ರಾಜ್ಯ ಸರ್ಕಾರದ 1000 ದಿನಗಳ ಆಡಳಿತ ಪೂರ್ಣಗೊಂಡಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕ ಇಲಾಖೆಯ ಸಾಧನೆಗಳನ್ನು ಹಂಚಿಕೊಂಡಿದ್ದಾರೆ. ಗಿಗ್ ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಶ್ರಮಿಕರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಮತ್ತು ಭವಿಷ್ಯದ ಗುರಿಗಳ ಬಗ್ಗೆ ವಿವರಿಸಿದ್ದಾರೆ.
1000 ದಿನಗಳನ್ನು ಯಶಸ್ವಿ ಆಡಳಿತದೊಂದಿಗೆ ರಾಜ್ಯಸರ್ಕಾರ ಪೂರ್ಣಗೊಳಿಸಿದೆ. ಅದರಲ್ಲೂ ಶ್ರಮಯೋಗಿಗಳ ತೋಳುಗಳಿಗೆ ಶಕ್ತಿ ನೀಡುವ ಹತ್ತಾರು ಉಪಕ್ರಮಗಳನ್ನು ಜಾರಿ ಮಾಡಿದ ಶ್ರೇಯ ರಾಜ್ಯಸರ್ಕಾರದ್ದು. ರಾಜ್ಯದಲ್ಲಿನ ಎಲ್ಲಾ ವರ್ಗದ ಕಾರ್ಮಿಕರ ಅಭ್ಯುದಯಕ್ಕಾಗಿ ಹಲವು ರಚನಾತ್ಮಕ ಯೋಜನೆಗಳನ್ನು ಈ ಅವಧಿಯಲ್ಲಿ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಈ ಸಾವಿರ ದಿನಗಳಲ್ಲಿ ಕರ್ನಾಟಕದ ಕಾರ್ಮಿಕ ಇಲಾಖೆ ಸಾಧಿಸಿರುವ ಮೈಲುಗಲ್ಲುಗಳು ಅನೇಕ. ಈ ಮೈಲುಗಲ್ಲಿನ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೂಲಂಕಷವಾಗಿ ತಮ್ಮ ಅಭಿಪ್ರಾಯಗಳನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.
1. ಸರ್ಕಾರದ ಸಾವಿರ ದಿನಗಳ ಆಡಳಿತವನ್ನು ನೀವು ಒಟ್ಟಾರೆ ಹೇಗೆ ಮೌಲ್ಯಮಾಪನ ಮಾಡುತ್ತೀರಿ?
ನಮ್ಮ ಪಕ್ಷದ ನಾಯಕತ್ವ ಹಾಗೂ ಚುನಾವಣಾ ಪೂರ್ವದಲ್ಲಿ ಪಕ್ಷ ನೀಡಿದ ಭರವಸೆಗಳ ಮೇಲೆ ವಿಶ್ವಾಸವಿಟ್ಟು ಜನ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದರು. ದೊಡ್ಡ ಮಟ್ಟದ ಬಹುಮತದಿಂದ ಅಧಿಕಾರಕ್ಕೆ ಬಂದ ಸರ್ಕಾರ ನಮ್ಮದು. ಆದ್ದರಿಂದ ಅವರ ಆಶೋತ್ತರಗಳಿಗೆ ಅನುಗುಣವಾಗಿ ಮುನ್ನಡೆಯುತ್ತಿದೆ. ಸಾವಿರ ದಿನಗಳ ಸಾಧನೆ ಶ್ರೇಯ ಎಲ್ಲವೂ ನಾಡಿನ ಜನರಿಗೆ ಸಲ್ಲಬೇಕು. ಈ ಸಾವಿರ ದಿನಗಳಲ್ಲಿ ನಮ್ಮ ಸರ್ಕಾರ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿದೆ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಗ್ಯಾರಂಟಿಗಳನ್ನು ಕಾಲಕಾಲಕ್ಕೆ ಜಾರಿ ಮಾಡಿದೆ. ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಗುರುತಿಸಿಕೊಂಡಿರುವುದೇ ಉತ್ತಮ ಆಡಳಿತದಿಂದ. ಯಾವುದೇ ಸರ್ಕಾರ ಜನರಿಗೆ ಪೂರಕವಾಗಿ ಸ್ಪಂದಿಸುತ್ತಿದೆ, ಅವರ ಬೇಕು ಬೇಡಗಳನ್ನು ಪೂರೈಸುತ್ತಿದೆ ಎಂದರೆ ಅದಕ್ಕಿಂತ ಮಿಗಿಲಾದುದು ಬೇರೆನಿದೆ. ಜನರಿಗೆ ಪೂರಕವಾದ ಉಪ ಕ್ರಮಗಳು, ಕಟ್ಟುನಿಟ್ಟಿನ ಆಡಳಿತದ ಮೂಲಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಬಡವರು, ಹಿಂದುಳಿದವರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಪ್ರಾಶಸ್ತ್ಯ ನೀಡುತ್ತಾ ಬರಲಾಗಿದೆ.
2 ಕಾರ್ಮಿಕರ ಕಲ್ಯಾಣಕ್ಕಾಗಿ ಈ ಅವಧಿಯಲ್ಲಿ ಕೈಗೊಂಡ ಪ್ರಮುಖ ಯೋಜನೆಗಳು ಯಾವುವು?
ರಾಜ್ಯದಲ್ಲಿನ ಎಲ್ಲಾ ವರ್ಗದ ಕಾರ್ಮಿಕರ ಅಭ್ಯುದಯಕ್ಕಾಗಿ ಹಲವು ರಚನಾತ್ಮಕ ಯೋಜನೆಗಳನ್ನು ಈ ಅವಧಿಯಲ್ಲಿ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ನಮ್ಮ ಸರ್ಕಾರದ ಕಾರ್ಮಿಕ ಕಲ್ಯಾಣದ ಯೋಜನೆಗಳು ಇಡೀ ದೇಶದಲ್ಲೇ ಅಗ್ರ ಪಂಕ್ತಿಯಲ್ಲಿ ಗುರುತಿಸಿಕೊಂಡಿವೆ.
ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ (ಕ್ಷೇಮಾಭಿವೃದ್ಧಿ) ಕಾಯ್ದೆ, ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಕ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ಕಾಯ್ದೆ, ಕರ್ನಾಟಕ ರಾಜ್ಯ ಪತ್ರಿಕಾ ವಿತರಕ ಕಾರ್ಮಿಕರ ಅಪಘಾತ ಹಾಗೂ ಆರೋಗ್ಯ ಸಹಾಯ ನಿಧಿ, 100 ಹೈಟೆಕ್ ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ, ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯ, ಶ್ರಮಿಕ ವಸತಿ ಶಾಲೆಗಳ ಆರಂಭಕ್ಕೆ ಮುನ್ನುಡಿ, ಧಾರವಾಡ ಮತ್ತು ಮೈಸೂರಿನಲ್ಲಿ ಕೌಶಲ್ಯ ಕೇಂದ್ರಗಳ ಸ್ಥಾಪನೆಗೆ ಕ್ರಮ, ಅಂಬೇಡ್ಕರ್ ಕಾರ್ಮಿಕ ಸೇವಾಕೇಂದ್ರ, ಅಂಬೇಡ್ಕರ್ ಸಹಾಯಹಸ್ತ ಯೋಜನೆ, ನಕಲಿ ಕಾರ್ಮಿಕ ಕಾರ್ಡ್ ರದ್ಧತಿ, ಕಡ್ಡಾಯ ಉಪಧನ ಕಾಯ್ದೆ ಜಾರಿ, ಇಎಸ್ ಐ ಆಸ್ಪತ್ರೆಗಳ ಉನ್ನತೀಕರಣ, ಪರಿಷ್ಕೃತ ಕನಿಷ್ಠ ವೇತನ, ಹೊರಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಸಮಿತಿ ರಚನೆ (ಬೀದರ್ ಮಾದರಿ), ವೈಜ್ಞಾನಿಕ ಸೆಸ್ ಸಂಗ್ರಹ, ಆಶಾದೀಪ ಯೋಜನೆ ಹೀಗೆ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳ ಮೂಲಕ ಶ್ರಮಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.
3. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸರ್ಕಾರ ನೀಡಿದ ನೆರವು ಮತ್ತು ಭದ್ರತೆ ಬಗ್ಗೆ ವಿವರಿಸಬಹುದೇ?
ಸಂಘಟಿತ ಕಾರ್ಮಿಕರಿಗೆ ಈವರೆಗೆ ಹಲವಾರು ಸೌಲಭ್ಯಗಳು ದೊರೆಯುತ್ತಿದ್ದವು. ವಿಶೇಷವಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೂ ಆದ್ಯತೆ ನೀಡಲಾಗಿದೆ. ಅವರಿಗಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ, ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಜಾರಿ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಮಂಡಳಿ ರಚನೆಯ ಪ್ರಕ್ರಿಯೆಗಳು ಆರಂಭವಾಗಿವೆ. ಇ-ಕಾಮರ್ಸ್ ಪ್ಲಾಟ್ ಫಾರಂ ವಹಿವಾಟಿನ ಮೇಲೆ ಕಲ್ಯಾಣ ಶುಲ್ಕವನ್ನು ವಿಧಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಅಸಂಘಟಿತ ವಲಯದಲ್ಲಿ ದುಡಿಯುವ ಗಿಗ್ ಕಾರ್ಮಿಕರ ಭದ್ರತೆಗೆ ಸಾಮಾಜಿಕ ಭದ್ರತೆ ಒದಗಿಸಲು ಇದರಿಂದ ಅನುಕೂಲವಾಗಲಿದೆ. ಇನ್ನು ಕರ್ನಾಟಕ ರಾಜ್ಯ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಮಸೂದೆ ಜಾರಿ ಮಾಡಲಾಗಿದೆ. ಇದು ದೇಶದಲ್ಲೇ ಪ್ರಥಮ ಎಂಬುದೇ ಹೆಮ್ಮೆ. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಅಪಘಾತ ಮತ್ತು ಆರೋಗ್ಯ ಸಹಾಯನಿಧಿ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಸಹ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಜಾರಿ ಮಾಡಲಾಗಿದೆ.
4. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ ಸಾಧನೆಗಳನ್ನು ನೀವು ಹೇಗೆ ವಿವರಿಸುತ್ತೀರಿ?
ಹತ್ತಾರು ಅಭಿವೃದ್ಧಿ ಯೋಜನೆಗಳ ಜಾರಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ಸರ್ಕಾರ ಆದ್ಯತೆ ನೀಡಿದೆ. ನಮ್ಮ ಸರ್ಕಾರ ಘೋಷಣೆ ಮಾಡಿದ ಯುವನಿಧಿ ಗ್ಯಾರಂಟಿ ಅಸಂಖ್ಯಾತ ಯುವಜನರಲ್ಲಿ ಆತ್ಮವಿಶ್ವಾಸ ತುಂಬಿದೆ. ಇದಲ್ಲದೆ ರಾಜ್ಯದ ಯುವಕರಲ್ಲಿ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಸಲುವಾಗಿ ಆನ್ ಜಾಬ್ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಕಾರ್ಮಿಕ ಇಲಾಖೆ ನೀಡುವ ಕನಿಷ್ಠ ವೇತನದ ಪ್ರಕಾರ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತದೆ. ಇದಲ್ಲದೆ ಧಾರವಾಡ ಮತ್ತು ಮೈಸೂರಿನಲ್ಲಿ ಅತ್ಯಾಧುನಿಕ ಕೌಶಲ್ಯ ಕೇಂದ್ರಗಳ ಸ್ಥಾಪನೆಗೆ ಕಾರ್ಮಿಕ ಇಲಾಖೆ ಮುಂದಾಗಿದೆ. ಇಲ್ಲಿ ಹಲವಾರು ಉದ್ಯೋಗಗಳಿಗೆ ವಿಶ್ವದರ್ಜೆಯ ತರಬೇತಿ ನೀಡಲಾಗುವುದು. ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಮುಂದುವರಿಯದೇ ಅವರದೇ ಆಸಕ್ತಿಯ ಕ್ಷೇತ್ರದಲ್ಲಿ ತರಬೇತಿ ಪಡೆದು ಉದ್ಯೋಗ ಪಡೆಯುವಂತಾಗಬೇಕು ಎಂಬ ಸದುದ್ದೇಶವನ್ನು ಈ ಯೋಜನೆ ಇಟ್ಟುಕೊಂಡಿದೆ. ಯುವಕರಿಗೆ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಒದಗಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ವಿವಿಧ ತರಬೇತಿ ನೀಡಲಾಗುತ್ತಿದೆ. ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಿ, ಮುಂದಿನ ವರ್ಷಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯ ಗುರಿಯನ್ನು ಸರ್ಕಾರ ಹೊಂದಿದೆ. ಗ್ರಾಮೀಣ ಉದ್ಯಮಿಗಳಿಗೆ ಹೊಸ ಉದ್ಯೋಗ ಆರಂಭಿಸಲು ಸಾಲದ ಮೇಲೆ ಸಹಾಯಧನ ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರು ನವೋದ್ಯಮ ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.
5. ಮಹಿಳಾ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗಾಗಿ ತೆಗೆದುಕೊಂಡ ವಿಶೇಷ ಕ್ರಮಗಳು ಯಾವುವು?
ರಾಜ್ಯದ ಮಹಿಳಾ ಕಾರ್ಮಿಕರಾಗಿ ನಮ್ಮ ಇಲಾಖೆಯ ಇತ್ತೀಚೆಗೆ ಮಹತ್ವದ ಕ್ರಮವನ್ನು ಜಾರಿ ಮಾಡಿತು. ಅದುವೇ ಋತುಚಕ್ರ ರಜೆ ನೀತಿ. ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ರಜೆ ನೀಡಲಾಗುತ್ತಿದೆ. ವರ್ಷಕ್ಕೆ 12 ರಜೆಯನ್ನು ಪಡೆಯುವ ಸೌಲಭ್ಯ ಮಹಿಳಾ ಕಾರ್ಮಿಕರಿಗೆ ಒದಗಿಸಲಾಗಿದೆ. ಇಡೀ ದೇಶದಲ್ಲೇ ಸಮಗ್ರವಾಗಿ ಇಂತಹ ಸೌಲಭ್ಯವನ್ನು ನೀಡಿದ ಕೀರ್ತಿ ನಮ್ಮ ಕರ್ನಾಟಕ ಸರ್ಕಾರದ್ದು. ಕೆಲವು ರಾಜ್ಯಗಳಲ್ಲಿ ಕೇವಲ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮಾತ್ರವೇ ಈ ರಜೆ ನೀಡಲಾಗುತ್ತಿತ್ತು. ಆದರೆ ನಮ್ಮಲ್ಲಿ ಖಾಸಗಿ ಮತ್ತು ಸರ್ಕಾರಿ ಉದ್ಯೋಗಿಗಳಿಗೆ ಈ ರಜೆ ಲಭ್ಯವಿದೆ. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ 18 ರಿಂದ 52 ವಯೋಮಾನದ ಎಲ್ಲಾ ಖಾಯಂ/ಗುತ್ತಿಗೆ/ ಹೊರಗುತ್ತಿಗೆ ಮಹಿಳಾ ನೌಕರರು ಈ ರಜೆ ಪಡೆಯಬಹುದು.
ಇನ್ನು ವಲಸೆ ಕಾರ್ಮಿಕರಿಗಾಗಿ ನಮ್ಮ ಇಲಾಖೆ ಹಲವಾರು ಸೌಲಭ್ಯಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾಗಿ ತಾತ್ಕಾಲಿಕ ವಸತಿ ಸಮುಚ್ಚಯಗಳು. ಕೆಲಸಕ್ಕಾಗಿ ಊರಿಂದೂರಿಗೆ ವಲಸೆ ಬರುವ ಕಾರ್ಮಿಕರಿಗೆ ಈ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ರಾಜ್ಯದ ವಿವಿಧೆಡೆ ನಿರ್ಮಿಸಿದ್ದ ಇಂತಹ ವಸತಿ ಸಮುಚ್ಚಯಗಳನ್ನು ಲೋಕಾರ್ಪಣೆ ಮಾಡಲಾಗಿದ್ದು, ಇನ್ನು ಹಲವು ಕಡೆ ನಿರ್ಮಾಣ ಹಂತದಲ್ಲಿವೆ ಇವುಗಳಲ್ಲಿ ಕಾರ್ಮಿಕರು ಅಡುಗೆ ಮಾಡಲು ಅನುಕೂಲವಾಗುವಂತೆ Dormitory ಯಲ್ಲಿ ಸುಸಜ್ಜಿತವಾದ ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಿಸಿ ನೀರಿಗಾಗಿ ಸೋಲಾರ್ ಪ್ಯಾನಲ್‌ಗಳು, Dormitory ಗಳಲ್ಲಿ 02 ಹಂತದ ಬಂಕರ್ ಬೆಡ್ ಗಳನ್ನು ನೀಡಲಾಗುತ್ತಿದೆ.
6. . ಮುಂದಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯ ಪ್ರಮುಖ ಗುರಿಗಳು ಮತ್ತು ಯೋಜನೆಗಳು ಯಾವುವು?
ಖಾಸಗಿ ವಲಯಗಳಲ್ಲಿ ವಿಶೇಷಚೇತನರಿಗೆ ಮೀಸಲಾತಿ ಒದಗಿಸುವ ಕರ್ನಾಟಕ ಉದ್ಯೋಗ ಮತ್ತು ಶೈಕ್ಷಣದಲ್ಲಿ ವಿಕಲಚೇತನರ ಹಕ್ಕುಗಳ ಮಸೂದೆ ಮತ್ತು ಕರ್ನಾಟಕ ಮನೆಕೆಲಸದ ಕಾರ್ಮಿಕ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕವನ್ನೂ ಜಾರಿಗೆ ತರಲು ಉದ್ದೇಶಿಸಲಾಗಿದೆ. ಗೃಹ ಕಾರ್ಮಿಕರ ಕಲ್ಯಾಣಕ್ಕೂ ಯೋಜನೆಗಳನ್ನೂ ರೂಪಿಸಲಾಗುತ್ತಿದೆ.
ಕಾರ್ಮಿಕರ ಕಲ್ಯಾಣಕ್ಕಾಗಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡುವ ಜೊತೆಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗುವುದು. ನಮ್ಮ ಇಲಾಖೆಯ ಎಲ್ಲಾ ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳು ಬೆಂಬಲ ಮತ್ತು ಸಹಕಾರ ನೀಡುತ್ತಾ ಬಂದಿದ್ದಾರೆ. ಇಲಾಖೆಯ ಅಧಿಕಾರಿಗಳೂ ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
7. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮ ಸರ್ಕಾರ ಆದ್ಯತೆ ನೀಡಿದೆ ಅಂತ ನಿಮಗೆ ಅನ್ನಿಸುತ್ತಿದೆಯೇ?
ಹೌದು ಎಲ್ಲಾ ಕ್ಷೇತ್ರಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಗ್ಯಾರಂಟಿಗಳನ್ನು ಜಾರಿ ಮಾಡುವುದರ ಜೊತೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಸಮಗ್ರವಾಗಿ ಸರಿಯಾದ ಸಮಯಕ್ಕೆ ಅನುಷ್ಠಾನ ಮಾಡಲಾಗುತ್ತಿದೆ. ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಆದ್ಯತೆ ನೀಡಲಾಗಿದೆ. ಆದ್ಯತಾ ವಲಯಗಳಿಗೆ ಹೆಚ್ಚು ಗಮನ ಹರಿಸಲಾಗಿದೆ.
8. ಗ್ಯಾರಂಟಿಗಳಿಂದಾಗಿ ಅನುದಾನ ಕೊರತೆ ಇದೆ ಎಂಬ ಆರೋಪ ಇದೆಯಲ್ಲ?
ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಿದ್ದನ್ನು ಸಹಿಸಲಾಗದ ವಿರೋಧಪಕ್ಷಗಳು ಇಂತಹ ಆರೋಪ ಮಾಡುತ್ತಿವೆ. ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಗ್ಯಾರಂಟಿಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನೆ ಮಾಡಿದ್ದರು. ಆದರೆ ನಮ್ಮ ಸರಕಾರ ಹೇಳಿದಂತೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿತು. ಅದರೊಂದಿಗೆ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡಿತು. ಶಾಸಕರಿಗೆ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಗ್ಯಾರಂಟಿಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ.



