2023-24ರ ಅವಧಿಯಲ್ಲಿ : 14 ಕೋಟಿಗಳಷ್ಟಿದ್ದ ಮಾನವ ದಿನಗಳ ಸಂಖ್ಯೆಯಿತ್ತು.
2024-25ರ ಸಾಲಿನಲ್ಲಿ : 13 ಕೋಟಿಗೆ ಇಳಿಸಲಾಯಿತು, ನಂತರ
2025-26ರ ಸಾಲಿನಲ್ಲಿ : ಇದೀಗ9 ಕೋಟಿ ಮಾನವ ದಿನಗಳಿಗೆ ಇಳಿಸಲಾಗಿದೆ. ಈ ಮೂಲಕ ಕಳೆದ 3 ವರ್ಷಗಳಲ್ಲಿ ಒಟ್ಟು 5 ಕೋಟಿ ಮಾನವ ದಿನಗಳನ್ನು ಕರ್ನಾಟಕ ರಾಜ್ಯಕ್ಕೆ ನಿರಾಕರಿಸಲಾಗಿದೆ ಎಂದು ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯದ ಕುರಿತು ಆಕ್ರೋಶ ಹೊರಹಾಕಿದ್ದಾರೆ.
ಈ ಯೋಜನೆ ಬಡಜನರ ಔದ್ಯೋಗಿಕ ಹಕ್ಕು:
ಕಳೆದ ಮೂರು ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯವೊಂದಲ್ಲೇ ಬರೊಬ್ಬರಿ 80.25 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯಡಿ ಉದ್ಯೋಗ ಒದಗಿಸಲಾಗಿದೆ. ಈ ಪೈಕಿ 25.63 ಲಕ್ಷ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿದ್ದು, 9.48 ಲಕ್ಷ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ. ಇಡೀ ರಾಜ್ಯದಲ್ಲಿ 2023ರಿಂದ ಇಂದಿನವರೆಗೆ ಒಟ್ಟು ₹21,411 ವೆಚ್ಚದಲ್ಲಿ 15.94 ಲಕ್ಷಕ್ಕೂ ಹೆಚ್ಚು ಗ್ರಾಮಿಣ ಆಸ್ತಿಗಳನ್ನು ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂತಹ ಕ್ರಾಂತಿಕಾರಕ ಯೋಜನೆಯನ್ನ, ಬಡಜನರ ಔಧ್ಯೋಗಿಕ ಹಕ್ಕಿನ ಆಧಾರಿತ ಕಾರ್ಯಕ್ರವನ್ನಕೇಂದ್ರ ಸರ್ಕಾರದ ಬೆರಳೆಣಿಕೆ ಅಧಿಕಾರಿಗಳ ಮರ್ಜಿಯ ಆಧಾರಿತ ಕಾರ್ಯಕ್ರಮವನ್ನಾಗಿ ಬದಲಿಸಲು ಹೊರಟಿರುವುದು ಅಕ್ಷಮ್ಯ ಅಪರಾಧವೇ ಹೌದು. ಮಹಾತ್ಮ ಗಾಂಧಿ ಹೆಸರನ್ನಷ್ಟೇ ಅಲ್ಲದೇ, ಅವರ 'ಸ್ವರಾಜ್ಯ'ದ ಯೋಚನೆಯನ್ನೂ ಹೊಸಕಿಹಾಕಲು ಹೊರಟಿರುವ ಮೋದಿ ಸರ್ಕಾರದ ಬಡ ಜನ ವಿರೋಧಿ ಕ್ರಮದ ವಿರುದ್ಧವಾಗಿ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಹೋರಾಟಕ್ಕೂ ಮುಂದಾಗಲಿದೆ' ಎಂದು ತಿಳಿಸಿದ್ದಾರೆ.
ಬಡವನ್ನು ಕಂಡರೆ ಮೋದಿ ಅಸಹ್ಯ ಪಡ್ತಾರೆ:
ಮಹಾತ್ಮ ಗಾಂಧಿ ನರೇಗಾ ಹೆಸರು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು, ಕಳೆದ 11 ವರ್ಷಗಳಲ್ಲಿ ಮೋದಿ ಸರಕಾರ ಬಡವರಿಗೆ ಒಂದು ಯೋಜನೆ ಕೊಟ್ಟಿಲ್ಲ. ಯುಪಿಎ ಸರಕಾರ ಬಡವರಿಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಜಾರಿ ಮಾಡಿತ್ತು. ಇದು ಬರೀ ಯೋಜನೆ ಅಲ್ಲ ಕಾಯ್ದೆಯಾಗಿತ್ತು. ಮನ್ ರೇಗಾದಿಂದ ಸಾಮಾನ್ಯ ಜನರಿಗೆ ಕೂಲಿ ಸಿಗುತ್ತಿತ್ತು. ಮೋದಿ ಮನರೇಗಾ ವಿರುದ್ಧ ಭಾಷಣ ಮಾಡಿದ್ದರು. ಈಗ ಸಂಪೂರ್ಣವಾಗಿ ಕಾರ್ಯಕ್ರಮವನ್ನೇ ಮುಗಿಸಲು ಹೊರಟಿದ್ದಾರೆ. ಮಹಾತ್ಮ ಗಾಂಧಿ ಹೆಸರು ಇವರಿಗೆ ಸಹಿಸೋದು ಕಷ್ಟ. ಹಾಗಾಗಿಯೇ ಯೋಜನೆ ಹೆಸರು ಬದಲಿಸಿದ್ದಾರೆ. ಬಡವರನ್ನು ಕಂಡರೆ ಅಸಹ್ಯವಾಗಿ ನೋಡ್ತಾರೆ. ಹೀಗಾಗಿ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಮಾಡ್ತೇವೆ ಎಂದು ಹೇಳಿದರು.


