ಕರ್ನಾಟಕದಲ್ಲಿ ತಾಪಮಾನ ತೀವ್ರವಾಗಿ ಕುಸಿದಿದ್ದು, ಬೀದರ್‌ನಲ್ಲಿ 7.4 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಈ ತೀವ್ರ ಚಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಿಗೆ ಶೀತ ಅಲೆಯ ಮುನ್ಸೂಚನೆ ನೀಡಿದೆ.
ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಕುಸಿಯುತ್ತಿದ್ದು, ರಾಜ್ಯದಲ್ಲಿ ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಅತ್ಯಂತ ಕಡಿಮೆ ಕನಿಷ್ಠ ತಾಪಮಾನ ಬೀದರ್‌ನಲ್ಲಿ ದಾಖಲಾಗಿದ್ದು, 7.4 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಕುಸಿದಿದೆ. ಈ ತೀವ್ರ ಚಳಿಯಿಂದಾಗಿ ಬೀದರ್ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೈ ಕೊರೆಯುವ ಚಳಿಯಿಂದ ಜನರು ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಇಲಾಖೆ ಡಿಸೆಂಬರ್ 17ರವರೆಗೆ ವಿಪರೀತ ಚಳಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ವೃದ್ಧರು ಮತ್ತು ಚಿಕ್ಕ ಮಕ್ಕಳು ಅಗತ್ಯವಿಲ್ಲದೆ ಮನೆಯಿಂದ ಹೊರಬರಬಾರದೆಂದು ಎಚ್ಚರಿಕೆ ನೀಡಿದೆ. ತೀವ್ರ ಚಳಿಯ ಪರಿಣಾಮವಾಗಿ ವಾಕಿಂಗ್, ಯೋಗ ಸೇರಿದಂತೆ ದಿನನಿತ್ಯದ ಚಟುವಟಿಕೆಗಳಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.
ಖಾಲಿ ಖಾಲಿಯಾದ ವಾಕಿಂಗ್ ಟ್ರ್ಯಾಕ್‌ಗಳು, ಸ್ಟೇಡಿಯಂಗಳು
ಸಾಮಾನ್ಯವಾಗಿ ಜನಸಂದಣಿ ಕಾಣುತ್ತಿದ್ದ ಬೀದರ್ ನಗರದ ಪ್ರಮುಖ ರಸ್ತೆಗಳು, ಐತಿಹಾಸಿಕ ತಾಣಗಳು, ವಾಕಿಂಗ್ ಟ್ರ್ಯಾಕ್‌ಗಳು ಹಾಗೂ ಸ್ಟೇಡಿಯಂಗಳು ಇದೀಗ ಬಹುತೇಕ ಖಾಲಿಯಾಗಿವೆ. ಕೆಲವೇ ಜನರು ಮಾತ್ರ ಸ್ವೇಟರ್, ಗ್ಲೌಸ್, ಟೋಪಿ ಧರಿಸಿ, ಇಡೀ ದೇಹವನ್ನು ಮುಚ್ಚಿಕೊಂಡು ಹೊರಗೆ ಬರುತ್ತಿದ್ದಾರೆ.
ತೀವ್ರ ಚಳಿಯಿಂದ ಆರೋಗ್ಯ ಸಮಸ್ಯೆಗಳ ಆತಂಕ
ಕನಿಷ್ಠ ತಾಪಮಾನ ತೀವ್ರವಾಗಿ ಕುಸಿದಿರುವುದರಿಂದ ಹೃದಯಾಘಾತ, ಅಲರ್ಜಿ, ಅಸ್ತಮಾ, ನೆಗಡಿ, ಕೆಮ್ಮು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಭೀತಿ ಎದುರಾಗಿದೆ. “ಮೈ ಕೊರೆಯುವ ಚಳಿ ನಮ್ಮನ್ನು ಭಯಭೀತರನ್ನಾಗಿ ಮಾಡಿದೆ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಕಿ ಹಾಗೂ ಬಿಸಿ ನೀರಿಗೆ ಮೊರೆ ಹೋದ ಜನತೆ
ಬೀದರ್ ಜಿಲ್ಲೆಯ ಗಲ್ಲಿ ಗಲ್ಲಿಗಳಲ್ಲೂ ಜನರು ಬೆಂಕಿ ಹಚ್ಚಿಕೊಂಡು ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಬಿಸಿ ನೀರಿಗಾಗಿ ಜನರು ಸಾಲುಗಟ್ಟಿ ನಿಂತಿರುವುದು ಸಾಮಾನ್ಯ ದೃಶ್ಯವಾಗಿದೆ. ತೀವ್ರ ಚಳಿಯ ಪರಿಣಾಮವಾಗಿ ಬೆಂಕಿ ಹಾಗೂ ಹಾಟ್ ವಾಟರ್‌ಗಳೇ ಜನರ ರಕ್ಷಣೆಯಾಗಿದೆ.
ಬ್ರಿಮ್ಸ್ ಆಸ್ಪತ್ರೆಯಲ್ಲೂ ಚಳಿ ಎಫೆಕ್ಟ್
ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ಬಂದ ಬಡ ರೋಗಿಗಳು ಹಾಗೂ ಅವರ ಸಂಬಂಧಿಕರು ಕೂಡ ಚಳಿಯಿಂದ ತತ್ತರಿಸಿದ್ದಾರೆ. ಆಸ್ಪತ್ರೆಯ ಮುಂಭಾಗದ ಗೇಟ್ ಬಳಿ ಜನರು ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಿಸಿ ನೀರು ಸಿಗದೇ ರೋಗಿಗಳು ಹಾಗೂ ಸಂಬಂಧಿಕರು ಸಂಕಷ್ಟ ಅನುಭವಿಸುತ್ತಿದ್ದು, ಆಸ್ಪತ್ರೆಯ ಹೊರಗಿರುವ ಅಂಗಡಿಗಳಲ್ಲಿ ಬಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ. ಬೇರೆ ಬೇರೆ ಗ್ರಾಮಗಳಿಂದ ಬಂದ ರೋಗಿಗಳು ಸರತಿ ಸಾಲಿನಲ್ಲಿ ನಿಂತು ಬಿಸಿ ನೀರನ್ನು ಪಡೆದು, ಮುಖ ತೊಳೆಯುವ ಮೂಲಕ ಸ್ವಲ್ಪ ಸಮಾಧಾನ ಪಡೆಯುತ್ತಿದ್ದಾರೆ. ಬೆಂಕಿಯಿಂದ ಕಾಯಿಸಿಕೊಂಡು, ಬಿಸಿ ನೀರು ಪಡೆದು ಜನರು ಸ್ವಲ್ಪ ರಿಲೀಫ್ ಅನುಭವಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮೈ ಕೊರೆಯುವ ಚಳಿ
ರಾಜ್ಯಾದ್ಯಂತ ಚಳಿ ತೀವ್ರವಾಗುತ್ತಿದ್ದು, ಹವಾಮಾನ ಇಲಾಖೆ ಒಟ್ಟು 17 ಜಿಲ್ಲೆಗಳಿಗೆ ಶೀತ ಅಲೆ ಮುನ್ಸೂಚನೆ ನೀಡಿದೆ. ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಶೀತ ಅಲೆ ವಿಸ್ತರಿಸುವ ಸಾಧ್ಯತೆ ಇದೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ದಟ್ಟ ಮಂಜು ಹಾಗೂ ರಣಭೀಕರ ಚಳಿ ಆವರಿಸುವ ಸೂಚನೆ ನೀಡಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಚಳಿ ದಾಖಲಾಗುವ ಸಾಧ್ಯತೆ ಇದೆ. ಅದೇ ರೀತಿ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಅತೀವ ಚಳಿ ದಾಖಲಾಗುವ ಸಾಧ್ಯತೆ ಇದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ‘ಕೂಲ್ ಕೂಲ್’
ಇತ್ತ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಚಳಿಯಿಂದ ನಡುಗುತ್ತಿದೆ. ಲಾಲ್‌ಬಾಗ್‌ನಲ್ಲಿ ಚಳಿ ನಡುವೆಯೂ ಕೆಲವರು ವಾಕಿಂಗ್ ಮಾಡುತ್ತಿರುವುದು ಕಂಡುಬಂದರೂ, ವಾಕಿಂಗ್ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕಳೆದ ಎರಡು–ಮೂರು ದಿನಗಳಿಂದ ಬೆಂಗಳೂರಿನಲ್ಲಿ ವಿಪರೀತ ಚಳಿ ಮುಂದುವರಿದಿದ್ದು, ಇನ್ನೂ ಐದು ದಿನಗಳ ಕಾಲ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


